ಮಂಡ್ಯ(ಅ.23): ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (275) ಭೂ ಸ್ವಾಧೀನ ಪ್ರಕ್ರಿಯು ಪೊಲೀಸರ ಬಿಗಿಭದ್ರತೆಯಲ್ಲಿ ಮಂಗಳವಾರ ನಡೆದಿದೆ.

ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಬಳಿ ಆಟೋ ನಿಲ್ದಾಣವನ್ನು ಸ್ವಾಧೀನ ಪಡೆದುಕೊಳ್ಳುವ ವೇಳೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಆಟೋಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಪರಿಹಾರ ನೀಡಿದ್ರೂ ಅಡ್ಡಿ ಮಾಡಿದ್ರು:

ಮದ್ದೂರು ಪಟ್ಟಣದ ಕೊಲ್ಲಿ ಸರ್ಕಲ್‌ನಿಂದ ಸಂಜಯ ಚಿತ್ರಮಂದಿರದವರೆಗೆ ಭೂ ಸ್ವಾಧೀನ ಅಧಿಕಾರಿಗಳು, ಮತ್ತು ಕಂದಾಯ ಅಧಿಕಾರಿಗಳು, ಪೊಲೀಸರ ಬಂದೋಬಸ್ತಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದ್ದರು. ಹೆದ್ದಾರಿ ಅಗಲೀಕರಣಕ್ಕಾಗಿ ಭೂ ಸ್ವಾಧೀನ ಪಡೆಸಿಕೊಳ್ಳುವ ಮುನ್ನ ಅಕ್ಕಪಕ್ಕದ ಜಮೀನು ಮತ್ತು ಕಟ್ಟಡಗಳ ಮಾಲೀಕರುಗಳಿಗೆ ಸರ್ಕಾರದಿಂದ ಪರಿಹಾರ ನೀಡಿದ್ದರೂ ಸಹ ಮಾಲೀಕರುಗಳು ಜಮೀನು ಸ್ವಾಧೀನ ಪ್ರಕ್ರಿಯೆಗೆ ಅಡ್ಡಿ ಪಡಿಸುತ್ತಿದ್ದರು.

'ಜಾಕ್‌ವೆಲ್ ನನ್ನ ಸಮಾಧಿ ಮೇಲೆ ಅಳವಡಿಸಿ': ಕುಡಿಯುವ ನೀರಿನಲ್ಲೂ ಕೈ ಶಾಸಕನ ರಾಜಕೀಯ..!

ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಸೂರಜ್, ಹೆದ್ದಾರಿ ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕ ಮೂರ್ತಿ, ನೇತೃತ್ವದಲ್ಲಿ ಕಂದಾಯ ಮತ್ತು ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿ ನಿರ್ಮಾಣದ ಭೂಮಿ ಮತ್ತು ಕಟ್ಟಡಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ನೆಲಸಮಗೊಳಿಸಿ ಭೂ ಸ್ವಾಧೀನ ಪಡಿಸಿಕೊಳ್ಳಲು ಕಾರ್ಯಾಚರಣೆಗೆ ಇಳಿದಿದ್ದಾರೆ.

ಅಧಿಕಾರಿಗಳು ಮತ್ತುಆಟೋ ಚಾಲಕರ ನಡುವೆ ಮಾತಿನ ಚಕಮಕಿ:

ಈ ವೇಳೆ ಕಟ್ಟಡದ ಮಾಲೀಕರು ಹಾಗೂ ಆಟೋಚಾಲಕರು ಭೂ ಸ್ವಾಧೀನ ಕಾಮಗಾರಿಗೆ ಅಡ್ಡಿಪಡಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಆಟೋ ನಿಲ್ದಾಣವನ್ನು ಬಿಟ್ಟು ಉಳಿದ ಸ್ಥಳವನ್ನು ಸ್ವಾಧೀನ ಪಡಿಸಿಕೊಳ್ಳುವಂತೆ ಒತ್ತಾಯಿಸಿದರು.ಅಧಿಕಾರಿಗಳು ಮತ್ತುಆಟೋ ಚಾಲಕರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶ ಮಾಡಿದ ಸಿಪಿಐ ಎನ್‌.ವಿ.ಮಹೇಶ್‌, ಪಿಎಸ್‌ಐ ಮಂಜೇಗೌಡ, ಪ್ರೊಬೇಷನರಿ ಪಿಎಸ್‌ಐ ರವಿಕುಮಾರ್‌ ಆಟೋ ಚಾಲಕರನ್ನು ಸಮಾಧಾನ ಪಡಿಸಿದರು. ಆಟೋ ನಿಲ್ದಾಣಕ್ಕೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಭೂ ಸ್ವಾಧೀನ ಪ್ರಕ್ರಿಯೆಕಾಮಗಾರಿಗೆ ಅವಕಾಶ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ ನಂತರ ಕಾಮಗಾರಿ ಮುಂದುವರೆಯಿತು.

ರೈತನಿಂದ ಲಂಚ ಸ್ವೀಕಾರ: ರೆಡ್‌ ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಬಿದ್ದ ಪೊಲೀಸ್..!

ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿ ಸೂರಜ್ ಹಾಗೂ ಹೆದ್ದಾರಿ ಪ್ರಾಧಿಕಾರದಯೋಜನಾ ವ್ಯವಸ್ಥಾಪಕ ಮೂರ್ತಿ, ನೆರೆಯ ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಭೂ ಸ್ವಾಧೀನ ಪಡಿಸಿಕೊಂಡು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ (275)ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಬಾಕಿಯಿರುವ ಕೆಲವು ಕಟ್ಟಡ ಮತ್ತು ಭೂಮಿಯನ್ನು ತ್ವರಿತವಾಗಿ ಸ್ವಾಧೀನ ಪಡಿಸಿಕೊಂಡು ಹೆದ್ದಾರಿ ಪ್ರಾಧಿಕಾರದ ಸುಪರ್ದಿಗೆ ನೀಡುವಂತೆ ಸರ್ಕಾರದ ಆದೇಶವಾಗಿದೆ. ಹೀಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಅಡ್ಡಿಯಾಗಿರುವ ಕಟ್ಟಡಗಳ ತೆರವಿಗೆ ನ.1ರವರೆಗೆ ಗಡುವು ನೀಡಲಾಗಿದೆ ಅಷ್ಟರಲ್ಲಿ ಕಟ್ಟಡಗಳ ಮಾಲೀಕರುಗಳು ಸ್ವಯಂ ಪ್ರೇರಿತರಾಗಿ ಕಟ್ಟಡಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಹೆದ್ದಾರಿ ಪ್ರಾಧಿಕಾರವೇ ತೆರವು ಗೊಳಿಸುವ ಮೂಲಕ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಕೈಗೊಳ್ಳಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕ ಮೂರ್ತಿ ಎಚ್ಚರಿಕೆ ನೀಡಿದ್ದಾರೆ.