ಅಂತರ್ಜಾತಿ ವಿವಾಹದಲ್ಲಿ ಹೆಂಡ್ತಿನೇ 'ಅನ್ನಪೂರ್ಣಿ' ಆಗ್ಬೇಕಾ? ಮೂಗು ಮುಚ್ಕೊಂಡು ಅಡುಗೆ ಅನಿವಾರ್ಯನಾ?
ಅಮೃತಧಾರೆ ಸೀರಿಯಲ್ನಲ್ಲಿ ಪತಿಗಾಗಿ ಭೂಮಿಕಾ ಪ್ರೀತಿಯಿಂದ ಮಾಂಸದಡುಗೆ ಮಾಡಿ ಬಡಿಸಿದರೆ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ!
ಬಹು ವಿವಾದಿತ ಅನ್ನಪೂರ್ಣಿ ಚಿತ್ರ ನೆನಪಿರಬಹುದು. ನಯನತಾರಾ ಅಭಿನಯದ ಈ ಚಿತ್ರ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರಲ್ಲಿ ಫುಡ್ ಜಿಹಾದ್ ಇದೆ ಎಂದು ಭಾರಿ ವಿರೋಧ ವ್ಯಕ್ತವಾಗಿತ್ತು. ಹೆಣ್ಣಿಗೆ ಅಡುಗೆ ಮನೆ ಎನ್ನುವುದೇ ಸರ್ವಸ್ವ ಅಲ್ಲ ಎನ್ನುವ ಆಶಯ ಈ ಚಿತ್ರದಲ್ಲಿ ಇದೆ ಎನ್ನುತ್ತಲೇ ಶ್ರೀರಾಮಚಂದ್ರ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿರುವ ಆರೋಪ ಈ ಚಿತ್ರ ಹೊತ್ತಿತು. ನಂತರ ಚಿತ್ರವನ್ನು ನೆಟ್ಫ್ಲಿಕ್ಸ್ನಿಂದಲೂ ತೆಗೆದುಹಾಕಲಾಯಿತು. ಇದರಲ್ಲಿ ಬ್ರಾಹ್ಮಣ ಹೆಣ್ಣೊಬ್ಬಳು ಚೆಫ್ ಆಗಲು ಹೊರಟವಳಿಗೆ ಮಾಂಸಾಹಾರವನ್ನು ಅನಿವಾರ್ಯವಾಗಿ ಮಾಡಿಸಲಾಗಿತ್ತು. ಮಾಂಸದ ಅಡುಗೆ ಮಾಡುವ ದೃಶ್ಯಗಳು ಈ ಪರಿಯ ವಿವಾದದ ಕಿಡಿ ಹೊತ್ತಿಸಿತ್ತು. ಈ ವಿಷಯವೇನೋ ತಣ್ಣಗಾಗಿದೆ. ಆದರೆ ಇದೀಗ ಅಮೃತಧಾರೆ ಸೀರಿಯಲ್ ಮೂಲಕ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ.
ಸೀರಿಯಲ್ ನೋಡುವವರಿಗೆ ತಿಳಿದಿರುವಂತೆ ಇದು ಮಧ್ಯವಯಸ್ಕರ ಮದುವೆಯ ವಿಷಯವನ್ನು ಒಳಗೊಂಡ ಸೀರಿಯಲ್. ಇದಾಗಲೇ ಈ ಸೀರಿಯಲ್ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಇವರಿಬ್ಬರ ನವಿರಾದ ಪ್ರೀತಿಗೆ ಪ್ರೇಕ್ಷಕರು ಮನಸೋತಿದ್ದಾರೆ. ಆದರೆ ಇಲ್ಲಿ ಹೀರೋ ಗೌತಮ್ಗೆ ನಾನ್ ವೆಜ್ ಎಂದರೆ ಪ್ರಾಣ, ಆದ್ರೆ ಭೂಮಿಕಾ ಮೊಟ್ಟೆ ಕೂಡ ತಿನ್ನದಷ್ಟು ಸಂಪ್ರದಾಯಸ್ಥಳು. ಆದರೆ ಗಂಡನಿಗೆ ನಾನ್ ವೆಜ್ ಪ್ರೀತಿ ಎಂದು ಇದಾಗಲೇ ಮೂಗು ಮುಚ್ಚಿಕೊಂಡು ಅಡುಗೆ ಮಾಡುವ ದೃಶ್ಯಗಳು ಹಲವಾರು ಬಾರಿ ಬಂದಿವೆ. ಇದೀಗ, ಸ್ನೇಹಿತೆ ಅಪರ್ಣಾ ಮನೆಗೆ ಈ ದಂಪತಿಯನ್ನು ಕರೆದಾಗ, ಭೂಮಿಕಾ ತಾನಾಗಿಯೇ ಅಪರ್ಣಂಗೆ ನಾನೇ ಇವತ್ತು ನಾನ್ ವೆಜ್ ಕುಕ್ ಮಾಡ್ತೀನಿ ಎನ್ನುತ್ತಾಳೆ. ಮೂಗು ಮುಚ್ಚಿಕೊಂಡು ಮಾಡುತ್ತಾಳೆ. ಅಂದ ಮಾತ್ರಕ್ಕೆ ಭೂಮಿಕಾಗೆ ನಾನ್ ವೆಜ್ ಮಾಡು ಎಂದು ಗೌತಮ್ ಎಂದಿಗೂ ಹೇಳಿಯೇ ಇಲ್ಲ. ಆದರೂ ಗಂಡನಿಗಾಗಿ ಅವಳು ಮಾಡುತ್ತಾಳೆ. ಇದು ಅವಳೇ ಮಾಡಿದ್ದು ಎಂದು ತಿಳಿಯದ ಗೌತಮ್, ಬಹಳ ಖುಷಿಯಿಂದ ಎಲ್ಲವನ್ನೂ ಮೆಲ್ಲುತ್ತಾನೆ. ಇದು ಕಥೆ.
