ಅಮೃತಧಾರೆಯಲ್ಲಿ ಮಾವನ ಪಾದವನ್ನೇ ತೊಳೆದ ಅಳಿಯ, ಗೌತಮ್ ನಡೆಗೆ ಜೈ ಎಂದ್ರ ಮಂದಿ!
ಮದುವೆಯಲ್ಲಿ ಮಾವ ಅಳಿಯನ ಪಾದ ತೊಳೆಯುವ ಪದ್ಧತಿ ಇದೆ. ಆದರೆ 'ಅಮೃತಧಾರೆ' ಸೀರಿಯಲ್‌ನಲ್ಲಿ ಗೌತಮ್ ತಾನೇ ಮಾವನ ಪಾದ ತೊಳೆದು ಮಾದರಿಯಾಗಿದ್ದಾನೆ.
ಅಮೃತಧಾರೆ (Amruthadhare serial) ಜೀ ಕನ್ನಡದಲ್ಲಿ (Zee kannada) ಪ್ರಸಾರವಾಗುತ್ತಿರೋ ಸೀರಿಯಲ್. ಇದರಲ್ಲಿ ಮದುವೆಯ ಮಹಾಸಂಚಿಕೆ ನಡೆದಿದೆ. ಇರೋ ಸಂಪ್ರದಾಯವನ್ನು ಇರೋ ಥರ ಆಚರಿಸಿದ್ರೆ ಅದೊಂದು ಅಪ್ಪ ನೆಟ್ಟ ಆಲದ ಮರಕ್ಕೆ ಸುತ್ತು ಹಾಕೋ ಥರ ಇರುತ್ತೆ ಅನ್ನೋದು ಕೆಲವರ ನಂಬಿಕೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋ ಸೀರಿಯಲ್‌ಗಳಲ್ಲಿ ಮೊದಲಿಂದಲೂ ಒಂದು ವಿಭಿನ್ನತೆ ಇದೆ. ಸಂಪ್ರದಾಯವನ್ನು ಮಾನವೀಯ ನೆಲೆಯಲ್ಲಿ ನೋಡೋ ರೀತಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಗಟ್ಟಿಮೇಳ ಸೀರಿಯಲ್‌ನಲ್ಲಿ ಗಂಡನಿಗೆ ಹೆಣ್ಣು ಪೂಜೆ ಮಾಡೋ ಹಬ್ಬದಲ್ಲಿ ಗಂಡನೇ ತನ್ನ ಪತ್ನಿಗೆ ಉಡುಗೊರೆ ನೀಡಿ ಆಕೆಯನ್ನು ಗೌರವಿಸುವ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದ್ದರು. ಅದಕ್ಕೆ ಸಾಕಷ್ಟು ಪ್ರಶಂಸೆ ಬಂದಿತ್ತು. ಇದೀಗ ಅದರ ಮುಂದಿನ ಭಾಗದಂತೆ ಮದುವೆಯ ಸಂಪ್ರದಾಯದಲ್ಲಿ ಹೊಸದೊಂದು ಸಂಪ್ರದಾಯ ಹುಟ್ಟುಹಾಕಲು ಮುಂದಾಗಿದ್ದಾರೆ.
