Asianet Suvarna News Asianet Suvarna News

ತುಮಕೂರು: ಮರಳು ದಂಧೆಗೆ ಬ್ರೇಕ್ ಹಾಕ್ತಾರಾ ಸಚಿವ ಮಾಧುಸ್ವಾಮಿ ..?

ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಕ್ರಮ ಮರಳು ದಂಧೆಯಿಂದ ಸರ್ಕಾರಕ್ಕೂ ನಷ್ಟವಾಗುತ್ತಿದ್ದು ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದದಾರೆ.

J C Madhu Swamy to put a break to illegal sand mining
Author
Bangalore, First Published Oct 25, 2019, 10:45 AM IST

ತುಮಕೂರು(ಅ.25) : ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ದಂಧೆಗೆ ಕಡಿವಾಣ ಹಾಕಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ವಿವಿಧ ಶಾಸಕರು, ಸಂಸದರು ಹಾಗೂ ಅಧಿಕಾರಿಗಳೊಂದಿಗೆ ಜಿಲ್ಲಾ ಖನಿಜ ಪ್ರತಿಷ್ಠಾಪನೆ, ನರೇಗಾ ಯೋಜನೆ ಪ್ರಗತಿ, ಪ್ರವಾಸಿ ಟ್ಯಾಕ್ಸಿ ವಿತರಣೆ ಕುರಿತು ಸಭೆ ನಡೆಸಿ ಮಾತನಾಡಿ, ಮರಳನ್ನು ಲಾರಿಗಳಲ್ಲಿ ಬೆಂಗಳೂರು, ಮೈಸೂರಿಗೆ ಸಾಗಿಸುತ್ತಿರುವವರಿಗೆ ಅಕ್ರಮವಾಗಿ ಅನುಮತಿ ನೀಡಲಾಗುತ್ತಿದೆ. ಆದರೆ, ಸೈಕಲ್‌ ಮೇಲೆ ಚೀಲದಲ್ಲಿ ಮರಳು ತುಂಬಿಕೊಂಡು ಹೋಗುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಮಕೂರು: ಎಸಿಬಿಗೆ ಸಲ್ಲಿಕೆಯಾಗಿದ್ದು ಒಂದೇ ಒಂದು ದೂರು..!

ಕೊರಟಗೆರೆಯಲ್ಲಿ 1 ರಾತ್ರಿಗೆ 200 ಲಾರಿಗಳು ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದು, ಅಧಿಕಾರಿಗಳು ಕ್ರಮಕೈಗೊಳ್ಳದೆ ತಮಗಿಷ್ಟಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಮರಳು ದಂಧೆಯಿಂದ ಸರ್ಕಾರಕ್ಕೂ ಆದಾಯವಿಲ್ಲ. ತೆರಿಗೆಗೂ ಕತ್ತರಿ ಬೀಳುತ್ತಿದೆ. ಇನ್ನಾದರೂ ಮರಳು ದಂಧೆಗೆ ಕಡಿವಾಣಿ ಹಾಕಿ ಎಂದಿದ್ದಾರೆ.

ಆದ್ಯತಾ ಅಭಿವೃದ್ಧಿಗೆ ಶೇ.40 ಹಣ ವಿನಿಯೋಗಿಸಿ:

