ತುಮಕೂರು(ಅ.11): ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸ ಎಂದಿಗೂ ಮರೆಯುವಂತದ್ದಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದು, ಗ್ರಾಮಾಂತರ ಕ್ಷೇತ್ರದಿಂದ ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಮತ್ತೆ ಗೆದ್ದು ಬರುವೆ ಎಂದು ಮಾಜಿ ಶಾಸಕ ಸುರೇಶ್‌ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತುಮಕೂರಿನ ತಾಲೂಕಿನ ಮಂಚಕಲ್‌ಕುಪ್ಪೆ ಗ್ರಾಮದಲ್ಲಿ ಅಭಿಮಾನಿಗಳು ಆಚರಿಸಿದ ತಮ್ಮ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ,  ತುಮಕೂರು ಗ್ರಾಮಾಂತರ ಕ್ಷೇತ್ರ ನನ್ನ ಕರ್ಮಭೂಮಿ, ದೇವಭೂಮಿ. ಪುಣ್ಯ ಪುರುಷ ಡಾ.ಶಿವಕುಮಾರ ಸ್ವಾಮೀಜಿ ನೆಲೆಸಿದ ಪುಣ್ಯಭೂಮಿ. ಡಕಣಾಚಾರ್ಯರ ನೆಲೆವೀಡು. ಗೂಳೂರು ಗಣೇಶನ ತವರೂರು. ದೇವರಾಯನದುರ್ಗ, ನಿಡುವಳಲು ಲಕ್ಷ್ಮೀ, ಹೆಬ್ಬೂರಿನ ಬ್ಯಾಟರಾಯಸ್ವಾಮಿ ಹೀಗೆ ಹತ್ತು ಹಲವು ವೈಶಿಷ್ಟ್ಯಗಳ ತವರೂರು ತುಮಕೂರು ಗ್ರಾಮಾಂತರ ಕ್ಷೇತ್ರ. ಈ ಕ್ಷೇತ್ರದ ಜನ ಭಾಗ್ಯವಂತರು. ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನಾನು ಪುನೀತನಾಗಿದ್ದೇನೆ ಎಂದಿದ್ದಾರೆ.

ಜನರ ತೀರ್ಪನ್ನು ಸ್ವಾಗತಿಸುತ್ತೇನೆ:

ತುಮಕೂರು ಗ್ರಾಮಾಂತರ ಕ್ಷೇತ್ರದ ಜನತೆ ತೋರಿಸಿದ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬರುವ ರೀತಿ ಎಂದೂ ನಡೆದುಕೊಂಡಿಲ್ಲ. ಇಡೀ ರಾಜ್ಯದಲ್ಲಿ ದೆಹಲಿ ಸಂಸ್ಥೆ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಅಭಿವೃದ್ಧಿಯಲ್ಲಿ ಅತೀ ಮೂಂಚೂಣಿಯಲ್ಲಿದ್ದ ನನಗೆ 2 ಬಾರಿ ಅವಾರ್ಡ್‌ ನೀಡಿದೆ. ಆದರೆ ನನಗೆ 3ನೇ ಬಾರಿಗೆ ಜನತೆ ಅವಾರ್ಡ್‌ ನೀಡಲಿಲ್ಲ. ಜನರ ತೀರ್ಪನ್ನು ಸ್ವೀಕರಿಸಿ ಸ್ವಾಗತಿಸಿದ್ದೇನೆ ಎಂದರು.

ಹೆಬ್ಬೂರು, ಬುಗುಡನಹಳ್ಳಿ , ಹೊನ್ನುಡುಕೆ, ಗೂಳೂರು, ಊರ್ಡಿಗೆರೆ, ಹಿರೇಹಳ್ಳಿ, ಸೀತಕಲ್ಲು ,ಬೆಳ್ಳಾವಿ, ನಾಗವಲ್ಲಿ, ಸಿರಿವರ ಗ್ರಾಮಗಳಲ್ಲಿ ಸುರೇಶ್‌ ಗೌಡರ ಜನ್ಮದಿನದ ನಿಮಿತ್ತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಯುವ ಮುಖಂಡ ರಾಜೇಶ ವಂದಿಸಿದರು. ಯುವ ಮುಖಂಡ ರಂಗಸ್ವಾಮಿ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸದಸ್ಯ ವೈ.ಎಚ್‌.ಹುಚ್ಚಯ್ಯ, ಬೆಳಗುಂಬ ನರಸಿಂಹಮೂರ್ತಿ ರಾಜೇಗೌಡ, ಗೂಳೂರು ಶಿವಕುಮಾರ್‌, ತಾಪಂ ಅಧ್ಯಕ್ಷ ಗಂಗಾಂಜಿನೇಯ, ಡಾ.ನಾಗರಾಜ್‌ ಲಕ್ಷ್ಮೀಶ್‌ ಓಂ ನಮೋ ನಾರಾಯಣ ಪಂಚೆ ರಾಮಚಂದ್ರಯ್ಯ, ಉಮೇಶಗೌಡ, ಸಿದ್ದೇಗೌಡ, ಶಾಂತಕುಮಾರ್‌, ವಿಜಿಕುಮಾರ್‌, ಪಂಡಿತನಹಳ್ಳಿ ರಮೇಶ, ಯುವ ಮುಖಂಡ ರಾಜೇಶ, ರಂಗಸ್ವಾಮಿ, ಸಾಸಲು ಮೂರ್ತಿ, ಮಲ್ಲಿಕಾರ್ಜುನ ಸ್ವಾಮಿ, ಮಹದೇವಯ್ಯ, ಲಕ್ಷಮ್ಮ ರಾಮಮೂರ್ತಿ ಉಪಸ್ಥಿತರಿದ್ದರು.

ಕೋಪಿಯಲ್ಲ ಸಹೃದಯಿ

ನಾನು ಜನ್ಮತಃ ಸಹೃದಯಿ. ಆದರೆ, ನಾನು ಕೋಪಿಷ್ಠ, ಗರ್ವಿಷ್ಠ ಎಂದೆಲ್ಲ ವಿರೋಧ ಪಕ್ಷದವರು ಬಿಂಬಿಸಿದ್ದರ ಪರಿಣಾಮ ನಾನು ಸೋತಿರಬಹುದು. ಇದರಿಂದಾಗಿ ಅಭಿವೃದ್ಧಿಯಲ್ಲಿ ಕ್ಷೇತ್ರ 10 ವರ್ಷಗಳ ಕಾಲ ಹಿಂದೆ ಹೋಗುವಂತೆ ಆಗಿದೆ. ಆದರೆ, ಬರುವಂತ ದಿನಗಳಲ್ಲಿ ಸಮಾರೋಪಾದಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತೇನೆ. ನನ್ನಿಂದ ಗೊತ್ತಿದ್ದೋ ಗೊತ್ತಿಲ್ಲದೆ ಕೆಲವು ಸಲ ಲೋಪ ದೋಷಗಳು ಆಗಿರಬಹುದು, ನನ್ನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅವರಲ್ಲಿ ಕ್ಷಮೆ ಯಾಚಿಸುವೆ ಎಂದು ಸುರೇಶಗೌಡ ತಿಳಿಸಿದರು.