ಕಿರುತೆರೆ ನಿರೂಪಕಿ ಹಾಗೂ ನಟಿ ಅನುಶ್ರೀ, ಅಭಿಮಾನಿಯೊಬ್ಬರಿಂದ ಪುನೀತ್ ರಾಜ್‌ಕುಮಾರ್ ಅವರ ದಾರದಿಂದ ಮಾಡಿದ ಭಾವಚಿತ್ರವನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಅಪ್ಪುವಿನ ಅಪಾರ ಅಭಿಮಾನಿಯಾಗಿರುವ ಅನುಶ್ರೀ, ಈ ಅಮೂಲ್ಯ ಕಲಾಕೃತಿಯನ್ನು ತಮ್ಮ ಸಣ್ಣ ಮನೆಯಲ್ಲಿ ಎಲ್ಲಿಡಬೇಕೆಂದು ಚಿಂತಿಸುತ್ತಿದ್ದಾರೆ.
ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಸರಿಗಮಪ ಸಂಗೀತದ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ. ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2023ರಲ್ಲಿ ಅನುಶ್ರೀ ಅವರಿಗೆ ಹಲವಾರು ಪ್ರಶಸ್ತಿಗಳೂ ಸಂದಿವೆ. ಇವೆಲ್ಲಾ ಕಾರಣಗಳಿಂದ ನಟಿಗೆ ಸಹಜವಾಗಿಯೇ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಹೋದಲ್ಲಿ, ಬಂದಲ್ಲಿ ನಟಿಗೆ ಉಡುಗೊರೆಗಳ ಸುರಿಮಳೆಯೇ ಆಗುತ್ತದೆ.
ಇದೀಗ ಅನುಶ್ರೀ ಅವರು ತಮಗೆ ಸಿಕ್ಕಿರುವ ನಗುವಿನೊಡೆಯನ ಅಪರೂಪದ ಉಡುಗೊರೆಯೊಂದನ್ನು ಪರಿಚಯಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದು ಅಪ್ಪು ಅವರ ಫೋಟೋ. ಇದರ ವಿಶೇಷತೆ ಎಂದರೆ, ಇದನ್ನು ದಾರದಿಂದಲೇ ಮಾಡಲಾಗಿದೆ. ಅದ್ಭುತ ಕಲಾಕೃತಿ ಇದಾಗಿದೆ. ತಮ್ಮ ಮನೆ ತುಂಬಾ ಚಿಕ್ಕದು ಎನ್ನುತ್ತಲೇ ಪುನೀತ್ ರಾಜ್‌ಕುಮಾರ್ ಅವರ ಈ ಅಪರೂಪದ ಕಲಾಕೃತಿಯ ಉಡುಗೊರೆಯನ್ನು ಪರಿಚಯ ಮಾಡಿಸಿದ್ದಾರೆ. ಅಂದಹಾಗೆ, ಎಲ್ಲರನ್ನೂ ಅಗಲಿ ಹೋದ ನಟ ಪುನೀತ್ ರಾಜ್ ಕುಮಾರ್ ಅವರ ಅಸಂಖ್ಯ ಅಭಿಮಾನಿಗಳಲ್ಲಿ ಅನುಶ್ರೀ ಕೂಡ ಒಬ್ಬರು. ಪುನೀತ್ ಅವರು ಜೀವಂತ ಇರುವಾಗಲೂ ಅವರನ್ನು ಸ್ಮರಿಸಿಕೊಳ್ಳುತ್ತಲೇ, ಅವರ ಬಗ್ಗೆ ಅಭಿಮಾನದ ಮಾತುಗಳನ್ನು ಆಡುತ್ತಿದ್ದರು ಅನುಶ್ರೀ. ತಮ್ಮ ವೈಯಕ್ತಿಕ ಬದುಕಿನ ಮೇಲೆ ಅಪ್ಪು ಅವರು ಹೇಗೆ ಸೆಳೆದಿದ್ದಾರೆ, ತಮ್ಮ ವ್ಯಕ್ತಿತ್ವವನ್ನು ಹೇಗೆ ರೂಪಿಸಿದ್ದಾರೆ ಎಂದು ಹೇಳುತ್ತಿದ್ದರು.
