ಬಿಗ್ಬಾಸ್ ಮನೆಯಲ್ಲಿ ನೊಂದವರ ಸಂಘ: ಯಾರು ಯಾರಿಗೆ ಯಾವ್ಯಾವ ಪೋಸ್ಟ್? ಬಿದ್ದೂ ಬಿದ್ದೂ ನಕ್ಕ ಕಿಚ್ಚ ಸುದೀಪ್!
ಬಿಗ್ಬಾಸ್ ಮನೆಯಲ್ಲಿ ಶುರುವಾಯ್ತು ನೊಂದವರ ಸಂಘ: ಯಾರು ಯಾರಿಗೆ ಯಾವ್ಯಾವ ಪೋಸ್ಟ್ ಸಿಕ್ಕಿದೆ ನೋಡಿ.
ಇಷ್ಟು ದಿನ ಕಿತ್ತಾಟ ನಡೆಯುತ್ತಿದ್ದ ಬಿಗ್ಬಾಸ್ ಮನೆಯಲ್ಲಿ ಇದೀಗ ನೊಂದವರ ಸಂಘ ಶುರುವಾಗಿದೆ. ಎರಡು ಗುಂಪುಗಳ ನಡುವೆ ಕೆಲ ದಿನಗಳಿಂದ ಭಾರಿ ಜಗಳ ನಡೆದಿತ್ತು. ಟಾಸ್ಕ್ ಹೆಸರಿನಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ದೌರ್ಜನ್ಯ ಮಾಡುವುದೂ ನಡೆದಿತ್ತು. ಅದೇ ಇನ್ನೊಂದೆಡೆ ಗುಂಪುಗಾರಿಕೆಯಿಂದ ಸ್ಪರ್ಧಿಗಳ ನಡುವೆ ವೈಷಮ್ಯ ಹೆಚ್ಚಿತ್ತು. ಇದೀಗ ಸ್ವಲ್ಪ ವಾತಾವರಣ ತಿಳಿಗೊಂಡಿದೆ. ಅದರಲ್ಲಿಯೂ ತುಕಾಲಿ ಸಂತೋಷ್ ಸ್ವಲ್ಪ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿಯೇ ಶುರುವಾಗಿರುವುದು ನೊಂದವರ ಸಂಘ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ತುಕಾಲಿ ಸಂತೋಷ್ ಅವರಿಗೆ ಕೆಲವೊಂದು ಪ್ರಶ್ನೆ ಕೇಳಿದ್ದಾರೆ. ಅದರಲ್ಲಿ ಒಂದು ನೊಂದರ ಸಂಘದ ಸ್ಥಾಪನೆ. ನೊಂದವರ ಸಂಘದಲ್ಲಿ ಇರುವವರ ಪೈಕಿ ಯಾರಿಗೆ ಯಾವ ಸ್ಥಾನ ಎಂದು ಸುದೀಪ್ ಕೇಳಿದ್ದಾರೆ. ಅದಕ್ಕೆ ತುಕಾಲಿ ಸ್ಥಾನವನ್ನು ನೀಡಿದ್ದು, ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ವರ್ಣನೆ ಮಾಡಿ, ಉಳಿದ ಸ್ಪರ್ಧಿಗಳ ಜೊತೆ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ.
ಇದರ ಪ್ರೊಮೋ ರಿಲೀಸ್ ಆಗಿದೆ. ಇದರಲ್ಲಿ ತುಕಾಲಿ ಸಂತೋಷ್ ಉತ್ತರ ನೀಡಿದ್ದಾರೆ. ಈ ನೊಂದವರ ಸಂಘಕ್ಕೆ ಸೇರಲು ಇಷ್ಟಪಡದೇ ಇದ್ದರೂ ಸಹ ಕಾರ್ತಿಕ್ ಅವರನ್ನು ಸಂಘದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಸಂಘಕ್ಕೆ ಹೊಸದಾಗಿ ಕಾರ್ತಿಕ್, ಪ್ರತಾಪ್ ಮತ್ತು ತನಿಷಾ ಸೇರಿಕೊಂಡಿದ್ದಾರೆ. ಸಂಘದ ಎಲ್ಲ ಸದಸ್ಯರನ್ನೂ ತುಕಾಲಿ ಅವರು ತಮ್ಮ ಸಂಘಕ್ಕೆ ಬರ ಮಾಡಿಕೊಂಡಿದ್ದಾರೆ. ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಇನ್ನಿತರ ಸದಸ್ಯರನ್ನು ಆಯ್ಕೆ ಮಾಡಿ ಅವರಿಗೆ ಸ್ಥಾನ ನೀಡಿ ಗೌರವಿಸಲಾಗಿದೆ. ಹಾಗಿದ್ದರೆ ಯಾರ್ಯಾರಿಗೆ ಯಾವಾಗ ಪಟ್ಟ ಎಂದು ನೋಡುವುದಾದರೆ, ‘ನೊಂದವರ ಸಂಘಕ್ಕೆ ಕಾರ್ತಿಕ್ ಅಧ್ಯಕ್ಷ ಎಂದಿದ್ದಾರೆ ತುಕಾಲಿ ಸಂತೋಷ್. ಅದಕ್ಕೆ ಅವರು ನೀಡಿರುವ ಕಾರಣ ಏನೆಂದರೆ, ನಮ್ಮ ಗುಂಪಲ್ಲಿ ಜಾಸ್ತಿ ನೊಂದಿರುವವನು ಅವನೇ ಎಂದರು.
