ಮಹಾಭಾರತ ಆಧರಿತ ಪರ್ವ ಕಾದಂಬರಿಯನ್ನು ಪ್ರಕಾಶ್‌ ಬೆಳವಾಡಿ ಏಳೂವರೆ ಗಂಟೆಗಳ ನಾಟಕವಾಗಿಸಿದ್ದಾರೆ. ಇದನ್ನು ಸಾಧ್ಯವಾಗಿಸಿರುವುದು ಬಿವಿ ಕಾರಂತರ ಕನಸಿನ ಕೂಸಾದ ಮೈಸೂರಿನ ನಾಟಕ ಕರ್ನಾಟಕ ರಂಗಾಯಣ. ‘ಮಲೆಗಳಲ್ಲಿ ಮದುಮಗಳು’ ಅಹೋರಾತ್ರಿ ಪ್ರದರ್ಶನಗೊಂಡ ನಾಟಕವಾಗಿದ್ದರೆ ‘ಪರ್ವ’ ಬೆಳಗಿನ ವೇಳೆ ನಾಲ್ಕು ಬಿಡುವುಗಳ ನಡುವೆ ಪ್ರದರ್ಶನ ಕಾಣುತ್ತಿದೆ.

ಮಾ.12,13, 14 ರಂದು ಪರ್ವ ನಾಟಕ ಹಬ್ಬ ಅರ್ಥಾತ್‌ ಪ್ರಥಮ ಪ್ರದರ್ಶನ ನಡೆಯಲಿದೆ. ಈ ನಾಟಕ ಬೆಳಗ್ಗೆ 10.30ಕ್ಕೆ ಆರಂಭವಾಗುತ್ತದೆ. ಐದು ಅಂಕಗಳ ಈ ನಾಟಕಕ್ಕೆ ಊಟ. ಚಹಾ ಸೇರಿದಂತೆ ನಾಲ್ಕು ವಿರಾಮ ನೀಡಲಾಗುತ್ತದೆ.

ಮಾಚ್‌ರ್‍ ಹಾಗೂ ಏಪ್ರಿಲ್‌ನಲ್ಲಿ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ವಾರಕ್ಕೆ ಮೂರು ಪ್ರದರ್ಶನದಂತೆ ನಿರಂತರವಾಗಿ 25 ಪ್ರದರ್ಶನಗಳನ್ನು ನೀಡುವ ಗುರಿ ಇದೆ. ಮುಂದಿನ ಏಪ್ರಿಲ್‌ನಲ್ಲಿ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಕೂಡ ಈ ಬೃಹತ್‌ ನಾಟಕ ಪ್ರದರ್ಶನವಾಗಲಿದೆ. ಮೇ ಹಾಗೂ ಜೂನ್‌ ತಿಂಗಳಲ್ಲಿ ರಾಜ್ಯದ ಶಿವಮೊಗ್ಗ, ತುಮಕೂರು, ಧಾರವಾಡ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಕಲಬುರಗಿ, ಬೀದರ್‌, ಚಿತ್ರದುರ್ಗದಲ್ಲಿ ತಲಾ ಎರಡು ಪ್ರದರ್ಶನ ನೀಡುವ ಉದ್ದೇಶವಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಾಗೂ ಕಲಾ ಗ್ರಾಮದಲ್ಲಿ ಐದು ಪ್ರದರ್ಶನ ನೀಡುವ ಗುರಿ ಇದೆ. ಆಗಸ್ಟ್‌, ಸೆಪ್ಟಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ದೆಹಲಿ, ಮುಂಬೈ, ಕೇರಳ, ಚಂಡೀಘಡ, ವಾರಾಣಾಸಿ, ಗುಜರಾತ್‌ನಲ್ಲಿ ಕನಿಷ್ಠ 10 ಪ್ರದರ್ಶನ ನೀಡುವ ಉದ್ದೇಶವಿದೆ.

ಕಲಬುರಗಿ: ಎಸ್‌.ಎಲ್‌. ಭೈರಪ್ಪಗೆ ಗೌರವ ಡಾಕ್ಟರೇಟ್‌ ಪ್ರದಾನ 

1 ಕಾದಂಬರಿ

1 ನಾಟಕ

8 ಗಂಟೆ

40 ಕಲಾವಿದರು

ರಂಗಾಯಣದ ಹಿರಿಯ 15 ಕಲಾವಿದರು ಸೇರಿ ಸುಮಾರು 40 ಮಂದಿ ಈ ತಂಡದಲ್ಲಿರುತ್ತಾರೆ. ಸುಮಾರು 59.50 ಲಕ್ಷ ರೂ. ವೆಚ್ಚವಾಗುವ ಅಂದಾಜು ಮಾಡಲಾಗಿದೆ. ರಂಗಾಯಣ ತನಗೆ ಬರುವ ಅನುದಾನದಲ್ಲಿ 10 ಲಕ್ಷ ರೂ. ತೆಗೆದಿರಿಸಿದೆ. ಉಳಿದ 50 ಲಕ್ಷ ರೂ.ಗಳನ್ನು ನೀಡುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌,ಟಿ. ಸೋಮಶೇಖರ್‌, ಚಾಮರಾಜ ಕ್ಷೇತ್ರದ ಶಾಸಕ ಎಲ್‌. ನಾಗೇಂದ್ರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

‘ಪರ್ವ‘ ನಾಟಕ ರೂಪುಗೊಂಡಿದ್ದು ಹೇಗೆ?

ಮೈಸೂರು ರಂಗಾಯಣದಲ್ಲಿ ಈವರೆಗೆ ಬಿ.ವಿ. ಕಾರಂತ, ಸಿ. ಬಸವಲಿಂಗಯ್ಯ, ಪ್ರಸನ್ನ, ಎ.ಜಿ. ಚಿದಂಬರರಾವ್‌ ಜಂಬೆ, ಬಿ. ಜಯಶ್ರೀ, ಲಿಂಗದೇವರು ಹಳೇಮನೆ, ಬಿ.ವಿ. ರಾಜಾರಾಮ್‌, ಎಚ್‌. ಜನಾರ್ಧನ್‌, ಭಾಗೀರಥಿಬಾಯಿ ಕದಂ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಒಂದು ವರ್ಷದ ಹಿಂದೆ ಕೊಡಗಿನ ಅಡ್ಡಂಡ ಸಿ. ಕಾರ್ಯಪ್ಪ ನಿರ್ದೇಶಕರಾಗಿ ನೇಮಕವಾದರು.

