ತುಳುನಾಡಿನಲ್ಲಿಯೂ ಹೆಸರು ಮಾಡಿ, ಕನ್ನಡ ಬಿಗ್ ಬಾಸ್ ಶೋ ಗೆದ್ದಿರುವ ರೂಪೇಶ್ ಶೆಟ್ಟಿ ಹಾಗೂ ಇಷ್ಟುದಿನಗಳ ಕಾಲ ಸುದ್ದಿ ನಿರೂಪಣೆ ಮಾಡುತ್ತಿದ್ದ ಜಾನ್ವಿ ಅವರು ನಾಯಕಿಯಾಗಿ ಪರಿಚಯಗೊಳ್ಳುತ್ತಿರುವ ʼಅಧಿಪತ್ರʼ ಸಿನಿಮಾ ಫೆಬ್ರವರಿ 7ಕ್ಕೆ ರಿಲೀಸ್ ಆಗ್ತಿದೆ. ಈ ಚಿತ್ರದ ಬಗ್ಗೆ ಕಲಾವಿದರು, ನಿರ್ದೇಶಕರು ಮಾತನಾಡಿದ್ದಾರೆ. ಪೂರ್ಣ ಸಂದರ್ಶನ ಇಲ್ಲಿದೆ...!
ಸಂದರ್ಶನ
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೀಗ ಹೊಸ ಎಂಟ್ರಿ ಆಗುವ ನಿರೀಕ್ಷೆ ಕಾಣುತ್ತಿದೆ. ಹೌದು, ʼಬಿಗ್ ಬಾಸ್ ಕನ್ನಡ 9ʼ ಟ್ರೋಫಿ ಪಡೆದಮೇಲೆ ರೂಪೇಶ್ ಶೆಟ್ಟಿ ಅವರು ಕನ್ನಡದಲ್ಲಿ ಹೀರೋ ಆಗಿ ʼಅಧಿಪತ್ರʼ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್, ಟ್ರೇಲರ್ ನೋಡಿ ಕನ್ನಡಕ್ಕೆ ಮತ್ತೊಂದು ಮಾಸ್ಟರ್‌ಪೀಸ್ ಚಿತ್ರ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಈ ಸಿನಿಮಾ ಫೆಬ್ರವರಿ 7ಕ್ಕೆ ರಿಲೀಸ್ ಆಗ್ತಿದೆ. ಈ ಚಿತ್ರದ ಬಗ್ಗೆ ನಟ ರೂಪೇಶ್ ಶೆಟ್ಟಿ, ಜಾನ್ವಿ, ಚಯನ್ ಶೆಟ್ಟಿ ಅವರು Asianet Suvarna ಜೊತೆ ಮಾತನಾಡಿದ್ದಾರೆ.
ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರೂಪೇಶ್ ಶೆಟ್ಟಿ!
ರೂಪೇಶ್ ಶೆಟ್ಟಿ ಅವರು ಮಾತನಾಡಿ, “ನಾನು ಬಿಗ್ ಬಾಸ್ ಶೋಗೆ ಮುನ್ನ ಮಾಡಿದ ಸಿನಿಮಾಗಳ ಬಗ್ಗೆ ಯಾರಿಗೂ ಗೊತ್ತಿಲ್ಲ. ಅಧಿಪತ್ರವೇ ಮೊದಲ ಸಿನಿಮಾ ಅಂತ ಕೆಲವರು ಅಂದುಕೊಂಡಿದ್ದಾರೆ. ಅಧಿಪತ್ರ ಸಿನಿಮಾದಲ್ಲಿ ತುಳುನಾಡಿನ ಸಂಸ್ಕೃತಿಯ ಜೊತೆಗೆ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಕಥೆ ಇಲ್ಲಿದೆ. ಬಿಗ್ ಬಾಸ್ ಆದ್ಮೇಲೆ ಕೆಲ ಸ್ಕ್ರಿಪ್ಟ್‌ಗಳು ಬಂತು, ಆದರೆ ನನಗೆ ಈಗ ಎಲ್ಲವನ್ನು ಒಪ್ಪಿಕೊಂಡು ಸಿನಿಮಾ ಮಾಡಲು ಇಷ್ಟ ಇರಲಿಲ್ಲ. ಅಧಿಪತ್ರ ಕಥೆ ಬಗ್ಗೆ ನಿರ್ದೇಶಕ ಚಯನ್ ಶೆಟ್ಟಿ ಅವರ ಸ್ಪಷ್ಟನೆ ಹೊಂದಿದ್ದಾರೆ, ಅದು ನನಗೆ ಇಷ್ಟವಾಗಿ ನಾನು ಈ ಸಿನಿಮಾ ಒಪ್ಪಿಕೊಂಡೆ. ಪೊಲೀಸ್ ಅಧಿಕಾರಿ ಆತ್ರೇಯ ಪಾತ್ರ ಮಾಡುತ್ತಿದ್ದೇನೆ, ನನ್ನ ಹತ್ತೊಂಭತ್ತು ಸಿನಿಮಾಗಳಲ್ಲಿ ಹದಿನೈದು ಸಿನಿಮಾ ಗಡ್ಡ ಇಟ್ಟುಕೊಂಡು ಮಾಡಿದ್ದೇನೆ. ಗಡ್ಡ ತೆಗೆದು ಈ ಚಿತ್ರದಲ್ಲಿ ನಟಿಸಿದ್ದೇನೆ. ಪೊಲೀಸ್ ಅಧಿಕಾರಿಯ ಜೀವನದಲ್ಲಿಯೂ ಒಂದು ಕಥೆ ಇರುತ್ತದೆ, ಇದರ ಜೊತೆಗೆ ಅವನು ಬೇರೆ ಒಗಟನ್ನು ಬಿಡಿಸಲು ಮುಂದಾಗ್ತಾನೆ. ನಮ್ಮೂರಿನ ಸಂಸ್ಕೃತಿ ಇಲ್ಲಿ ಇರೋದರಿಂದ ನನಗೆ ಈ ಸ್ಕ್ರಿಪ್ಟ್ ಇನ್ನಷ್ಟು ಹತ್ತಿರ ಆಯ್ತು” ಎಂದು ಹೇಳಿದ್ದಾರೆ.
'ಅಧಿಪತ್ರ' ಸಿನಿಮಾ ಬಗ್ಗೆ ಬಿಗ್ ಬಾಸ್ ಖ್ಯಾತಿ ರೂಪೇಶ್ ಶೆಟ್ಟಿ ಹೇಳಿದ್ದೇನು?
“ಅಧಿಪತ್ರ ಸಿನಿಮಾ ಮೇಲೆ ನನಗೆ ತುಂಬ ನಿರೀಕ್ಷೆಯಿದೆ. ಅಧಿಪತ್ರ ಅಂದ್ರೆ ವಾರೆಂಟ್ ಅಂತ ಅರ್ಥ. ಈ ಚಿತ್ರದಲ್ಲಿ ಪಾತ್ರಗಳ ಹೆಸರು ಕೂಡ ವಿಭಿನ್ನವಾಗಿದೆ. ಈ ಚಿತ್ರದ ಪಾತ್ರಗಳಿಗೂ, ಟೈಟಲ್‌ಗೂ ಸಂಬಂಧ ಇದೆ. ಈ ಸಿನಿಮಾದಲ್ಲಿ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ನನಗೆ ಈ ಸ್ಕ್ರಿಪ್ಟ್ ಮೇಲೆ ತುಂಬ ನಂಬಿಕೆಯಿದೆ” ಎಂದು ರೂಪೇಶ್ ಶೆಟ್ಟಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಹೀರೋಯಿನ್ ಆದ ಜಾನ್ವಿ!
