ʼಅಶ್ವಿನಿ ನಕ್ಷತ್ರʼ ನಟ ಜಯರಾಮ್ ಕಾರ್ತಿಕ್ ಹಾಗೂ ʼಲಕ್ಷ್ಮೀ ಬಾರಮ್ಮʼ ನಟಿ ಕವಿತಾ ಗೌಡ ಅವರ ಫೋಟೋವೊಂದು ವೈರಲ್ ಆಗ್ತಿದೆ.
ʼಸೂಪರ್ ಸ್ಟಾರ್ʼ ಜೆಕೆ ಹಾಗೂ ಲಚ್ಚಿಯ ದಶಕಗಳ ಹಿಂದಿನ ಫೋಟೋವೊಂದು ವೈರಲ್ ಆಗ್ತಿದೆ. ಹೌದು, ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ಕವಿತಾ ಗೌಡ, ʼಅಶ್ವಿನಿ ನಕ್ಷತ್ರʼ ಧಾರಾವಾಹಿ ನಟ ಜೆಕೆ ಇಬ್ಬರೂ ಪ್ರಶಸ್ತಿ ಪಡೆದುಕೊಂಡ ಫೋಟೋ ಈಗ ವೈರಲ್ ಆಗ್ತಿದೆ.
ಅಶ್ವಿನಿ ನಕ್ಷತ್ರ ಧಾರಾವಾಹಿ
ಅದು 2014ರ ಸಮಯ. ಮೊದಲ ಅನುಬಂಧ ಅವಾರ್ಡ್ಸ್ ನಡೆದಿತ್ತು. ಆಗ ಮೊದಲ ಜನಮೆಚ್ಚಿದ ನಾಯಕ - ಜೆಕೆ ( ಅಶ್ವಿನಿ ನಕ್ಷತ್ರ ), ಮೊದಲ ಜನಮೆಚ್ಚಿದ ನಾಯಕಿ - ಲಚ್ಚಿ ( ಲಕ್ಷ್ಮೀಬಾರಮ್ಮ )ಎಂದು ಖ್ಯಾತಿ ಪಡೆದಿದ್ದರು. ʼಅಶ್ವಿನಿ ನಕ್ಷತ್ರʼ ಧಾರಾವಾಹಿ ಮಾಡಿದ ಮೋಡಿ, ಕಮಾಲ್ ಒಂದೆರಡಲ್ಲ. ಜೆಕೆ ಹಾಗೂ ಮಯೂರಿ ಜೋಡಿಯನ್ನು ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಅದರಲ್ಲಿಯೂ ಜೆಕೆ ʼಹೆಂಡ್ತಿʼ ಅಂತ ಕರೆಯೋದನ್ನು ನೋಡಿ ಎಷ್ಟೋ ಹೆಂಗಸರು ತಮ್ಮ ಗಂಡನಿಗೆ ಹೆಂಡ್ತಿ ಅಂತ ಕರೆಯಿರಿ ಎಂದು ಒತ್ತಾಯ ಮಾಡಿದ್ದುಂಟಂತೆ. ಇದರ ಜೊತೆಗೆ ಜೆಕೆಯನ್ನು ನೋಡಿದಾಗೆಲ್ಲ ಕೆಲವರು ನಮಗೆ ಹೆಂಡ್ತಿ ಅಂತ ಕರೆಯಿರಿ ಎಂದು ಪೀಡಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಜೆಕೆ ನಟನೆ ನೋಡಿ ʼಜನ ಮೆಚ್ಚಿದ ನಾಯಕʼ ಎಂಬ ಪ್ರಶಸ್ತಿ ನೀಡಿ ಪುರಸ್ಕಾರ ಮಾಡಲಾಗಿತ್ತು.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಇನ್ನು ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ಲಚ್ಚಿ ಪಾತ್ರದಲ್ಲಿ ಕವಿತಾ ಗೌಡ ಕಾಣಿಸಿಕೊಂಡಿದ್ದರು. ಕವಿತಾ ಗೌಡಗೂ ಮುನ್ನ ಇನ್ನೋರ್ವ ನಟಿ ಈ ಧಾರಾವಾಹಿಯಲ್ಲಿ ನಟಿಸಿದ್ದರು. ಇನ್ನು ಕವಿತಾ ಗೌಡ ಅವರು ಹಳ್ಳಿ ಹುಡುಗಿ ಲಚ್ಚಿ ಪಾತ್ರಕ್ಕೆ ಜೀವನ ತುಂಬಿದ್ದರು. ತನ್ನ ಅಕ್ಕ ಗೊಂಬೆಗೋಸ್ಕರ ಲಚ್ಚಿ ಏನು ಬೇಕಿದ್ರೂ ಮಾಡ್ತಾಳೆ, ಲಚ್ಚಿ ಕಂಡ್ರೆ ಗೊಂಬೆಗೂ ಇಷ್ಟ. ಇವರಿಬ್ಬರ ಜೋಡಿ ವೀಕ್ಷಕರಿಗೂ ಇಷ್ಟ ಆಗಿದ. ಇದ್ದರೆ ಈ ಥರ ಅಕ್ಕ-ತಂಗಿ ಇರಬೇಕು ಎಂದು ಕೆಲವರು ಬಯಸಿದ್ದುಂಟು. ಲಚ್ಚಿ ಪಾತ್ರವನ್ನು ಸಾಕಷ್ಟು ಜನರು ಇಷ್ಟಪಟ್ಟಿದ್ದರು. ಹೀಗಾಗಿ ಇವರಿಗೆ ಜನಮೆಚ್ಚಿದ ನಾಯಕಿ ಪಟ್ಟ ನೀಡಲಾಗಿತ್ತು.
ಅಂದಹಾಗೆ ಈಗಾಗಲೇ ಅನುಬಂಧ ಅವಾರ್ಡ್ಸ್ ಪ್ರಶಸ್ತಿ ಕೊಡಲು ಆರಂಭಿಸಿ ದಶಕಗಳು ಕಳೆದಿವೆ. ಎಷ್ಟೊ ಜನಮೆಚ್ಚಿದ ನಾಯಕ, ನಾಯಕಿಯರು ಬಂದು ಹೋಗಿದ್ದಾರೆ. ಈಗ ನಟ ಜಯರಾಮ್ ಕಾರ್ತಿಕ್ ಅವರು ಸಿನಿಮಾದತ್ತ ಮುಖ ಮಾಡಿದರೆ, ಕವಿತಾ ಗೌಡ ಅವರು ಮಗನ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ.