ಈಗಲೂ ಪುನೀತ್ ಅವರನ್ನು ನೆನೆದು ಅನುಶ್ರೀ ಭಾವುಕರಾಗುವುದು ಇದೆ. ಅಪ್ಪು ತಮಗೆ ನೀಡಿದ ನೆರವು, ತುಂಬಿದ ಸ್ಪೂರ್ತಿಯ ಬಗ್ಗೆಯೂ ಅನುಶ್ರೀ ಪದೇ ಪದೇ ಹೇಳುತ್ತಾರೆ. ಅವರಿಗೆ ಅದೆಷ್ಟು ಮಟ್ಟಿನ ಅಭಿಮಾನ ಎಂದರೆ, ಅವರ ಯೂಟ್ಯೂಬ್ ಚಾನೆಲ್ನಲ್ಲಿ ಇರುವುದು ಅಪ್ಪು ಅವರ ಚಿತ್ರವೇ. ಮದುವೆಯ ಬಗ್ಗೆ ಕೆಲ ದಿನಗಳ ಹಿಂದೆ ಮಾತನಾಡಿದ್ದ ನಟಿ, ಪುನೀತ್ ಅವರ ಜನ್ಮ ದಿನದಂದೇ ಮದುವೆಯಾಗುವುದಾಗಿ ಪರೋಕ್ಷವಾಗಿ ಹಿಂಟ್ ಕೂಡ ಕೊಟ್ಟಿದ್ದರು.
ಕಳೆದ ಬಾರಿ ಅಪ್ಪು ಹುಟ್ಟುಹಬ್ಬದಂದು ಅನುಶ್ರೀ ಅವರು, ಪುನೀತ್ ಅವರು ಹಾಡಿದ್ದ ‘ನಿನ್ನ ಕಂಗಳ ಬಿಸಿಯ ಹನಿಗಳು’ ಹಾಡನ್ನು ತುಸು ಆಚೆ ಈಚೆ ಮಾಡಿ ಅಪ್ಪು ಅವರನ್ನು ಸ್ಮರಿಸಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ‘ನಮ್ಮ ಕಂಗಳ ಬಿಸಿಯ ಹನಿಗಳು ನೂರು ಬಾರಿ ಕೂಗಿವೆ, ನಿಮ್ಮ ನಗುವ ಮೊಗವ ಮೋಡಲು ಕೋಟಿ ಕಂಗಳು ಕಾದಿವೆ. ಮಿಸ್ ಯೂ ಸರ್, ನೀವಿಲ್ಲದೆ ಅಭಿಮಾನ ಇಲ್ಲ, ನೀವಿಲ್ಲದೆ ಅಭಿಮಾನಕೆ ಬೆಲೆ ಇಲ್ಲ, ನೀವಿಲ್ಲದ ಬದುಕಿಗೆ ಕಳೆ ಇಲ್ಲ…’ ಎಂದಿದ್ದರು. ಇದೀಗ ಅಭಿಮಾನಿಯೊಬ್ಬರು ನೀಡಿರುವ ಈ ಅಪರೂಪದ ಉಡುಗೊರೆಯನ್ನು ಪರಿಚಯಿಸಿದ್ದಾರೆ. ತಮ್ಮ ಮನೆಯಲ್ಲಿ ಜಾಗ ಚಿಕ್ಕದು ಇರುವ ಕಾರಣ, ಇದನ್ನು ಎಲ್ಲಿ ಇಡುವುದು ಎಂಬ ಬಗ್ಗೆ ಚಿಂತೆಯನ್ನೂ ವ್ಯಕ್ತಪಡಿಸಿದ್ದಾರೆ. ಕಮೆಂಟಿಗರು ಅಪ್ಪು ಅವರನ್ನು ನೆನಪಿಸಿಕೊಳ್ಳುವ ಜೊತೆಗೆ, ಅನುಶ್ರೀ ಅವರು ಇಷ್ಟೆಲ್ಲಾ ದುಡಿದರೂ ಚಿಕ್ಕ ಮನೆಯಲ್ಲಿ ಇದ್ದುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ.