ಅಮೃತಧಾರೆ ಸೀರಿಯಲ್‌ನಲ್ಲಿ ಇದೀಗ ಮದುವೆಯ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಹೀರೋ ಗೌತಮ್‌ನ ತಂಗಿ ಮಹಿಮಾಗೂ ಹೀರೋಯಿನ್ ಭೂಮಿಕಾ ತಮ್ಮ ಜೀವನ್‌ಗೂ ಮದುವೆ ಆಗಿದೆ. ಸಣ್ಣ ಗೊಂದಲ, ಇರಿಸುಮುರಿಸು ಹೊರತಾಗಿ ಇಬ್ಬರ ಮದುವೆ ಸುಖಾಂತ್ಯ ಕಂಡಿದೆ. ಇನ್ನೊಂದು ಕಡೆ ನಾಯಕ ಗೌತಮ್ ಮತ್ತು ನಾಯಕಿ ಭೂಮಿಕಾ ಮದುವೆ ನಡೆಯುತ್ತಿದೆ. ಗೌತಮ್ ನಲವತ್ತರ ಹರೆಯದ ಮಧ್ಯವಯಸ್ಕ. ಭೂಮಿಕಾಗೂ ಮೂವತ್ತೈದರ ಹರೆಯ. ವಯಸ್ಸಿನ ಕಾರಣಕ್ಕೆ ಇಬ್ಬರಲ್ಲೂ ಮೆಚ್ಯೂರಿಟಿ ಇದೆ. ಈ ಇಬ್ಬರ ಮದುವೆಯ ಸಂಭ್ರಮ ಇದೀಗ ಶುರುವಾಗಿದೆ. ಮದುವೆಗೂ ಮೊದಲೇ ದೊಡ್ಡ ಫಚೀತಿ ಎದುರಾಗಿದೆ. ಇವರ ಮದುವೆ ನಡೆಯೋ ಕಲ್ಯಾಣ ಮಂಟಪದಲ್ಲೇ ಮತ್ತೊಂದು ಮದುವೆ ನಡೀತಿದೆ. ಆ ಮದುವೆ ಮುಗಿದ ಬಳಿಕವೇ ಇವರ ಕಡೆಯವರಿಗೆ ಕಲ್ಯಾಣ ಮಂಟಪಕ್ಕೆ ಎಂಟ್ರಿ. ಬಿಲಿಯನೇರ್ ಬ್ಯುಸಿನೆಸ್‌ಮೆನ್ ಗೌತಮ್ ದಿವಾನ್‌ಗೆ ಹೀಗೂ ನಡೆಯಬಹುದು ಅನ್ನೋ ಕಲ್ಪನೆಯೂ ಇಲ್ಲ. ಇದೊಂಥರ ಮಧ್ಯಮ ವರ್ಗದ ಲೈಫ್‌ಸ್ಟೈಲ್ ಅನ್ನು ಹೇಳುವ ಹಾಗಿದೆ. ಇನ್ನೊಂದು ಕಡೆ ಕಲ್ಯಾಣ ಮಂಟಪಕ್ಕೆ ಬರುವ ದಾರಿಯಲ್ಲಿ ವೈಟ್ ಟಾಪಿಂಗ್ ನಡೆದು ದಾರಿ ಸಿಗದೇ ಒದ್ದಾಡುತ್ತಿರುವಾಗ ಮದು ಮಗಳು ಭೂಮಿಕಾನೇ ಚೌಲ್ಟ್ರಿ ಹೊರಬಂದು ಗೌತಮ್‌ನ ರಿಸೀವ್ ಮಾಡಿದ್ದಾಳೆ. ಯಾರನ್ನೋ ಕಳಿಸ್ತಾಳೆ ಅಂದುಕೊಂಡರೆ ಸ್ವತಃ ಭೂಮಿಕಾನೇ ಮದುಮಗಳ ಅವತಾರದಲ್ಲಿ ಬಂದಿರೋದನ್ನು ನೋಡಿ ಗೌತಮ್ ತಬ್ಬಿಬ್ಬಾಗಿದ್ದಾನೆ. ಈ ಟೈಮಲ್ಲಿ ಇಬ್ಬರೂ ಕಾಸು ಕೊಡದೇ ಜ್ಯೂಸ್ ಕುಡಿದ ಸನ್ನಿವೇಶವೂ ಮಜವಾಗಿ ಮೂಡಿ ಬಂದಿದೆ.
