ತುಮಕೂರಿನಲ್ಲಿ 15675 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಗೃಹ ಸಚಿವ ಪರಮೇಶ್ವರ್ ತೆಲುಗಿನಲ್ಲಿ ಭಾಷಣ ಆರಂಭಿಸಿ ಅಚ್ಚರಿ ಮೂಡಿಸಿದರು. ಪಾವಗಡಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆಗೆ ಚಾಲನೆ ದೊರೆತಿದೆ.

ತುಮಕೂರು (ಜು.21): ಬೆಂಗಳೂರಿಗೆ ತಾಗಿಕೊಂಡೇ ಇರುವ ತುಮಕೂರಿಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆಗೆ ಸೋಮವಾರ ಸಿಎಂ ಸಿದ್ಧರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಆಗಮಿಸಿದ್ದರು. 15675 ಕೋಟಿ ರೂಪಾಯಿಯ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದರು.

ಪಾವಗಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತೆಲುಗು ಭಾಷೆಯಲ್ಲಿ ಮಾತನಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಈಗಾಗಲೇ ರಾಜ್ಯದಲ್ಲಿ ಭಾಷಾ ವಿಚಾರವಾಗಿ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿರುವ ನಡುವೆಯೇ ರಾಜ್ಯದ ಗೃಹ ಸಚಿವರಾಗಿರುವ ವ್ಯಕ್ತಿ, ಕನ್ನಡದ ನೆಲದಲ್ಲಿಯೇ ತೆಲುಗು ಭಾಷೆಯಲ್ಲಿ ಭಾಷಣ ಆರಂಭಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

'ನಿಮ್ ಅಂದರಕೂ ನಮಸ್ಕಾರಮೂ..' ಅಂತ ತೆಲುಗಲ್ಲೇ ಗೃಹ ಸಚಿವ ಭಾಷಣ ಶುರು ಮಾಡಿದ್ದಾರೆ. ಆ ಬಳಿಕ ಅವರು ಕನ್ನಡದಲ್ಲಿ ಮಾತು ಮುಂದುವರಿಸಿದ್ದಾರೆ.

ಪಾವಗಡ ತಾಲ್ಲೂಕಿಗೆ ಯಾರು ಹೆಣ್ಣು ಕೊಡ್ತಿಲ್ಲ. ಪಾವಗಡದಲ್ಲಿ ಸಂಬಂಧ ಬೆಳೆಸಲು ಹಿಂದು ಮುಂದೆ ನೋಡ್ತಿದ್ದರು. ಆಗ ಹುಟ್ಟಿದ ಮಕ್ಕಳ ಮೂಳೆ ಮುರಿದು ಹೋಗುವ ಮಟ್ಟಿಗೆ ಪ್ಲೋರೈಡ್ ನೀರಿನ ಸಮಸ್ಯೆಯಿತ್ತು. 2018ರಲ್ಲಿ ಪಾವಗಡಕ್ಕೆ ಶಾಶ್ವತ ನೀರು ಒದಗಿಸುವ ಯೋಜನೆ ಮಾಡುವಂತೆ ಮನವಿ ಮಾಡಿದ್ದರು. ಬಜೆಟ್ ನಲ್ಲಿ 2500 ಕೋಟಿ ರೂಪಾಯಿ ವೆಚ್ಚ ಈ ಯೋಜನೆ ಮಂಜೂರು ಮಾಡಿದ್ದರು. 200 ಕಿಲೋ ಮೀಟರ್ ದೂರದಿಂದ, 2700 ಕಿಲೋಮೀಟರ್ ಪೈಪ್ ಹಾಕಿ ಪಾವಗಡಕ್ಕೆ ನೀರು ತಂದಿದ್ದಾರೆ. ದೇಶದಲ್ಲಿ ಇಂತ ದೊಡ್ಡ ಯೋಜನೆ ತಂದಿರೋದು ಇದೆ ಮೊದಲು ಎಂದು ಹೇಳಿದರು.

ಪರಮೇಶ್ವರ್ ತೆಲುಗು ಭಾಷಣ: ಕನ್ನಡ ನೆಲದಲ್ಲಿ ಹುಟ್ಟಿದ ಹೊಸ ವಿವಾದ | G Parameshwara Speech | Kannada News

6 ತಾಲೂಕು ಎರಡು ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಸಿಎಂ ಉದ್ಘಾಟನೆ ಮಾಡಿ, ನೀರು ಕುಡಿದು ತೋರಿಸಿದ್ದಾರೆ. ಇದು ಕುಡಿಯಲು ಯೋಗ್ಯವಾಗಿದೆ ಅಂತಾ ತಿಳಿಸಿದ್ದಾರೆ. ಡಿಕೆಶಿ ಅವ್ರು ಸೋಲಾರ್ ಪಾರ್ಕ್ ತಂದು ಪಾವಗಡವನ್ನು ವಿಶ್ವದ ಭೂಪಟದಲ್ಲಿ ನೋಡುವಂತಾಗಿದೆ. 6 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ಪಾವಗಡ ಸೋಲಾರ್ ಪಾರ್ಕ್ ಕ್ಕೆ ಬರಲಿದೆ. ಮತ್ತೇ ಸೋಲಾರ್ ಪಾರ್ಕ್ ವಿಶ್ವದಲ್ಲಿ ನಂಬರ್ ಒನ್ ಸ್ಥಾನಕ್ಕೆ ಬರಲಿದೆ ಎಂದಿದ್ದಾರೆ.

ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಅಂತ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. 224 ಕ್ಷೇತ್ರದಲ್ಲೂ ಅಭಿವೃದ್ದಿ ಕೆಲಸ ನಡೆಯುತ್ತಿದೆ. ಇವತ್ತು 750 ಕೋಟಿ ರೂಪಾಯಿ ಯೋಜನೆಯ ಕಾಮಗಾರಿಯ ಅಡಿಗಲ್ಲು ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಅಭಿವೃದ್ದಿ ನಿಮ್ಮ ಕಣ್ಣಿಗೆ ಕಾಣ್ತಿಲ್ವಾ. ಜೆಜೆಎಂಗೆ ಕೇಂದ್ರ 40 ಶೇಕಡ ರಷ್ಟು ಹಣ ಕೊಡ್ತಿದೆ. ಶೇ.60ರಷ್ಟು ಹಣ ನಾವು ನೀಡಿದ್ದೇವೆ. ಅಭಿವೃದ್ದಿ ಆಗ್ತಿಲ್ಲ ಅಂತ ಟೀಕೆ ಮಾಡುವ ನೀವು ಆಸ್ಪತ್ರೆಯಲ್ಲಿ ಕಣ್ಣು ತೋರಿಸಿಕೊಳ್ಳಿ. ಇಡೀ ದೇಶದಲ್ಲಿ ಜಿಎಸ್‌ಟಿ ಕಟ್ಟು ರಾಜ್ಯಗಳಲ್ಲಿ ಕರ್ನಾಟಕ ಸುಮ್ಮನೆ 2ನೇ ಸ್ಥಾನಕ್ಕೇರಿಲ್ಲ. ಅಭಿವೃದ್ದಿ ಕೆಲಸ ನಡೆಯದೆ ಇದ್ದಿದ್ದರೆ ಇದು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಎತ್ತಿನಹೊಳೆ ಯೋಜನೆಗೆ ಡೆಡ್‌ಲೈನ್‌

2027ರೊಳಗೆ ಎತ್ತಿನಯೋಜನೆ ಮುಗಿಸುವ ಡೆಡ್‌ಲೈನ್‌ಅನ್ನು ಸಿಎಂ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಬಹಳ ವರ್ಷದಿಂದ ಕುಂಟುತ್ತಿದೆ. ಹಣ ಕೊಟ್ಟಿಲ್ಲ, ನಾವೇನು ಕೇಳಿರಲಿಲ್ಲ, ಕೇಂದ್ರ ಯೋಜನೆ ಅಂತ ಘೋಷಣೆ ಮಾಡಿದ್ರು. 5300 ಕೋಟಿ ಹಣ ಕೊಡ್ತೀವಿ ಅಂತ ಹೇಳಿದ್ರು, ಈವರೆಗೂ ಹಣ ನೀಡಲಿಲ್ಲ‌ ಈ ಯೋಜನೆಗಳು ಕೇಂದ್ರದ ಸಹಾಯವಿಲ್ಲದೆ ರಾಜ್ಯ ಸರ್ಕಾರ ಮಾಡ್ತಿದೆ. ತುಮಕೂರು ಬೆಂಗಳೂರಿನ ಒಂದು‌ ಭಾಗವಾಗಬೇಕು. ಇಂಡಸ್ಟ್ರಿಯಲ್ ಹಬ್ ಮಾಡುತ್ತಿದ್ದೇವೆ. ನಿಮ್ಮ ಸಹಕಾರ, ಆಶೀರ್ವಾದ ತುಮಕೂರಿನ ಮೇಲೆ ಇರಬೇಕು. ಸಿದ್ದರಾಮಯ್ಯ ನೀರು ಕೊಟ್ಟಿದ್ದು ಅಂತ, ಪಾವಗಡ ಜನತೆ ಮುಂದಿನ ಪೀಳಿಗೆಗೆ ಹೇಳಬೇಕು ಎಂದಿದ್ದಾರೆ.

ತುಂಗಭದ್ರ ಕುಡಿಯುವ ನೀರು ಯೋಜನೆ

2100 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದ್ದು, 230 ಕಿಲೋಮೀಟರ್ ದೂರದಿಂದ ಕುಡಿಯುವ ನೀರು ಸರಬರಾಜು ಆಗಲಿದೆ. ಅದರೊಂದಿಗೆ ಸಿಎಂ ವಿವಿಧ ಇಲಾಖೆಯ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸಿಎಂ, ಗೃಹ ಸಚಿವ, ಪ್ರಿಯಾಂಕ್‌ ಖರ್ಗೆಗೆ ಜಿಲ್ಲಾಡಳಿತ ತುಂಗಭದ್ರಾ ನೀರನ್ನು ನೀಡಿತು. ತುಂಗಭದ್ರ ನೀರನ್ನ ಮೂವರಿಗೂ ಬೆಳ್ಳಿ ಕಳಸದ ಮೂಲಕ ಜಿಲ್ಲಾಡಳಿತ ನೀಡಿತು.