National Film Awards: ಕನ್ನಡದ 'ಚಾರ್ಲಿ 777' ಪಡೆದ ಮೊತ್ತವೆಷ್ಟು? ಉಳಿದ ಚಿತ್ರಗಳಿಗೆ ಸಿಕ್ಕಿದ್ದೆಷ್ಟು?
69ನೇ ಆವೃತ್ತಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿರುವ ಚಿತ್ರಗಳಿಗೆ ನೀಡುವ ಸಂಭಾವನೆಯಷ್ಟು? ಪಡೆಯುವ ಪದಕಗಳು ಯಾವುವು?
2021ರ ಸಾಲಿನ ಹಾಗೂ 69ನೇ ಆವೃತ್ತಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (National Film Awards) ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಕನ್ನಡದ ಚಾರ್ಲಿ 777ಗೆ ಪ್ರಾದೇಶಿಕವಾರು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸಿಕ್ಕಿದ್ದು, ಕನ್ನಡದ ಸುಬ್ರಹ್ಮಣ್ಯ ಬಾದೂರ್ ಅವರಿಗೆ ವಿಶೇಷ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ನಾನ್ ಫೀಚರ್ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಅನಿರುದ್ಧ್ ನಿರ್ದೇಶನದ ‘ಬಾಳೆ ಬಂಗಾರ’ ಕಿರುಚಿತ್ರವೂ ಬಹುಮಾನ ಪಡೆದಿದೆ. ‘ಬಾಳೆ ಬಂಗಾರ’ ಸಾಕ್ಷ್ಯಚಿತ್ರಕ್ಕೆ ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಭಾರತಿ ವಿಷ್ಣುವರ್ಧನ್ ಅವರ ಸಾಧನೆ ಮತ್ತು ಜೀವನದ ಬಗ್ಗೆ ಈ ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ. ಆಸ್ಕರ್ ಗೌರವಕ್ಕೆ ಭಾಜನವಾಗಿದ್ದ ಆರ್‌ಆರ್‌ಆರ್ ಸಿನಿಮಾ ನಿರೀಕ್ಷೆಯಂತೆ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಆಕ್ಷನ್ ಡೈರೆಕ್ಷನ್,ನೃತ್ಯ ಸಂಯೋಜನೆ ಹಾಗೂ ಸ್ಪೆಷಲ್ ಎಫೆಕ್ಟ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದೆ. ಅದರೊಂದಿಗೆ ತೆಲುಗು ಸಿನಿಮಾ ರಂಗದ ಪ್ರಮುಖ ಚಿತ್ರವಾದ ಪುಷ್ಪಾ: ದಿ ರೈಸ್ ಸಿನಿಮಾದ ನಟನೆಗಾಗಿ ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದಿದೆ.
ಅದೇ ರೀತಿ, ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ನಟ ಮಾಧವನ್ ನಿರ್ದೇಶನದ, ಇಸ್ರೋ ವಿಜ್ಞಾನಿ (Isro Scientist) ನಂಬಿ ನಾರಾಯಣ್ ಅವರ ಜೀವನಾಧಾರಿತ ಚಿತ್ರ ರಾಕೆಟ್ರಿ: ನಂಬಿ ಎಫೆಕ್ಟ್ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ನಟ ಪ್ರಶಸ್ತಿ ಪುಷ್ಪ: ದಿ ರೈಸ್ ಭಾಗ-1 ಸಿನಿಮಾದ ನಟನೆಗಾಗಿ ಅಲ್ಲು ಅರ್ಜುನ್‌ಗೆ, ಅತ್ಯುತ್ತಮ ನಟಿ ಪ್ರಶಸ್ತಿ ಗಂಗೂಬಾಯಿ ಕಥಿಯಾವಾಡಿ ಮತ್ತು ಮಿಮಿಗಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ಗೆ ದೊರೆತಿದೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಮಿಮಿ ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಅತ್ಯುತ್ತಮ ಪೋಷಕ ನಟಿ ದಿ ಕಾಶ್ಮೀರ್ ಫೈಲ್ಸ್‌ನಲ್ಲಿ ವಿವಿ ಪ್ರೊಫೆಸರ್ ಪಾತ್ರ ನಿಭಾಯಿಸಿದ್ದ ಪಲ್ಲವಿ ಜೋಶಿ ಅವರ ಪಾಲಾಗಿದ್ದರೆ, ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ, ಬೆಸ್ಟ್ ಡೈಲಾಗ್ ವಿಭಾಗದಲ್ಲಿ ಗಂಗೂಬಾಯಿ ಕಥಿಯಾವಾಡಿ ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ ಮತ್ತು ಅತ್ಯುತ್ತಮ ಸಂಭಾಷಣೆ ವಿಭಾಗದ ರಾಷ್ಟ್ರೀಯ ಪ್ರಶಸ್ತಿ ಜಯಿಸಿದೆ.
