Asianet Suvarna News Asianet Suvarna News

Bale Bangara: ರಾಜ್ಯ ಸರ್ಕಾರ ಪರಿಗಣಿಸದಿದ್ದ ಅನಿರುದ್ಧ್​ರ​ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ; ನಟ ಹೇಳಿದ್ದೇನು?

ರಾಜ್ಯ ಸರ್ಕಾರ ಪರಿಗಣಿಸದಿದ್ದ ನಟ ಅನಿರುದ್ಧ್​ ಅವರ ಬಾಳೆಬಂಗಾರ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿದೆ. ಭಾರತಿ ವಿಷ್ಣುವರ್ಧನ್​ ಅವರ ಕುರಿತ ಈ ಚಿತ್ರದ ಕುರಿತು ನಟ ಹೇಳಿದ್ದೇನು? 
 

Actor Anirudhs documentary Bale Bangara got National award suc
Author
First Published Aug 25, 2023, 9:37 AM IST | Last Updated Aug 25, 2023, 9:37 AM IST

 2021ರ ಸಾಲಿನ ಹಾಗೂ 69ನೇ ಆವೃತ್ತಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (National Film Awards) ಕೇಂದ್ರ ಸರ್ಕಾರ   ಘೋಷಣೆ ಮಾಡಿದೆ. ಕನ್ನಡದ ಚಾರ್ಲಿ 777ಗೆ ಪ್ರಾದೇಶಿಕವಾರು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸಿಕ್ಕಿದ್ದು, ಕನ್ನಡದ ಸುಬ್ರಹ್ಮಣ್ಯ ಬಾದೂರ್​ ಅವರಿಗೆ ವಿಶೇಷ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ ಇದರ ಜೊತೆಗೆನೇ ಇನ್ನೊಂದು ಪ್ರಶಸ್ತಿಯ ಗರಿ ಕನ್ನಡದ ಕಿರೀಟಕ್ಕೆ ಸೇರಿದೆ. ಅದುವೇ ಬಾಳೆ ಬಂಗಾರ! ಹೌದು. ನಾನ್ ಫೀಚರ್ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದಿದೆ ಬಾಳೆ ಬಂಗಾರ. ಇದನ್ನು ನಿರ್ದೇಶಿಸಿದವರು ಜೊತೆಜೊತೆಯಲಿ ಧಾರಾವಾಹಿ ಖ್ಯಾತಿಯ ಅನಿರುದ್ಧ್. ಭಾರತಿ ವಿಷ್ಣುವರ್ಧನ್​ ಅವರ ಕುರಿತು ಈ ಕಿರುಚಿತ್ರ ನಿರ್ಮಿಸಲಾಗಿದೆ. 

ಈ ಸಂತೋಷದ ಕ್ಷಣವನ್ನು ಹಂಚಿಕೊಂಡಿರುವ ನಟ, ಕಿರುಚಿತ್ರದ ಕುರಿತು ಮಾಹಿತಿ ನೀಡಿದ್ದಾರೆ.  ಇದರ ಪರಿಕಲ್ಪನೆ, ಇದಕ್ಕೆ ಬೇಕಾಗಿರುವ ಸಂಶೋಧನೆ, ನಿರೂಪಣೆ, ನಿರ್ದೇಶನ ಎಲ್ಲವೂ ನನ್ನದ್ದಾಗಿದೆ. ಈ ಸಾಕ್ಷ್ಯಚಿತ್ರವು ಕಲಾವಿದೆಯೊಬ್ಬರ ಮೇಲೆ ನಿರ್ಮಿಸಲಾಗಿರುವ ಹೆಚ್ಚು ಅವಧಿಯ ಸಾಕ್ಷ್ಯಚಿತ್ರವಾಗಿದೆ. ಇವತ್ತು ರಾಷ್ಟ್ರಪತಿ ನನಗೆ ಬಂದಿದೆ. ಇದಕ್ಕೂ ಮುಂಚೆ ಈ ಸಾಕ್ಷ್ಯಚಿತ್ರಕ್ಕೆ (Documentary) ಸಂಬಂಧಿಸಿದಂತೆ ಮೂರು ದಾಖಲೆಗಳಿವೆ. ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಏಷಿಯಾ ಬುಕ್​ ಆಫ್​ ರೆಕಾರ್ಡ್ಸ್​ ಹಾಗೂ ಕಲಾ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​. ಬದುಕಿರುವ ಲೆಜೆಂಡ್ರಿ ಒಬ್ಬರ ಮೇಲೆ ಮಾಡಲಾಗಿರುವ ಅತ್ಯಂತ ಸುದೀರ್ಘ ಕಿರುಚಿತ್ರವಿದು ಎಂದಿದ್ದಾರೆ.

National Film Awards: ಕನ್ನಡದ 'ಚಾರ್ಲಿ 777' ಪಡೆದ ಮೊತ್ತವೆಷ್ಟು? ಉಳಿದ ಚಿತ್ರಗಳಿಗೆ ಸಿಕ್ಕಿದ್ದೆಷ್ಟು?

