ತುಮಕೂರು(ಅ.12): ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಪರಮೇಶ್