ತುಮಕೂರು(ಅ.31): ಹೇಮಾವತಿ ನೀರು ಜಿಲ್ಲೆಗೆ ಹರಿಸುವಲ್ಲಿ ತಾರತಮ್ಯ ಅನುರಿಸಲು ಸಾಧ್ಯವಿಲ್ಲ. ಹಾಸನ ಜಿಲ್ಲೆಯ ಉಸ್ತುವಾರಿ ವಹಿಸಿರುವ ಸಚಿವ ಮಾಧುಸ್ವಾಮಿ ಎರಡೂ ಜಿಲ್ಲೆಗೂ ನ್ಯಾಯ ಒದಗಿಸಿ ನಿಯಮಾನುಸಾರ ನೀರು ಬಿಡುಗಡೆಗೊಳಿಸಿ ನ್ಯಾಯಯುತವಾಗಿ ಎಲ್ಲಾ ಕೆರೆಗಳನ್ನು ತುಂಬಿಸಲಿದ್ದಾರೆ ಎಂದು ಸಂಸದ ಜಿ.ಎಸ್‌.ಬಸವರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುಬ್ಬಿ ತಾಲೂಕಿನ ಸಿ.ಎಸ್‌.ಪುರ ಹೋಬಳಿ ಚನ್ನೇನಹಳ್ಳಿ ಗ್ರಾಮದಲ್ಲಿ 1.50 ಕೋಟಿ ನಾಲ್ಕು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು ಮಾತನಾಡಿ, ಪ್ರತಿ ಬಾರಿ ತುಮಕೂರು ಜಿಲ್ಲೆಗೆ ಹೇಮೆ ವಿಚಾರದಲ್ಲಿ ಅನ್ಯಾಯವಾಗುತ್ತಿತ್ತು. ಅಂಕಿ ಅಂಶದಲ್ಲಿ 24 ಟಿಎಂಸಿ ನೀರು ಹರಿದ ಲೆಕ್ಕವನ್ನೂ ನೀಡಲಾಗಿತ್ತು. ಈ ಬಾರಿ ನ್ಯಾಯವಾಗಿ ನೀರು ಹರಿಸಲಾಗುತ್ತಿದೆ ಎಂದಿದ್ದಾರೆ.

ತಪ್ಪಿದ ಎಚ್‌.ಡಿ.ರೇವಣ್ಣರ ಕಾಟ:

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಕಾಟ ನಮ್ಮ ಜಿಲ್ಲೆಗಿಲ್ಲ. ಹೇಮೆ ನೀರು ನಮ್ಮ ಪಾಲಿನದ್ದೂ ನೀಡಲು ತೊಂದರೆ ಕೊಡುತ್ತಿದ್ದ ಬಗ್ಗೆ ಜನರಿಗೆ ತಿಳಿದಿದೆ. ಈ ನಿಟ್ಟಿನಲ್ಲಿ ಮಾಧುಸ್ವಾಮಿ ರೈತರ ಸಂಕಷ್ಟಅರಿತಿದ್ದಾರೆ. ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು. ಕಡಬ ಮತ್ತು ಸಿ.ಎಸ್‌.ಪುರ ಕೆರೆಗಳನ್ನು ಕೋಡಿ ಬೀಳಿಸುವ ಮೂಲಕ ರೈತರಿಗೆ ಹರ್ಷ ತರುತ್ತೇವೆ ಎಂದು ಸಂಸದರು ಭರವಸೆ ನೀಡಿದ್ದಾರೆ.

ಬಾಗಿನ ಅರ್ಪಿಸಲು ಕುದುರೆ ಏರಿ ಬಂದ ಬಿಜೆಪಿ ಶಾಸಕ

ಆರ್ಥಿಕ ಸಂಕಷ್ಟವನ್ನು ಹಿಂದಿನ ಸರ್ಕಾರಗಳು ನೀಡಿವೆ. ಇದನ್ನು ನಿಭಾಯಿಸುವ ಜವಾಬ್ದಾರಿ ಹೊತ್ತ ಯಡಿಯೂರಪ್ಪ ಅವರು ನೆರೆ ಸಂತ್ರಸ್ತರ ಕಾಳಜಿ ವಹಿಸಿ ಆರ್ಥಿಕ ಕ್ರೊಢೀಕರಣ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನುದಾನ ಮಂಜೂರು ತಡವಾಗಿದೆ. ಡಿಸೆಂಬರ್‌ ಮಾಹೆಯಲ್ಲಿ ಸಾಕಷ್ಟುಅನುದಾನ ಶಾಸಕರಿಗೆ ಪಕ್ಷಾತೀತವಾಗಿ ನೀಡಲಿದ್ದಾರೆ. ತುರುವೇಕೆರೆ ಕ್ಷೇತ್ರದಲ್ಲಿ .150 ಕೋಟಿ ಕೆಲಸವನ್ನು ಮುಂದಿನ ಎರಡು ತಿಂಗಳಲ್ಲಿ ಮಂಜೂರು ಮಾಡಲಾಗುವುದು ಎಂದಿದ್ದಾರೆ.

ಉದ್ಯೋಗ ಸೃಷ್ಟಿಗೆ ಒತ್ತು:

ಶಾಸಕ ಮಸಾಲಾ ಜಯರಾಮ್‌ ಮಾತನಾಡಿ, ಸಿ.ಎಸ್‌.ಪುರ ಹೋಬಳಿ ಜನರಿಗೆ ಕೊಟ್ಟಮಾತಿನಂತೆ ಹೇಮೆ ನೀರು ಹರಿಸುತ್ತಿದ್ದೇನೆ. ಬಾಕಿ ಇರುವ ಸಿ.ಎಸ್‌.ಪುರ ಮತ್ತು ಮಾವಿನಹಳ್ಳಿ ಕೆರೆಗೂ ಶೀಘ್ರದಲ್ಲಿ ನೀರು ಹರಿಸಲಾಗುವುದು. ಸಂಸದರು, ಜಿಲ್ಲಾ ಸಚಿವರ ಸಹಕಾರದಲ್ಲಿ ಎಲ್ಲಾ ಕೆರೆಗಳಿಗೂ ನೀರು ವಿತರಿಸಲಾಗುವುದು. ಈ ಜತೆಗೆ ಅಭಿವೃದ್ಧಿ ಕೆಲಸಗಳಲ್ಲಿ ಮೊದಲು ಸಂಪರ್ಕ ರಸ್ತೆಗೆ ಆದ್ಯತೆ ನೀಡಲಾಗಿದೆ. ನಂತರದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿ ಕೈಗಾರಿಕಾ ವಲಯ ಸ್ಥಾಪನೆ ಮಾಡಲಾಗುವುದು. ಶಿಕ್ಷಣ ಕ್ಷೇತ್ರಕ್ಕೂ ಮಹತ್ವ ನೀಡಿದ್ದು, ಶಾಲಾ ಕೊಠಡಿ ಮತ್ತು ಶಿಕ್ಷಕರ ಕೊರತೆ ನೀಗಿಸಲಾಗುವುದು. ಉನ್ನತ ಶಿಕ್ಷಣದ ಕಾಲೇಜುಗಳ ಸ್ಥಾಪನೆಗೆ ಸರ್ಕಾರದಲ್ಲಿ ಚರ್ಚಿಸಿದ್ದೇನೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಬಿ.ಎಸ್‌.ನಾಗರಾಜು, ಇಡಗೂರು ರವಿ, ಮಹೇಶ್‌, ಭದ್ರೇಗೌಡ, ತಾಪಂ ಸದಸ್ಯ ಭಾನುಪ್ರಕಾಶ್‌, ಗ್ರಾಪಂ ಅಧ್ಯಕ್ಷೆ ಗೀತಾ ರಾಮಕೃಷ್ಣ ಮುಂತಾದವರು ಭಾಗವವಿಸಿದ್ದರು.

ತುಮಕೂರು: ಆಟೋ ತಪ್ಪಿಸಲು ಹೋಗಿ ಬಸ್ ಪಲ್ಟಿ, ಸ್ಥಳದಲ್ಲೇ 5 ಮಂದಿ ಸಾವು