ಬೇರೆ ಬೇರೆ ಹವ್ಯಾಸಿ ರಂಗತಂಡಗಳಿಗೂ ಸರ್ಕಾರದ ರೆಪರ್ಟರಿಗೂ ವ್ಯತ್ಯಾಸವಿದೆ. ರಂಗಾಯಣ ಎಂದರೇ ಪ್ರಯೋಗಗಳ ರಂಗಶಾಲೆ ಎಂಬುದು ಅಡ್ಡಂಡ ಕಾರ್ಯಪ್ಪ ಅವರ ನಿಲುವು. ಈಗಾಗಲೇ ಕುವೆಂಪು ಅವರ ಎರಡು ಕಾದಂಬರಿಗಳ ಬೃಹತ್‌ ನಾಟಕಗಳ ಪ್ರದರ್ಶನ ನಡೆದಿವೆ. ಎರಡು- ಮೂರು ತಾಸಿನ ನಾಟಕಗಳ ಪ್ರದರ್ಶನದ ಜೊತೆಗೆ ಭಾರತೀಯ ರಂಗಭೂಮಿಯಲ್ಲಿ ಕನ್ನಡದ ಛಾಪು ಮೂಡಿಸಬೇಕು ಎಂದು ನಿರ್ಧರಿಸಿದರು. ಡಾ.ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿಗಳು ದೇಶದ ಎಲ್ಲಾ ಭಾಷೆಗಳಿಗೂ ಅನುವಾದವಾಗಿವೆ. ಪಾಶ್ಚಿಮಾತ್ಯ ಭಾಷೆಗಳಿಗೂ ಅನುವಾದವಾಗಿವೆ. ಇಂತಹ ಶ್ರೇಷ್ಠ ಕಾದಂಬರಿಕಾರನಿಗೆ ರಂಗಭೂಮಿಯ ಗೌರವ ಸಲ್ಲಿಸಬೇಕು ಎಂಬ ಕಾರಣಕ್ಕಾಗಿ ‘ಪರ್ವ’ವನ್ನು ನಾಟಕ ರೂಪಕ್ಕೆ ತರುವ ನಿರ್ಧಾರ ಮಾಡಿದರು. ಆಗ ಪ್ರೋತ್ಸಾಹಕ್ಕಿಂತ ಟೀಕೆಗಳು ಹೆಚ್ಚು ಕೇಳಿ ಬಂದವು. ಭೈರಪ್ಪ ಅವರ ಕಾದಂಬರಿಗಳನ್ನು ಸಿನಿಮಾ ಮಾಡಿ ಹೆಸರು ಮಾಡಿಕೊಂಡವರು ಕೂಡ ಟೀಕೆ- ಟಿಪ್ಪಣಿ ಮಾಡಿದರು. ಆದರೆ ಅಡ್ಡಂಡ ಕಾರ್ಯಪ್ಪ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕೊಡಗಿನವರಾದ ಕಾರ್ಯಪ್ಪ ಅವರಲ್ಲಿ ಇದು ಮನೋಸ್ಥೈರ್ಯ, ಹಠ ಹೆಚ್ಚಿಸಿತು. ಮೊದಲು ಭೈರಪ್ಪ ಅವರನ್ನು ಭೇಟಿ ಮಾಡಿ, ಒಪ್ಪಿಸಿದರು. ನಂತರ ಸೂಕ್ಷ್ಮಗ್ರಹಿಕೆಯ ನಿರ್ದೇಶಕ ಪ್ರಕಾಶ್‌ ಬೆಳವಾಡಿ ಅವರನ್ನು ಭೇಟಿ ಮಾಡಿ, ರಂಗಪಠ್ಯ ಹಾಗೂ ನಿರ್ದೇಶನಕ್ಕೆ ಒಪ್ಪಿಸಿದರು. ರಂಗಾಯಣದ ಹಿರಿಯ ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕೊರೋನಾ ಲಾಕ್‌ಡೌನ್‌ ಸಂದರಭದಲ್ಲಿ ಎಲ್ಲರಿಗೂ ಪರ್ವ ಕಾದಂಬರಿ ಕೊಡಿಸಿ, ಓದುವ (ವರ್ಕ್ ಫ್ರಮ್‌ ಹೋಮ್‌!) ಕೆಲಸ ಹಚ್ಚಿದರು. ನಂತರ ಅವರೊಂದಿಗೆ ಸಭೆ ಮಾಡಿ, ಹಿರಿಯ ಕಲಾವಿದರಾದ ನೀವೆಲ್ಲಾ ನಿವೃತ್ತಿಯ ಅಂಚಿನಲ್ಲಿದ್ದೀರಿ. ನೆನಪಿನಲ್ಲಿ ಉಳಿಯುವ ಈ ಪ್ರಯೋಗ ಮಾಡಿ ಎಂದಾಗ, ಎಲ್ಲರೂ ಸಮ್ಮತಿಸಿದರು. ಪ್ರಕಾಶ್‌ ಬೆಳವಾಡಿ ಅವರು ಸಿದ್ಧಪಡಿಸಿದ ರಂಗಪಠ್ಯವನ್ನು ಭೈರಪ್ಪ ಅವರು ಮೂರು ದಿನ ಓದಿ, ತುಂಬಾ ಚೆನ್ನಾಗಿದೆ ಎಂದು ಸಮ್ಮತಿಸಿದ್ದಲ್ಲದೇ ಹತ್ತು ಪುಟಗಳ ಟಿಪ್ಪಣಿ ಕೂಡ ಬರೆದುಕೊಟ್ಟರು. ನನಗೆ ಈ ಪಾತ್ರಗಳು ಮುಖ್ಯವಾಗಿವೆ ಎಂದು ತಿಳಿಸಿದರು. ಮೂರು ಬಾರಿ ರಂಗಾಯಣಕ್ಕೆ ಭೇಟಿ ನೀಡಿದ ಭೈರಪ್ಪ ಅವರು, ಎಲ್ಲಾ ಕಲಾವಿದರೊಂದಿಗೆ ಸಂವಾದ ನಡೆಸಿದರು. ತಾಲೀಮು ವೀಕ್ಷಿಸಿ, ಮೆಚ್ಚುಗೆ ಸೂಚಿಸಿದರು. ಹಿಂದೂಸ್ತಾನಿ ಸಂಗೀತ ಸೇರಿಸಿದ್ದು ಇಷ್ಟವಾಗಿದೆ ಎಂದಿದ್ದಾರೆ.