ನಾಯಕಿ ಜಾನ್ವಿ ಅವರು ಮಾತನಾಡಿ, “ನಾನು ಈ ಸಿನಿಮಾದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದೇನೆ. ರೂಪೇಶ್ ಶೆಟ್ಟಿ, ಚಯನ್ ಶೆಟ್ಟಿ ಅವರ ಕಾಂಬಿನೇಶನ್ ತುಂಬ ಚೆನ್ನಾಗಿದೆ. ಈ ಸಿನಿಮಾದಲ್ಲಿನ ಆಟಿ ಕಾಳಂಜ ಹಾಡು ನನಗೆ ತುಂಬ ಇಷ್ಟ ಆಯ್ತು. ಕಷ್ಟಗಳೆಲ್ಲವೂ ಮುಗಿಯುವ ಗಳಿಗೆ ಅಂತ ಆ ಹಾಡಿನಲ್ಲಿದೆ. ಈ ಲೈನ್ ನನ್ನ ಜೀವನಕ್ಕೆ ಹೊಂದಿಕೆ ಆಗಿರುವ ಹಾಗೆ ಕಾಣಿಸಿತು. ನಾನು ನ್ಯೂಸ್ ಓದೋದನ್ನು ನೋಡಿ ಈ ಸಿನಿಮಾಕ್ಕೆ ಆಯ್ಕೆ ಮಾಡಿದ್ದಾರೆಯೇ ಹೊರತು, ಗಿಚ್ಚಿ ಗಿಲಿಗಿಲಿ ಶೋ, ನನ್ನಮ್ಮ ಸೂಪರ್ ಸ್ಟಾರ್ ನೋಡಿ ಅಲ್ಲ. ನಟಿಸಬೇಕು ಎನ್ನೋದು ನನ್ನ ಕನಸಾಗಿತ್ತು. ಅಧಿಪತ್ರ ಮೂಲಕ ಒಳ್ಳೆಯ ಅವಕಾಶ ಸಿಕ್ಕಿದೆ. ಅದನ್ನು ಸದ್ಬಳಕೆ ಮಾಡಿಕೊಂಡಿದ್ದೇನೆ. ನನಗೆ ಈ ಚಿತ್ರದ ಮೇಲೆ ತುಂಬ ನಿರೀಕ್ಷೆಯಿದೆ” ಎಂದು ಹೇಳಿದ್ದಾರೆ.
ಅಧಿಪತ್ರ ಸಿನಿಮಾ ಅನುಭವ ಹಂಚಿಕೊಂಡ ಜಾಹ್ನವಿ; ಹೀಗೂ ಉಂಟೇ...!?
ನಿರ್ದೇಶಕ ಚಯನ್ ಶೆಟ್ಟಿ ಏನಂದ್ರು?
ನಿರ್ದೇಶಕ ಚಯನ್ ಶೆಟ್ಟಿ ಅವರು ಮಾತನಾಡಿ, “ಟೀಸರ್, ಟ್ರೇಲರ್ ನೋಡಿ ಕಾಂತಾರ ಸಿನಿಮಾ ರೀತಿ ಕಥೆ ಇಲ್ಲಿ ಇರಬಹುದು ಅಂತ ಕೆಲವರು ಅಂದುಕೊಂಡಿದ್ದಾರೆ. ಕಾಂತಾರ ಚಿತ್ರಕ್ಕೂ, ನಮ್ಮ ಸಿನಿಮಾಕ್ಕೂ ತುಂಬ ವ್ಯತ್ಯಾಸ ಇದೆ. ಇಲ್ಲಿ ದೈವದ ಬಗ್ಗೆ ಕಥೆ ಇಲ್ಲ. ಆಟಿ ಕಳಂಜ ಬಗ್ಗೆ ಇದೆ, ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ವಿಷಯಗಳು ಇವೆ. ಆಟಿ ಕಳಂಜ ಹಾಡಿನ ಬಗ್ಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿರೋದು ತುಂಬ ಖುಷಿ ಕೊಟ್ಟಿದೆ. ವೀಕ್ಷಕರು ಥಿಯೇಟರ್‌ಗೆ ಬಂದು ಸಿನಿಮಾ ನೋಡ್ತಾರೆ. ಈ ಹಣಕ್ಕೆ ಮಾತ್ರ ಮೋಸ ಆಗೋದಿಲ್ಲ” ಎಂದು ಹೇಳಿದ್ದಾರೆ.