ಪುಣ್ಯವತಿ ಸೀರಿಯಲ್ ಮೂಲಕ ಮತ್ತೆ ಜೊತೆಯಾದ ಲಕ್ಷ್ಮೀ ಬಾರಮ್ಮದ ಗೊಂಬೆ, ಚಿನ್ನು
ಈ ನಡುವೆ ಮದುವೆಯಲ್ಲಿ ಗೌತಮ್ ಮಾದರಿ ಅನ್ನೋ ಥರ ನಡ್ಕೊಂಡಿದ್ದಾನೆ. ಎಲ್ಲಾ ಮದುವೆಗಳಲ್ಲೂ ಅಳಿಯನನ್ನು ಮಾವ ಕಾಲು ತೊಳೆದು ಬರಮಾಡಿಕೊಳ್ಳೋದು ರೂಢಿ. ಆದರೆ ಇಲ್ಲಿ ಗೌತಮ್ ಆ ಸಂಪ್ರದಾಯ ಮುರಿದಿದ್ದಾನೆ. ತಾನೇ ತನ್ನ ಕೈಯ್ಯಾರೆ ಮಾವನ ಕಾಲು ತೊಳೆದಿದ್ದಾನೆ. ಇಂಥಾ ಮನೋಭಾವದಿಂದ ಗೌತಮ್ ಸ್ವಂತ ಮಗನೇ ಆಗಿ ಬಿಟ್ಟಿದ್ದಾನೆ ಅಂತ ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಗೌತಮ್‌ನ ಈ ಸ್ವೀಟ್ ಗೆಶ್ಚರ್ ಎಲ್ಲ ವೀಕ್ಷಕರಿಗೂ ಇಷ್ಟವಾಗಿ ಬಿಟ್ಟಿದೆ. ಇದೊಂದು ಹೃದಯಕ್ಕೆ ಹತ್ತಿರವಾಗೋ ಕ್ಷಣ ಅಂತ ಅನೇಕರು ಹೇಳಿದ್ದಾರೆ. ಗೌತಮ್ ಸ್ವಭಾವ ಮೇಲ್ನೋಟಕ್ಕೆ ಸ್ವಲ್ಪ ರೂಡ್ ಅಂತ ಕೆಲವೊಮ್ಮೆ ಅನಿಸಿದರೂ ಆತನ ಒಳ ಮನಸ್ಸು ಬೆಣ್ಣೆಯಂತೆ ಮೃದು ಅನ್ನೋದನ್ನು ಈ ದೃಶ್ಯ ಕಟ್ಟಿಕೊಟ್ಟಿದೆ.
ಮನೆಹಾಳು ಪ್ರಸಂಗಗಳನ್ನು ತೋರಿಸೋ ಬದಲು ಇಂಥಾ ಒಳ್ಳೆತನ ತೋರಿಸಿದ್ರೆ ಎಷ್ಟು ಚೆನ್ನಾಗಿರುತ್ತೆ. ಜನ ಸೀರಿಯಲ್‌ನಿಂದ ಬಹಳ ಪ್ರಭಾವಿತರಾಗ್ತಾರೆ. ಸೀರಿಯಲ್‌ಗಳಲ್ಲಿ ಬರೀ ಮನೆಹಾಳು ಐಡಿಯಾಗಳು, ವಿಷ ಹಾಕೋ ಸನ್ನಿವೇಶಗಳನ್ನೆಲ್ಲ ತರೋ ಬದಲು ಹೀಗೊಂದು ಒಳ್ಳೆಯ ಮನಸ್ಸು ಇರಬಹುದು ಅನ್ನೋ ಸಾಧ್ಯತೆ ತಂದರೆ ಅದು ಎಲ್ಲರಿಗೂ ಮಾದರಿ ಆಗುತ್ತೆ ಅನ್ನೋದು ಈ ಸೀರಿಯಲ್ ನೋಡೋ ಜನರ ಮಾತು.
ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ, ಮಾವ ಸದಾಶಿವ್ ಪಾತ್ರದಲ್ಲಿ ಸಿಹಿಕಹಿ ಚಂದ್ರು, ಭೂಮಿಕಾ ಪಾತ್ರದಲ್ಲಿ ಛಾಯಾಸಿಂಗ್ ನಟಿಸಿದ್ದಾರೆ.
ಯಾವ ಕಾರಣಕ್ಕೂ ರಾಮ್‌ನ ಬಿಡ್ಬೇಡ; ಸೀತಾಗೆ ವಾರ್ನಿಂಗ್ ಕೊಟ್ಟ ಸೀರಿಯಲ್ ಆಂಟಿಗಳು!