National Film Awards: 777 ಚಾರ್ಲಿಗೆ ಅತ್ಯುತ್ತಮ ರಾಷ್ಟ್ರೀಯ ಪ್ರಶಸ್ತಿ, ಇಲ್ಲಿದೆ ನೋಡಿ ವಿಜೇತರ ಲಿಸ್ಟ್
ಹಾಗಿದ್ದರೆ ಕನ್ನಡದ 'ಚಾರ್ಲಿ 777'ಗೆ (Charlie 777) ಸಿಕ್ಕಿದ್ದೆಷ್ಟು? ಉಳಿದ ಚಿತ್ರಗಳಿಗೆ ಸಿಕ್ಕಿದ್ದೆಷ್ಟು ಎಂದು ನೋಡುವುದಾದರೆ: ಚಾರ್ಲಿ 777 ಸಿನಿಮಾಕ್ಕೆ ಒಂದು ಲಕ್ಷ ರೂಪಾಯಿ ನಗದು ಹಾಗೂ ರಜತ ಕಮಲ ದೊರಕಲಿದೆ. ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾಗಳಿಗೆ ಈ ಮೊತ್ತವನ್ನು ನೀಡಲಾಗುತ್ತದೆ.
ಅತಿ ಹೆಚ್ಚು ಮೊತ್ತ ಎಂದರೆ ಎರಡೂವರೆ ಲಕ್ಷ ರೂಪಾಯಿ ಹಾಗೂ ಸ್ವರ್ಣಕಮಲ. ಇದು ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ನಿಖಿಲ್ ಮಹಾಜನ್ ಅವರಿಗೆ ಸಂದಿದೆ. ಅತ್ಯುತ್ತಮ ಮನೊರಂಜನಾತ್ಮಕ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ‘ಆರ್‌ಆರ್‌ಆರ್’ ಸಿನಿಮಾ ಹಾಗೂ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದ ‘ಶೇರ್ಷಾ’ ಸಿನಿಮಾಕ್ಕೆ 2 ಲಕ್ಷ ರೂಪಾಯಿ ಹಾಗೂ ಸ್ವರ್ಣ ಕಮಲ ಸಿಕ್ಕರೆ, ರಾಷ್ಟ್ರೀಯ ಏಕತೆ (ನ್ಯಾಷನಲ್ ಇಂಟಿಗ್ರೇಷನ್) ವಿಭಾಗದಲ್ಲಿ ಪ್ರಶಸ್ತಿ ಪಡೆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ಒಂದೂವರೆ ಲಕ್ಷ ರೂಪಾಯಿ ಹಾಗೂ ರಜತ ಕಮಲ ದೊರಕಲಿದೆ. ಅತ್ಯುತ್ತಮ ಮಕ್ಕಳ ಸಿನಿಮಾ, ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಸಿನಿಮಾ, ಸಾಮಾಜಿಕ ಸಂದೇಶವುಳ್ಳ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾಗಳಿಗೆ 1.50 ಲಕ್ಷ ನಗದು ಹಾಗೂ ರಜತ ಕಮಲ ನೀಡಲಾಗುತ್ತದೆ.
ಇನ್ನು, ಅತ್ಯುತ್ತಮ ನಟ, ನಟಿ ಸೇರಿದಂತೆ ಅತ್ಯುತ್ತಮ ಎಡಿಟಿಂಗ್, ಸೌಂಡ್ ಡಿಸೈನ್, ಮೇಕಪ್, ವಸ್ತ್ರಾಲಂಕಾರ ಇತರೆ ಎಲ್ಲ ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರಿಗೆ ರಜತ ಕಮಲದ ಜೊತೆಗೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಇನ್ನು ನಾನ್ ಫೀಚರ್ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಪ್ರಶಸ್ತಿ ಪಡೆದವರಿಗೆ ಒಂದೂವರೆ ಲಕ್ಷ ರೂಪಾಯಿ ಹಾಗೂ ಸ್ವರ್ಣ ಕಮಲ ನೀಡಲಾಗುತ್ತಿದೆ. ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದ ನಾನ್ ಫೀಚರ್ ಸಿನಿಮಾಕ್ಕೆ 1 ಲಕ್ಷ ನಗದು, ಅತ್ಯುತ್ತಮ ಹೊಸ ನಿರ್ದೇಶಕ ವಿಭಾಗಕ್ಕೆ 75 ಸಾವಿರ, ಅತ್ಯುತ್ತಮ ಸಿನಿಮಾ ಪುಸ್ತಕ, ಅತ್ಯುತ್ತಮ ಸಿನಿಮಾ ವಿಮರ್ಶೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರಿಗೂ 75 ಸಾವಿರ ನಗದು ಬಹುಮಾನ ಸಿಗಲಿದೆ. ನಾನ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿ ಪಡೆದ ಇನ್ನೆಲ್ಲ ತಂತ್ರಜ್ಙರು, ನಟರಿಗೆ 50 ಸಾವಿರ ರೂಪಾಯಿ ಬಹುಮಾನ ಹಾಗೂ ರಜತ ಕಮಲ ನೀಡಲಾಗುತ್ತದೆ. ಅನ್ವೇಷಣಾ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ಕನ್ನಡದ ಆಯುಷ್ಮಾನ್ ಸಿನಿಮಾಕ್ಕೂ 50 ಸಾವಿರ ನಗದು ಬಹುಮಾನ ದೊರಕಲಿದೆ. ಉಳಿದವುಗಳಿಗೆ ಕೇವಲ ಪ್ರಮಾಣ ಪತ್ರ ಸಿಗಲಿದೆ.
Rakshit Shetty ಥಾಯ್ ಬಳಿಕ ಜಪಾನಿ ಭಾಷೆಯಲ್ಲಿ 777 ಚಾರ್ಲಿ: ಕಿರಣ್‌ರಾಜ್