ತುಮಕೂರು(ಅ.23): ಜಿಲ್ಲೆಯ ಬಹುತೇಕ ಕಡೆ ಧಾರಾಕಾರಾವಾಗಿ ಮಳೆ ಸುರಿದಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಕೆಲವು ಕಡೆ ಧಾರಾಕಾರ ಮಳೆ ಮತ್ತೆ ಕೆಲವು ಕಡೆ ಸಾಧಾರಣ ಮಳೆ ಸುರಿದಿದೆ.

24 ಗಂಟೆಗಳ ಅವಧಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ದಾಖಲಾಗಿರುವ ಸರಾಸರಿ ಮಳೆ ಪ್ರಮಾಣ 27.58 ಮಿಲಿಮೀಟರ್‌ಗಳಷ್ಟುಆಗಿದ್ದು, ತಾಲೂಕುವಾರು ಸರಾಸರಿ ಮಳೆ ಪ್ರಮಾಣ ಮಿ.ಮೀ.ಗಳಲ್ಲಿ ಈ ಕೆಳಕಂಡಂತಿದೆ. ತುಮಕೂರು 18.6, ಗುಬ್ಬಿ 57.3, ಕುಣಿಗಲ್‌ 13.1, ತಿಪಟೂರು 31.9, ಚಿಕ್ಕನಾಯಕನಹಳ್ಳಿ 38, ತುರುವೇಕೆರೆ 59.6, ಮಧುಗಿರಿ 16.7, ಶಿರಾ 28.7, ಕೊರಟಗೆರೆ 7.9, ಪಾವಗಡ 4 ಮಿಮೀ. ನಷ್ಟುಮಳೆಯಾಗಿದೆ.

ಗುಬ್ಬಿಯಲ್ಲಿ ಅಧಿಕ ಮಳೆ:

ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಆದರೆ 10 ಗಂಟೆ ಬಳಿಕ ಸೋನೆ ಮಳೆ ಆರಂಭವಾಯಿತು. ಸಂಜೆ ಮಳೆ ಪ್ರಮಾಣ ತೀವ್ರಗೊಂಡಿತು. ತುಮಕೂರಿನಲ್ಲಿ ಬೆಳಗ್ಗೆಯಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿತ್ತು. ಆದರೆ ಸಂಜೆ 4 ಗಂಟೆಗೆ ಆರಂಭವಾದ ಮಳೆ 1 ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು.

ತುಮಕೂರು: ಧಾರಾಕಾರ ಮಳೆಗೆ ಹೆದ್ದಾರಿ ಬಿರುಕು

ಬಳಿಕ ಮಳೆಗೆ ಬಿಡುವು ಸಿಕ್ಕಿತ್ತು. ಮತ್ತೆ 7.30ಕ್ಕೆ ಆರಂಭವಾದ ಮಳೆ 1 ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು. ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ತುಮಕೂರಿನ ಜೂನಿಯರ್‌ ಕಾಲೇಜು ಮೈದಾನ ಅಕ್ಷರಶಃ ಕೆಸರಿನ ಗದ್ದೆಯಾಯಿತು. ಮಳೆಯಿಂದಾಗಿ ರಸ್ತೆಯಲ್ಲಿ ಜನರ ಸಂಚಾರ ಅತ್ಯಂತ ವಿರಳವಾಗಿತ್ತು. ಶೆಟ್ಟಿಹಳ್ಳಿ ಕೆಳ ಸೇತುವೆ ಬಳಿ ಮಳೆಯಿಂದಾಗಿ ಟ್ರಾಫಿಕ್‌ ಜಾಮ್‌ ಆಗಿ ರಸ್ತೆ ಸಂಚಾರಕ್ಕೆ ಕೊಂಚ ತೊಂದರೆಯಾಯಿತು. ಇನ್ನು ಗುಬ್ಬಿಯಲ್ಲಿ ದೊಡ್ಡ ಮಟ್ಟದಲ್ಲಿ ಮಳೆಯಾಗಿದೆ.

