ನವದೆಹಲಿ (ಮೇ. 01)  80ರ ದಶಕದಲ್ಲಿ ಜನರನ್ನು ಮೋಡಿ ಮಾಡಿದ್ದ ರಾಮಾಯಣ ಧಾರಾವಾಹಿ, ಇದೀಗ ಮರು ಪ್ರಸಾರದ ವೇಳೆಯೂ ಹೊಸ ಇತಿಹಾಸ ಸೃಷ್ಟಿಸಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಡಿಡಿ ವಾಹಿನಿಯಲ್ಲಿ ರಾಮಾಯಣ ಧಾರಾವಾಹಿ ಮರು ಪ್ರಸಾರ ಆಗುತ್ತಿದ್ದು, ಏ.16ರಂದು ರಾತ್ರಿ 9 ಗಂಟೆಗೆ ಪ್ರಸಾರವಾದ ಕಂತನ್ನು 7.7 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಮೂಲಕ ಭಾರತವಷ್ಟೇ ಅಲ್ಲ, ವಿಶ್ವದಲ್ಲೇ ಅತಿ ಹೆಚ್ಚು ಜನರು ವೀಕ್ಷಿಸಿದ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಖಾಸಗಿ ವಾಹಿನಿಗಳ ಪೈಪೋಟಿಯ ಮಧ್ಯೆಯೂ ದೂರದರ್ಶನ ಅತಿ ಹೆಚ್ಚು ಮಂದಿ ವೀಕ್ಷಿಸುತ್ತಿರುವ ವಾಹಿನಿ ಎನಿಸಿಕೊಂಡಿದೆ. ಬಾರ್ಕ್ ರೇಟಿಂಗ್ಸ್‌ನ ಪ್ರಕಾರ ಏ.18ರಿಂದ ಏ.24ರ ಅವಧಿಯಲ್ಲಿ 163 ಕೋಟಿ ಸಲ ದೂರದರ್ಶನವನ್ನು ವೀಕ್ಷಣೆ ಮಾಡಲಾಗಿದೆ. ನಂತರದ ಸ್ಥಾನದಲ್ಲಿರುವ ಸನ್‌ ಟೀವಿಯನ್ನು 112 ಕೋಟಿ ಸಲ ವೀಕ್ಷಿಸಲಾಗಿದೆ.

ಬಾಲ್ಯದ ನೆನಪಿನ ಬುತ್ತಿ ಬಿಚ್ಚಿಟ್ಟ ರಾಮಾಯಣ

ಮಾ.28ರಿಂದ ದೂರದರ್ಶನದಲ್ಲಿ ರಾಮಾಯಣ ಮರು ಪ್ರಸಾರ ಆಗುತ್ತಿದ್ದು, ಹಿಂದಿಯಲ್ಲಿ ಅತಿ ಹೆಚ್ಚು ವೀಕ್ಷಿಸುತ್ತಿರುವ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮೊದಲ ದಿನದಂದು ಈ ಧಾರಾವಾಹಿಯನ್ನು 3.8 ಕೋಟಿ ಜನರು ವೀಕ್ಷಿಸಿದ್ದರು. ಮರುದಿನ ಮುಂಜಾನೆಯ ಕಂತನ್ನು 4 ಕೊಟಿ ಜನರು ಹಾಗೂ ರಾತ್ರಿಯ ಕಂತನ್ನು 5.1 ಕೋಟಿ ಜನರು ವೀಕ್ಷಿಸುವ ಮೂಲಕ ಒಂದೇ ದಿನದಲ್ಲಿ ರಾಮಾಯಣ ವೀಕ್ಷಕರ ಸಂಖ್ಯೆ 9.1 ಕೊಟಿಗೆ ಏರಿಕೆ ಆಗಿತ್ತು