ಗಣಿಬಾಧಿತ ಪ್ರದೇಶಗಳನ್ನು ಪುನಶ್ಚೇತನಗೊಳಿಸಲು ಡಿಎಂಎಫ್‌ಟಿ(ಜಿಲ್ಲಾ ಖನಿಜ ಪ್ರತಿಷ್ಠಾಪನಾ ಟ್ರಸ್ಟ್‌)ನಿಧಿಯಲ್ಲಿರುವ 18 ಕೋಟಿ ರು. ಗಳಲ್ಲಿ ಉಂಬಳಿ(ದತ್ತಿ)ಗಾಗಿ ಶೇ.10ರಷ್ಟು, ಆಡಳಿತ ವೆಚ್ಚಕ್ಕಾಗಿ ಶೇ.5ರಷ್ಟುಹಣವನ್ನು ವಿನಿಯೋಗಿಸಬೇಕು. ಉಳಿದ ಶೇ. 85ರಷ್ಟುಹಣದಲ್ಲಿ ಶೇ.60ರಷ್ಟುಹಣವನ್ನು ಗಣಿಗಾರಿಕೆಯಿಂದ ನೇರವಾಗಿ ಬಾಧೆಗೊಳಗಾದ ಪ್ರದೇಶಗಳಲ್ಲಿ ಕುಡಿಯುವ ನೀರು, ಆರೋಗ್ಯ ಸೇವೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಯೋವೃದ್ಧರ ಕಲ್ಯಾಣ, ಕೌಶಲ್ಯಾಭಿವೃದ್ಧಿ, ಶೌಚಾಲಯ ನಿರ್ಮಾಣ, ಪರಿಸರ ಸಂರಕ್ಷಣೆಗಾಗಿ ಹಾಗೂ ಶೇ.40ರಷ್ಟುಹಣವನ್ನು ಇತರೆ ಆದ್ಯತೆಗಳಾದ ಮೂಲಭೂತ ಸೌಕರ್ಯ, ನೀರಾವರಿ, ವಾಟರ್‌ಶೆಡ್‌ ಅಭಿವೃದ್ಧಿಗಾಗಿ ವಿನಿಯೋಗಿಸಬೇಕೆಂದು ನಿರ್ದೇಶನ ನೀಡಿದ್ಧಾರೆ.

ಜಲ್ಲಿ ಕ್ರಷರ್‌ಗಳ ಪಟ್ಟಿತಯಾರಿಸಿ:

ಶಾಸಕ ಗೌರಿಶಂಕರ್‌ ಮಾತನಾಡಿ, ಗಣಿಬಾಧಿತ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಮಳೆ ನೀರು ಕಾಲುವೆಗಳು ಮುಚ್ಚಿಹೋಗಿ ಅಂತರ್ಜಲ ಬತ್ತಿಹೋಗುತ್ತಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ ಎಂದರಲ್ಲದೆ, ಇಲಾಖೆ ಗುರುತಿಸಿರುವ ಜಲ್ಲಿ ಕ್ರಷರ್‌ಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಪಟ್ಟಿತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿದ್ದಾರೆ.

ನಂತರ ಮಾತನಾಡಿದ ಮಾಧುಸ್ವಾಮಿ ನಿಯಮಾವಳಿಯನ್ವಯ ಜಿಲ್ಲೆಯಲ್ಲಿರುವ ಗಣಿಬಾಧಿತ ಪ್ರದೇಶ, ಚಾಲ್ತಿಯಲ್ಲಿರುವ ಕಲ್ಲುಗಣಿ ಗುತ್ತಿಗೆ ಮತ್ತು ಕ್ರಷರ್‌ ಘಟಕಗಳನ್ನು ಗುರುತಿಸಿ ಮತ್ತೊಮ್ಮೆ ಪರಿಶೀಲಿಸಿ ಪಟ್ಟಿತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಶ್ರಯ, ಜನತಾ ಮನೆ ಸೇರಿದಂತೆ ಸರ್ಕಾರಿ ವಸತಿ ನಿರ್ಮಾಣ ಕಾಮಗಾರಿಗಳಿಗೆ ಮರಳು ಉಪಯೋಗಕ್ಕೆ ಅನುಮತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪಂಕಜಾ ಅವರಿಗೆ ಸಚಿವರು ಸೂಚಿಸಿದರು.