ಈ ಒಂದು ಸಾಕ್ಷ್ಯಚಿತ್ರದ ಪ್ರಯತ್ನ ಇದು ನಾಂದಿಯಾಗಬೇಕು ಅಂತ ಆಶಿಸುತ್ತೇನೆ. ನಮ್ಮ ಹಿರಿಯರ ಬಗ್ಗೆ ನಮಗೆ ಪರಿಚಯವಾದಾಗ, ನಮ್ಮ ಬುನಾದಿಯ ಬಗ್ಗೆ, ನಮ್ಮ ಇತಿಹಾಸದ ಬಗ್ಗೆ ಪರಿಚಯವಾಗಬೇಕಿದೆ. ಆ ನಿಟ್ಟಿನಲ್ಲಿ ಈ ಪ್ರಯತ್ನ ಆಗಬೇಕು. ನಮಗೆ ಹಿರಿಯರ ಕೊಡುಗೆ ಏನಿದೆ, ಅವರ ಜೀವನದ ಪ್ರವಾಸ ಏನಿದೆ ಇದು ದಾಖಲೆ ಸ್ವರೂಪದಲ್ಲಿ ಇರಬೇಕು. ಆ ನಿಟ್ಟಿನಲ್ಲಿ ಈ ಪ್ರಯತ್ನಗಳು ಆಗಬೇಕು ಎಂದು ಅನಿರುದ್ಧ್​ ಹೇಳಿದ್ದಾರೆ.

ಇದೇ ವೇಳೆ  ರಾಜ್ಯಪ್ರಶಸ್ತಿಗಳ ಬಗ್ಗೆ  ಅನಿಸಿಕೆ ಹಂಚಿಕೊಂಡ ನಟ, ರಾಜ್ಯ ಪ್ರಶಸ್ತಿಗೂ  ಅರ್ಜಿ ಸಲ್ಲಿಸೋಕೆ ಪ್ರಯತ್ನಪಟ್ಟೆ. ಆದರೆ ಅಲ್ಲಿ ಅವರು ಈ ಚಿತ್ರವನ್ನು ತೆಗೆದುಕೊಳ್ಳಲೇ ಇಲ್ಲ. ಇದಕ್ಕೆ  ಕಾರಣವೂ ಇದೆ.  ಅಲ್ಲಿ ಕೆಲವು ನಿಯಮವಿದೆ. ಆ ನಿಯಮದ ಪ್ರಕಾರ, ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರ ಎರಡನ್ನೂ ಒಂದೇ ವಿಭಾಗದಲ್ಲಿ ಇಡಲಾಗಿದೆ. ಅದರ ಅವಧಿ ಕೇವಲ 30 ನಿಮಿಷ ಆಗಿರಬೇಕು ಎಂದಿದೆ. ಒಬ್ಬ ಸಾಧಕರ ಬಗ್ಗೆ ಅಥವಾ ಒಂದು ವಿಷಯದ ಬಗ್ಗೆ ಸಮಗ್ರವಾಗಿ ಸಾಕ್ಷ್ಯಚಿತ್ರದಲ್ಲಿ ಹೇಳಬೇಕು ಎಂದು ಕೇವಲ 30 ನಿಮಿಷ ಸಾಕಾಗುವುದಿಲ್ಲ. ಅದು ಆ ವ್ಯಕ್ತಿಗೆ, ಸಾಧಕರಿಗೆ ಅಥವಾ  ವಿಷಯಕ್ಕೆ ನ್ಯಾಯ ಒದಗಿಸಲು ಆಗುವುದಿಲ್ಲ. ಆದ್ದರಿಂದ ನಾನು ರಾಜ್ಯ ಸರ್ಕಾರಕ್ಕೆ (state government) ಕಳಕಳಿಯಿಂದ ಕೇಳಿಕೊಳ್ಳುವುದು ಏನೆಂದರೆ ನಿಯಮ ಬದಲಾಯಿಸಿ ಆ ನಿಟ್ಟಿನಲ್ಲಿ ಚಿಂತನೆ ನಡೆಸಿ ಎಂದಿದ್ದಾರೆ.

ಹಾಗೆನೇ ಇವತ್ತು ಯಶಸ್ಸು ಏನಿದೆ ಇದಕ್ಕೆ ಕಾರಣೀಕರ್ತರು ನನ್ನ ಇಡೀ ತಂಡ. ನಿರ್ಮಾಪಕಿ ನನ್ನ ಪತ್ನಿ ಕೀರ್ತಿ, ಅವರ ನಿರ್ಮಾಣ ಸಂಸ್ಥೆ ಕೀರ್ತಿ ಅಡಿಯಲ್ಲಿ ಈ ಕಿರುಚಿತ್ರ ನಿರ್ಮಿಸಲಾಗಿದೆ. ಆಕೆ ಹಾಗೂ ನನ್ನ ಇಡೀ ತಂಡ ಇದಕ್ಕೆ ಕಾರಣೀಕರ್ತರು ಎಂದಿದ್ದಾರೆ. ಅಂದಹಾಗೆ ಈ ಕಿರುಚಿತ್ರದಲ್ಲಿ ಭಾರತಿ ವಿಷ್ಣುವರ್ಧನ್ ಅವರ ಜನಪ್ರಿಯ ಸಿನಿಮಾಗಳ ತುಣುಕುಗಳು, ಅಪರೂಪದ ಫೋಟೋಗಳು, ಭಾರತಿ ಜೊತೆ ನಟಿಸಿದ ಕಲಾವಿದರ ಮಾತುಗಳು, ಕುಟುಂಬಸ್ಥರು ಹಾಗೂ ಆತ್ಮೀಯರು ಹಂಚಿಕೊಂಡ ಕುತೂಹಲಕರ ವಿಷಯಗಳು ಇವೆ. ಸಾಕ್ಷ್ಯಚಿತ್ರದ ನಿರ್ದೇಶನ ಜೊತೆಗೆ ಸ್ಕ್ರಿಪ್ಟ್ ಹಾಗೂ ನಿರೂಪಣೆಯನ್ನೂ ಅನಿರುದ್ಧ್ ಮಾಡಿದ್ದಾರೆ.

 

Latest Videos
Follow Us:
Download App:
  • android
  • ios