ಮೂಲ ಸಮಸ್ಯೆ ಹಿಡಿದು ಬರೆದದ್ದಕ್ಕೆ ನನ್ನ ಸಾಹಿತ್ಯ ಗಟ್ಟಿ: ಭೈರಪ್ಪ 

ಖ್ಯಾತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ನಿರ್ದೇಶನದಲ್ಲಿ ಮೇಕಿಂಗ್‌ ಆಫ್‌ ಪರ್ವ ಸಾಕ್ಷ್ಯಚಿತ್ರ ತಯಾರಿಸುವ ಉದ್ದೇಶವೂ ಇದೆ.

ವಿಚಾರ ಸಂಕಿರಣ

ಪರ್ವ ರಂಗಪಠ್ಯದ ಪೂರ್ವರಂಗವಾಗಿ ಫೆ.21 ರಂದು ಪರ್ವ ವಿರಾಟ್‌ ದರ್ಶನ ಶೀರ್ಷಿಕೆಯಡಿ ಮೈಸೂರು ರಂಗಾಯಣದಲ್ಲಿ ಎಸ್‌.ಎಲ್‌. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಸಹಯೋಗದಲ್ಲಿ ವಿಚಾರ ಸಂಕಿರಣ ಕೂಡ ನಡೆಯಲಿದೆ. ಡಾ.ಎಸ್‌.ಎಲ್‌. ಭೈರಪ್ಪ, ಶತಾವಧಾನಿ ಡಾ.ಆರ್‌. ಗಣೇಶ್‌, ಪ್ರಕಾಶ್‌ ಬೆಳವಾಡಿ, ಅಡ್ಡಂಡ ಸಿ. ಕಾರ್ಯಪ್ಪ ಭಾಗವಹಿಸಲಿದ್ದಾರೆ.

ಸಂದರ್ಶನ

‘ಪರ್ವ’ ನೂರು ಪ್ರದರ್ಶನ ನನ್ನ ಗುರಿ- ಪ್ರಕಾಶ್‌ ಬೆಳವಾಡಿ

ಕಾದಂಬರಿಯನ್ನು ನಾಟಕ ರೂಪಕ್ಕೆ ತರುತ್ತಿರುವ ಬಗ್ಗೆ ?

ನಾನು ಈ ಹಿಂದೆ ರಂಗಾಯಣಕ್ಕಾಗಿ ‘ಘೋರ’ ಹಾಗೂ ‘ಶಿಕಾರಿ’ ಕಾದಂಬರಿಗಳನ್ನು ರಂಗರೂಪಕ್ಕೆ ತಯಾರಿಸಿಕೊಟ್ಟಿದ್ದೇನೆ. ‘ಪರ್ವ’ ಮೂರನೇಯದು.

680 ಪುಟಗಳ ಮಹಾಕೃತಿಯನ್ನು 200 ಪುಟಗಳ ರಂಗಪಠ್ಯವಾಗಿ ಇಳಿಸಿದ್ದು ಹೇಗೆ?