ನೀರು ನಿಲ್ಲಿಸುವ ಪ್ರಯತ್ನ:

ಗುಬ್ಬಿ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ನಿಟ್ಟೂರು ಬಳಿ ಹೇಮಾವತಿ ನಾಲೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಬಿರುಕು ಬಿಟ್ಟಿದೆ. ರಸ್ತೆ ಬಿರುಕು ಬಿಟ್ಟಿದ್ದರಿಂದ ರಸ್ತೆಯಲ್ಲಿ ಕೆಲ ಕಾಲ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ತೀವ್ರ ಸಂಚಾರದ ಸಮಸ್ಯೆ ಉಂಟಾಯಿತು. ರಭಸದಿಂದ ನೀರು ಹರಿಯುತ್ತಿದ್ದರಿಂದ ರಸ್ತೆ ಕುಸಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಸ್ಥಳೀಯರು ಮೂಟೆಗಳನ್ನು ಅಳವಡಿಸಿ ನೀರು ನಿಲ್ಲಿಸುವ ಪ್ರಯತ್ನ ಮಾಡಿದರು.

ರಾಷ್ಟ್ರೀಯ ಹೆದ್ದಾರಿಗೆ ಭೂ ಸ್ವಾಧೀನ, ಪರಿಹಾರ ಕೊಟ್ಟಿದ್ರೂ ನಡೀತು ಮಾತಿನ ಚಕಮಕಿ..!

ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಹಾದು ಹೋಗುವ ರಸ್ತೆಯ ಕೆಳಭಾಗದಲ್ಲಿ ಹರಿಯುವ ಹೇಮಾವತಿ ನಾಲೆಗೆ ಮಳೆ ನೀರು ರಭಸದಿಂದ ಹರಿದಿದ್ದರಿಂದ ಬಿರುಕು ಕಾಣಿಸಿಕೊಂಡಿತು. ಕೇಬಲ್‌ ಅಳವಡಿಕೆಗಾಗಿ ತೆಗೆದಿದ್ದ ಗುಂಡಿಯಲ್ಲಿ ನೀರು ತುಂಬಿಕೊಂಡು ಮಣ್ಣು ಕುಸಿತ ಉಂಟಾಯಿತು.

ರಸ್ತೆ ಗುಂಡಿಗಳಲ್ಲಿ ತುಂಬಿದ ನೀರು:

ತುರುವೇಕೆರೆ ತಾಲೂಕಿನಾದ್ಯಂತ ಮಂಗಳವಾರ ಧಾರಾಕಾರ ಮಳೆ ಸುರಿಯಿತು. ಮಳೆಯಿಂದಾಗಿ ದಂಡಿನಶಿವರ ಹೋಬಳಿಯಲ್ಲಿ 6 ಮನೆಗಳು ಕುಸಿದು ಹೋಗಿದೆ. ಡಿ. ಕಲ್ಕೆರೆ ಗ್ರಾಮದಲ್ಲಿ ಶಹಜಾನ್‌ ಎಂಬುವರ ಕೋಳಿ ಫಾರಂಗೆ ನೀರು ನುಗ್ಗಿ 500 ಕೋಳಿಗಳು ಸಾವನ್ನಪ್ಪಿದೆ. ಮಾದಿಹಳ್ಳಿ ಅರಳಿಕೆರೆ ಮಧ್ಯೆ ರಸ್ತೆ ಮಧ್ಯೆ 4 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ.

ಸುಮಾರು ವಿದ್ಯುತ್‌ ಕಂಬಗಳು ಬಿದ್ದಿವೆ. ಮಳೆಯಿಂದಾಗಿ ಚಳಿಯ ವಾತಾವರಣ ಇತ್ತು. ತುಮಕೂರು ನಗರದಲ್ಲಿ ಮಳೆಯಿಂದಾಗಿ ಚರಂಡಿಗಳಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ರಸ್ತೆಯಲ್ಲಿ ವಿವಿಧ ಕಾಮಗಾರಿಗಾಗಿ ಅಗೆದಿದ್ದ ಗುಂಡಿಗಳಲ್ಲಿ ನೀರು ತುಂಬಿ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಶಿರಾದಲ್ಲೂ ಕೂಡ ಧಾರಾಕಾರವಾಗಿ ಮಳೆ ಸುರಿದಿದೆ.