ನಟ ಮನು ವರ್ಮಾ ಅವರು ತಾವೇ ಪ್ರೀತಿಸಿ ಮದುವೆಯಾದ ಪತ್ನಿ, ನಟಿ ಸಿಂಧು ಅವರಿಂದ ಬೇರೆಯಾಗುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ಬೇರೆಯಾಗುತ್ತಿದ್ದು, ಮತ್ತೆ ಒಂದಾಗುವ ಸಾಧ್ಯತೆ ಕಡಿಮೆ ಎಂದಿರುವ ಅವರು, ವಿಚ್ಛೇದನ ಈಗ ಫ್ಯಾಷನ್ ಆಗಿದೆ ಎಂದು ಹೇಳಿದ್ದಾರೆ.
ಸಿನಿಮಾ ಮತ್ತು ಧಾರಾವಾಹಿ ಸೇರಿದಂತೆ ಬಣ್ಣದ ಲೋಕದಲ್ಲಿ ವಿಹರಿಸುವವರ ಜೀವನ ಎಷ್ಟೇ ಪ್ರೀತಿಯಿಂದ, ಹೊಂದಾಣಿಕೆಯಿಂದ ಹಾಗೂ ಅನುಸರಿಸಿಕೊಂಡು ಹೋದರೂ ತುಂಬಾ ದಿನ ಬಾಳಿಕೆ ಬರುವುದಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಸಿನಿಮಾ ಹಾಗೂ ಧಾರಾವಾಹಿ ನಟರೊಬ್ಬರು ತಾವೇ ಪ್ರೀತಿಸಿ ಮದುವೆಯಾದ ಹೆಂಡತಿಗೆ ಡಿವೋರ್ಸ್ ನೀಡುತ್ತಿದ್ದಾರೆ. ಎದೆಯೆತ್ತರಕ್ಕೆ ಬೆಳೆದ ಮೂವರು ಮಕ್ಕಳ ಜವಾಬ್ದಾರಿ ಬಗ್ಗೆ ಇನ್ನಷ್ಟೇ ತೀರ್ಮಾನಿಸಬೇಕಿದೆ.
ಮಲಯಾಳಿಗಳಿಗೆ ನಟ ಮನು ವರ್ಮಾ ಚಿರಪರಿಚಿತರು. ಇವರು ನಟ ಜಗನ್ನಾಥ ವರ್ಮಾ ಅವರ ಮಗ. 80ರ ದಶಕದಲ್ಲಿ ನಟನಾ ರಂಗಕ್ಕೆ ಕಾಲಿಟ್ಟ ಮನು ವರ್ಮಾ, ಹಲವು ಸಿನಿಮಾಗಳಲ್ಲಿ ವಿಲನ್ ಮತ್ತು ಪೋಷಕ ನಟನಾಗಿ ಕಾಣಿಸಿಕೊಂಡಿದ್ದರು. ಸದ್ಯ ಧಾರಾವಾಹಿಗಳಲ್ಲೂ ನಟಿಸುತ್ತಿರುವ ಇವರು, ಈಗ ತಮ್ಮ ಪತ್ನಿ ಮತ್ತು ನಟಿ ಸಿಂಧು ಅವರಿಂದ ಬೇರೆಯಾಗಿರುವುದಾಗಿ ಬಹಿರಂಗಪಡಿಸಿದ್ದಾರೆ. ಇಬ್ಬರೂ ಪ್ರೀತಿಸಿ ಮದುವೆಯಾದವರು. ಅದರಲ್ಲಿ ಯಾವುದೇ ಅರ್ಥವಿಲ್ಲ, ಪರಸ್ಪರ ಹೊಂದಾಣಿಕೆ ಆಗುವುದಿಲ್ಲ ಎನಿಸಿದರೆ ಬೇರೆಯಾಗಬೇಕು ಎಂದು ಮನು ವರ್ಮಾ ಹೇಳಿದರು.