ಪರ್ವದಲ್ಲಿ ‘ಮಹಾಭಾರತ‘ದ ಹತ್ತಾರು ಕಥೆಗಳಿವೆ. ಮುಖ್ಯಪಾತ್ರಗಳನ್ನು ಹೊರತುಪಡಿಸಿ ಎಲ್ಲವನ್ನು ಬಳಸಲು ಸಾಧ್ಯವಾಗಿಲ್ಲ. ಏಳೂವರೆ ತಾಸುಗಳಿಗೆ ಇಳಿಸುವಾಗ ಸೆಂಟ್ರಲ್‌ ಥಿಮ್ಯಾಟಿಕ್‌ಗೆ ಆದ್ಯತೆ ನೀಡಲಾಗಿದೆ. ಘರ್ಷಣೆಯ ವಸ್ತುವನ್ನು ಜೋಡಿಸಿದ್ದೇವೆ. ಕಾಲವನ್ನು ಒಡೆಯದೇ ಕಥೆಯನ್ನು ಕಟ್ಟುತ್ತಾ ಹೋಗಿದ್ದೇವೆ.

ಭೈರಪ್ಪನವರ ಕಾದಂಬರಿಯನ್ನು ರಂಗರೂಪಕ್ಕೆ ಇಳಿಸುವಾಗ ಯಾವುದಾದರೂ ಸವಾಲು ಎದುರಾಯಿತೇ?

ನಾಟಕಕ್ಕೆ ಒಂದು ಫಾಮ್‌ರ್‍ ಇರುತ್ತೆ. ಆ ರೀತಿ ಯೋಚಿಸಿ ಮಾಡಿದ್ದೇನೆ. ಆದರೆ ಇದನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಸವಾಲು, ಕುತೂಹಲದಿಂದ ಮೊದಲ ಪ್ರದರ್ಶನವಾಗುವ ಮಾ.12ಕ್ಕಾಗಿ ಕಾಯುತ್ತಿದ್ದೇನೆ. ಏಳೂವರೆ ತಾಸು ಕುಳಿತು ನೋಡುವ ವ್ಯವಧಾನ ಇರುತ್ತದೆಯೇ ಎಂಬ ಆತಂಕ ಎಚ್ಚರಿಕೆಯಿಂದಲೇ ಕಲಾವಿದ ಕೆಲಸ ಮಾಡಬೇಕಾಗುತ್ತದೆ. ಓವರ್‌ ಕಾನ್ಫಿಡೆನ್ಸ್‌ ಕೂಡ ಒಳ್ಳೆಯದಲ್ಲ ಎಂಬ ಎಚ್ಚರಿಕೆಯಿಂದಲೇ ನಡೆದುಕೊಂಡಿದ್ದೇನೆ.

ನಾಟಕ, ಸಿನಿಮಾ, ಕಿರುತೆರೆ ಮೂರರಲ್ಲಿಯೂ ಕೆಲಸ ಮಾಡಿದ್ದೀರಿ. ಯಾವ ರೀತಿ ಎನಿಸುತ್ತದೆ?

ಸಿನಿಮಾದಲ್ಲಿ ಎರಡು ಪುಟಗಳಷ್ಟನ್ನು ಹತ್ತು ಸೆಕೆಂಡ್‌ಗಳಲ್ಲಿ ತೋರಿಸಬಹುದು. ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ಯಲ್ಲಿ ಎತ್ತಿನ ಗಾಡಿ ಬರುವ ದೃಶ್ಯ ಇದಕ್ಕೆ ನಿದರ್ಶನ. ಆದರೆ ನಾಟಕದಲ್ಲಿ ಆ ರೀತಿ ಆಗಲ್ಲ. ನಾಟಕದಲ್ಲಿ ವಿವರಣೆ, ಸ್ವಗತ ಅಥವಾ ಪಾತ್ರದ ಮೂಲಕ ಹೇಳಿಸಬೇಕಾಗುತ್ತದೆ.

ಮುಂದಿನ ನಿಮ್ಮ ಗುರಿ ಏನು?

‘ಪರ್ವ’ ನಾಟಕ ನೂರು ಪ್ರದರ್ಶನ ಕಾಣಬೇಕು ಎಂಬುದು ನನ್ನ ಗುರಿ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಹಿಂದಿ, ಇಂಗ್ಲಿಷ್‌ ಸಬ್‌ ಟೈಟಲ್‌ ಬಳಸಿ, ನಾಟಕ ಪ್ರದರ್ಶಿಸಲಾಗುವುದು.