ಅನ್ನಪೂರ್ಣಿ 'ಫುಡ್ ಜಿಹಾದ್': ಜೈ ಶ್ರೀ ರಾಮ್ ಎನ್ನುತ್ತಲೇ ಬಹಿರಂಗ ಕ್ಷಮಾಪಣಾ ಪತ್ರ ಬರೆದ ನಯನತಾರಾ..
ಈ ದೃಶ್ಯ ನೋಡುತ್ತಿದ್ದಂತೆಯೇ ಭಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಅಂತರ್ಜಾತಿ ವಿವಾಹದಲ್ಲಿ ಹೆಂಡ್ತಿನೇ 'ಅನ್ನಪೂರ್ಣಿ' ಆಗ್ಬೇಕಾ? ಮೂಗು ಮುಚ್ಕೊಂಡು ಅಡುಗೆ ಅನಿವಾರ್ಯನಾ ಎನ್ನುವ ರೀತಿಯಲ್ಲಿ ಚರ್ಚೆಯಾಗುತ್ತಿದೆ. ಇಲ್ಲಿ ಭೂಮಿಕಾ ತನ್ನಿಚ್ಛೆಯಂತೆ ಮಾಡಿರಬಹುದು. ಆದರೆ ಎಲ್ಲಾ ಸಂದರ್ಭಗಳಲ್ಲೂ ಹಾಗಲ್ಲ. ಹೆಚ್ಚಿನ ಮನೆಗಳಲ್ಲಿ, ಅದರಲ್ಲಿಯೂ ಈ ರೀತಿಯ ಅಂತರ್ಜಾತಿ ವಿವಾಹವಾದಾಗ, ಗಂಡನಿಗಾಗಿ ಹೆಣ್ಣು ಇವೆಲ್ಲಾ ಮಾಡುವ ಅನಿವಾರ್ಯತೆ ಎದುರಾಗುತ್ತಿದೆ. ಪ್ರೀತಿ, ಪ್ರೇಮ ಎಂದುಕೊಳ್ಳುವ ಸಮಯದಲ್ಲಿ ಗಂಡು ಹೆಣ್ಣಿಗಾಗಿಯಷ್ಟೇ ಹಾತೊರೆಯುತ್ತಾನೆ, ಕೊನೆಗೆ ಆಕೆಗಾಗಿ ತನ್ನ ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳಲು ರೆಡಿನೇಇರುವುದಿಲ್ಲ. ಹೆಂಡತಿಯೇ ಮಾಂಸದ ಅಡುಗೆಯನ್ನು ಕಷ್ಟಪಟ್ಟು ಕಲಿತು ಅವನಿಗಾಗಿ ಮೂಗು ಮುಚ್ಚಿಕೊಂಡು ಮಾಡುವ ಉದಾಹರಣೆಗಳಿವೆ ಎನ್ನುತ್ತಲೇ ಕೆಲವು ನೆಟ್ಟಿಗರು ತಾವು ನೋಡಿದ ಕೆಲವು ಘಟನೆಗಳನ್ನು ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ವಿವಾದಿತ ಅನ್ನಪೂರ್ಣ ಸಿನಿಮಾದ ಬಗ್ಗೆಯೂ ಪ್ರಸ್ತಾಪವಾಗಿದೆ. ಒಂದು ವೇಳೆ ಪತ್ನಿ ನಾನ್ ವೆಜಿಟೇರಿಯನ್ ಆಗಿದ್ದು, ಪತಿ ಸಸ್ಯಾಹಾರಿಯಾಗಿದ್ದರೆ ಸುಲಭದಲ್ಲಿ ಅವಳಿಗೆ ಅವಳ ಇಷ್ಟದ ಆಹಾರ ತಿನ್ನಲು ಗಂಡಸರು ಬಿಡುತ್ತಾರೆಯೇ ಎನ್ನುವುದು ಮತ್ತೆ ಕೆಲವರ ಪ್ರಶ್ನೆ.