ಬಿಗ್ಬಾಸ್ ಮಜಾ ಮಾಡ್ತಾವ್ರೆ ಬಾಸು.... 'ಸಮ್ಥಿಂಗ್ ಸ್ಪೆಷಲ್' ಎನ್ನುತ್ತಲೇ ಹೊಸ ಪ್ರೊಮೋ ಬಿಡುಗಡೆ!
ಇನ್ನು, ವರ್ತೂರು ಸಂತೋಷ್ ಉಪಾಧ್ಯಕ್ಷರಂತೆ. ಏಕೆಂದರೆ ಅವ್ರು ಮಾತನಾಡಿದ್ರೂ ಅತ್ತಂತೆ ಕಾಣುತ್ತೆ ಎನ್ನುವ ಮೂಲಕ ಹಾಸ್ಯದ ಚಟಾಕಿ ಹರಿಸಿದ್ದಾರೆ ತುಕಾಲಿ. ಇನ್ನು ಕಾರ್ಯದರ್ಶಿ ಸ್ಥಾನ ಪ್ರತಾಪ್ಗೆ. ಇದಕ್ಕೆ ಕಾರಣ ನೀಡಿದ ತುಕಾಲಿ, ತಾವು ಯಾವ ಗುಂಪಿಗೂ ಸೇರಲ್ಲ ಅಂತ ಅತ್ತ ಕಡೆ ಹೋಗಿದ್ದರು. ಆ ಕಡೆ ಹೋದಮೇಲೆ ಅಪಾರವಾದ ನೋವು ಅನುಭವಿಸಿಕೊಂಡು ಮತ್ತೆ ವಾಪಸ್ ಆಗಿದ್ದಕ್ಕೆ ಈ ಸ್ಥಾನ ಎಂದಿದ್ದಾರೆ. ತುಕಾಲಿ ಮಾತಿಗೆ ಇತರ ಸ್ಪರ್ಧಿಗಳು ಮಾತ್ರವಲ್ಲದೇ, ಸುದೀಪ್ ಕೂಡ ನಕ್ಕರು.
ಇದೇ ವೇಳೆ, ಸುದೀಪ್ ಅವರು ಎಂದಿನಂತೆ ಈ ವಾರದಲ್ಲಿ ಸ್ವಲ್ಪ ಅತಿ ಎನಿಸುವಷ್ಟು ವರ್ತನೆ ತೋರಿದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸ್ನಾನ ಮಾಡಲು ಆದ ಜಗಳದಿಂದ ಹಿಡಿದು ಸಂಗೀತ ಆಡುತ್ತಿರುವ ಡಬಲ್ ಸ್ಟ್ಯಾಂಡರ್ಡ್ ಆಟದವರೆಗೂ ಎಲ್ಲವನ್ನೂ ಸುದೀರ್ಘವಾಗಿ ಚರ್ಚೆ ಮಾಡಿರುವ ಸುದೀಪ್ ಅವರು, ಗುಂಪು ಕಟ್ಟಿಕೊಂಡು ಆಡುತ್ತಿರುವವರಿಗೆ ಎಚ್ಚರಿಕೆಯನ್ನೂ ಕೊಟ್ಟರು. ಡ್ರೋನ್ ಪ್ರತಾಪ್ ಸ್ನಾನಕ್ಕೆ ಹೋದಾಗ ಸ್ನೇಹಿತ್ ಹಾಗೂ ವಿನಯ್ ನಡೆದುಕೊಂಡ ರೀತಿಯನ್ನೂ ಖಂಡಿಸಿದರು.