ನಾವೀಗ ಬೇರೆ ಬೇರೆಯಾಗಿಯೇ ವಾಸಿಸುತ್ತಿದ್ದೇವೆ:
'ನಾವು ಈಗ ಬೇರೆ ಬೇರೆಯಾಗಿ ವಾಸಿಸುತ್ತಿದ್ದೇವೆ. ಅಧಿಕೃತವಾಗಿ ಬೇರೆಯಾಗಿಲ್ಲ. ಮತ್ತೆ ಒಂದಾಗುವ ಸಾಧ್ಯತೆ ತೀರಾ ಕಡಿಮೆ. ಪ್ರೀತಿಸಿ, ಅನ್ಯೋನ್ಯವಾಗಿ ಬದುಕಿದ್ದೆವು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಇದಕ್ಕಿಂತ ಹೆಚ್ಚು ಪ್ರೀತಿಸಿದ ಎಷ್ಟೋ ಜನರು ಬೇರೆಯಾಗುತ್ತಾರೆ. ನನಗೆ ಪರಿಚಯವಿರುವವರೇ ಇದ್ದಾರೆ. ಆಲ್ ಇನ್ ದ ಗೇಮ್. ಅಷ್ಟೇ', ಎಂದು ಮನು ವರ್ಮಾ ಹೇಳುತ್ತಾರೆ. ಮೂವಿ ವರ್ಲ್ಡ್ ಮೀಡಿಯಾಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
'ಈಗಂತೂ ಡೈವೋರ್ಸ್ ಒಂದು ಫ್ಯಾಷನ್ ಆಗಿಬಿಟ್ಟಿದೆ. ಫ್ಯಾಮಿಲಿ ಕೋರ್ಟ್‌ಗೆ ಹೋದಾಗ ಮಾತ್ರ ಅದರ ಕಷ್ಟ ಗೊತ್ತಾಗುವುದು. ಒಂದು ದಿನಕ್ಕೆ ಸಾವಿರಾರು ಕೇಸ್‌ಗಳು ಬರುತ್ತವೆ. ಕೆಲವು ಸಲ ಜಡ್ಜ್ ತಲೆನೋವಿನಿಂದ ಬಳಲುತ್ತಿರುವುದನ್ನು ನೋಡಬಹುದು. ಬೇರೆಯಾದವರು ಎಂದಿಗೂ ಪರಸ್ಪರ ಒಳ್ಳೆಯದನ್ನು ಹೇಳುವುದಿಲ್ಲ. ಕೋರ್ಟ್‌ನಲ್ಲಿ ಒಬ್ಬರಿಗೊಬ್ಬರು ಕೆಸರೆರಚಾಟ ಮಾಡುತ್ತಾರೆ. ಅಲ್ಲಿಗೆ ಹೋಗುವುದಕ್ಕೂ ಒಂದು ರೀತಿ ಹಿಂಜರಿಕೆ' ಎಂದೂ ಅವರು ಹೇಳುತ್ತಾರೆ.
ಪರಸ್ಪರ ಮನಸ್ಸಿನಲ್ಲಿ ಹೊಂದಾಣಿಕೆ ಇಲ್ಲ
'ಈ ಹಿಂದೆ ಒಂದು ತಿಳುವಳಿಕೆ ಇತ್ತು. ಕಾಲ ಬದಲಾದಂತೆ ಪ್ರತಿಯೊಬ್ಬರ ಮನಸ್ಥಿತಿ ಮತ್ತು ವಿಷಯಗಳೂ ಬದಲಾಗುತ್ತವಲ್ಲವೇ. ಇದು ಸಂಭವಿಸಲು ಹೆಚ್ಚು ಸಮಯವೇನೂ ಬೇಕಾಗಿಲ್ಲ. ಪರಸ್ಪರ ಮನಸ್ಸಿನಲ್ಲಿ ಹೊಂದಾಣಿಕೆ ಇಲ್ಲದಿದ್ದಾಗ ಬೇರೆಯಾಗಿ ವಾಸಿಸುವುದೇ ಒಳ್ಳೆಯದು. ಕಷ್ಟಪಟ್ಟು ಒಟ್ಟಿಗೆ ವಾಸಿಸುವ ಅಗತ್ಯವಿಲ್ಲ. ಆಗಲ್ಲ ಎನಿಸಿದರೆ ಬೇರೆಯಾಗಿ. ವಿದೇಶಗಳಲ್ಲೆಲ್ಲಾ ಹಾಗೆಯೇ. ಆದರೆ ಅಲ್ಲಿ ವಿಚ್ಛೇದನ ಪಡೆದರೂ ಪರಸ್ಪರ ಸ್ನೇಹ ಇರುತ್ತದೆ. ಅದು ಇಲ್ಲಿಲ್ಲ. ಹಾಗೇನಾದರೂ ಆದರೆ ಇಲ್ಲಿ ಡೈವೋರ್ಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ. ಬೇರೆಯಾದವರು ಸ್ನೇಹವನ್ನು ಉಳಿಸಿಕೊಳ್ಳುವುದು ಒಳ್ಳೆಯದು. ಅದಕ್ಕೇನು ತೊಂದರೆ' ಎಂದೂ ಮನು ವರ್ಮಾ ಸೇರಿಸಿದರು.
ಸಿಂಧು-ಮನು ವರ್ಮಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹಿರಿಯ ಮಗ ಅಮೆರಿಕದಲ್ಲಿ ಇಂಜಿನಿಯರ್. ಎರಡನೆಯವನು ಬೆಂಗಳೂರಿನಲ್ಲಿದ್ದಾನೆ. ಕಿರಿಯ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಾಳೆ.