ಸ್ವಲ್ಪ ವರ್ಷದ ಹಿಂದೆ ಧಾರವಾಹಿಗಳಲ್ಲಿ ಬರಿ ಹಾಲಬಾಯಿ, ಪಾಯಸ ಒತ್ತು ಶಾವಿಗೆ ಇಂತಹವನ್ನೇ ಡೈನಿಂಗ್ ಟೇಬಲ್ ಮೇಲೆ ಇಡುತ್ತಿರುವುದಾಗಿ ಮಾಂಸಾಹಾರಿಗಳು ಬೈದಾಡುತ್ತಿದರು. ಇದನ್ನು ಹೋಗಲಾಡಿಸಲೋ ಏನೋ, ಅಮೃತಧಾರೆ ಧಾರಾವಾಹಿನಲ್ಲಿ ಟೇಬಲ್ ತುಂಬಾ ಚಿಕನ್ ಬಿರಿಯಾನಿ ಜೊತೆ ಒಂದಿಷ್ಟು ಮಾಂಸದಡಿಗೆ ಬಂದೋಬಸ್ತಾಗಿ ಮಾಡಿದ್ದಾರೆ. ಆದರೆ ಮೊಟ್ಟೆನು ಕಂಡರಾಗದ ಹೆಂಡತಿ ಗಂಡನ ಪ್ರೀತಿಗೋಸ್ಕರ ಕಷ್ಟ ಪಟ್ಟುಕೊಂಡು ಮಾಂಸಹಾರ ತಯಾರಿಸುತ್ತಾಳೆ. ಇದು ಯಾವ ನ್ಯಾಯ ಎನ್ನುವುದು ಕೆಲವರ ಪ್ರಶ್ನೆ. ಅವಳು ಯಾರದೇ ಒತ್ತಡವಿಲ್ಲದೇ ಪ್ರೀತಿಗಾಗಿ ಮಾಡಿದ್ದರೆ ಅದರಲ್ಲಿ ನಿಮ್ಮ ತಕರಾರೇನು ಎನ್ನುವುದು ಮತ್ತೆ ಕೆಲವರ ಪ್ರತಿಕ್ರಿಯೆ. ಆದರೆ ಇಂದು ಸೀರಿಯಲ್ಗಳು ಜನರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿವೆ. ಅವಳು ಮಾಂಸದ ಅಡುಗೆ ಮಾಡಿ ಬಡಿಸಿದರೆ ನಿನಗೆ ಮಾಡಲು ಕಷ್ಟವೇನು ಎಂದು ಪತ್ನಿಯರ ಮೇಲೆ ಗಂಡಸರು ಒತ್ತಡ ಹಾಕುವ ಘಟನೆಗಳು ಸಾಕಷ್ಟು ನಡೆಯುತ್ತವೆ, ಸೀರಿಯಲ್ಗಳಿಂದ ಆಗಿರುವ ಅವಾಂತರಗಳು ಒಂದೆರಡಲ್ಲ ಎಂದು ನೆಟ್ಟಿಗರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸೀರಿಯಲ್ನಲ್ಲಿ ಗೌತಮ್ ಖುದ್ದಾಗಿ ಮಾಂಸಾಹಾರ ಬಿಟ್ಟಿದ್ದರೆ ಸ್ವಲ್ಪ ಹೊಟ್ಟೆನೂ ಕರಗುತ್ತಿತ್ತು ಎಂದು ಕೆಲವರು ತಮಾಷೆಯನ್ನೂ ಮಾಡಿದ್ದಾರೆ. ಒಟ್ಟಿನಲ್ಲಿ ಒಂದು ಸೀರಿಯಲ್ನ ದೃಶ್ಯ ಎಷ್ಟೊಂದು ವಾದ- ಪ್ರತಿವಾದಿಗಳಿಗೆ ಆಸ್ಪದ ಮಾಡಿಕೊಡುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ನೇರಪ್ರಸಾರದಲ್ಲಿ ನಟಿ ತಾರಾ ಮಾತು: ನಿವೇದಿತಾ-ಚಂದನ್ ಡಿವೋರ್ಸ್ ವಿಷಯ ಪ್ರಸ್ತಾಪ?