ಮೆರಿಟ್‌ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಬೇಡಿ:

ಪ್ರವಾಸೋದ್ಯಮ ಇಲಾಖೆಯಿಂದ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಾಯಧನ ಒದಗಿಸುವ ಬಗ್ಗೆ ಸಭೆ ನಡೆಸಿದ ಸಚಿವ ಮಾಧುಸ್ವಾಮಿ, ಸಹಾಯಧನ ಸೌಲಭ್ಯ ಆಯ್ಕೆಗೆ ನಿಗದಿಪಡಿಸಿರುವ ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯಲ್ಲಿ ಮೆರಿಟ್‌ ಪರಿಗಣಿಸದೆ ಹಿಂದುಳಿದ ಅರ್ಹ ಬಡ ಅಭ್ಯರ್ಥಿಗಳಿಗೆ ಮಾತ್ರ ದೊರೆಯುವಂತೆ ಮಾಡಿ. ಐಎಎಸ್‌ ಹುದ್ದೆಗೆ ಆಯ್ಕೆ ಮಾಡುವ ರೀತಿಯಲ್ಲಿ ಮೆರಿಟ್‌ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಬೇಡಿ. ನಿಯಮವನ್ನು ಸಡಿಲಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌ಗೆ ಸಲಹೆ ನೀಡಿದ್ದಾರೆ.

ಸುರಕ್ಷಿತ ಜಾಗದಲ್ಲಿ ಶಾಶ್ವತ ಮನೆಗಳ ನಿರ್ಮಾಣ: ಸಚಿವ ಸೋಮಣ್ಣ

ಜಿಲ್ಲಾಧಿಕಾರಿಗಳು ಮಾತನಾಡಿ, 2016ರಿಂದ ಪ್ರವಾಸಿ ಟ್ಯಾಕ್ಸಿ ಸಹಾಯಧನ ಸೌಲಭ್ಯಕ್ಕೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ತಮ್ಮ ಸೂಚನೆಯಂತೆ ನಿಯಮಗಳನ್ನು ಸಡಿಲಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರಲ್ಲದೆ, ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಹೈಡೆಫಿನೇಷನ್‌ ವಿಡಿಯೋ ಹಾಗೂ ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿ ವ್ಯಾಪಕ ಪ್ರಚಾರಗೊಳಿಸಲಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಜ್ಯೋತಿಗಣೇಶ್‌, ಬಿ.ಸಿ.ನಾಗೇಶ್‌, ಮಸಾಲ ಜಯರಾಂ, ಬಿ.ಸತ್ಯನಾರಾಯಣ, ಎಂಎಲ್ಸಿಗಳಾದ ಬೆಮೆಲ್‌ ಕಾಂತರಾಜ್‌, ತಿಪ್ಪೇಸ್ವಾಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಅನುದಾನ ಲೂಟಿಯಾಗಿರುವ ಬಗ್ಗೆ ತನಿಖೆಯಾಗಲಿ:

ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆ ಸಂಪೂರ್ಣ ಹಾಳಾಗಿದೆ. ತೋಟಗಾರಿಕೆ ಬೆಳೆಗಳಿಗೆ ತಗಲುವ ವಿವಿಧ ರೂೕಗಗಳ ಹತೋಟಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲೆಯಲ್ಲಿ ವಿತರಿಸಿರುವ ಪಾಲಿಹೌಸ್‌, ಹಸಿರು ಮನೆ ಫಲಾನುಭವಿಗಳ ಆಯ್ಕೆಯಲ್ಲಿ ಲೋಪವಾಗಿರುವ ಬಗ್ಗೆ ದೂರುಗಳಿವೆ. ಪರಿಶಿಷ್ಟಜಾತಿ/ ಪಂಗಡ ಸಮುದಾಯದವರಿಗೆ ವಿತರಿಸಲಾಗುವ ಯೋಜನೆಗಳ ಅನುದಾನವನ್ನು ಏಜೆನ್ಸಿಗಳು ಲೂಟಿ ಮಾಡುತ್ತಿದ್ದು, ತನಿಖೆಯಾಗಬೇಕು ಎಂದು ಪಟ್ಟುಹಿಡಿದಿದ್ದಾರೆ.

Follow Us:
Download App:
  • android
  • ios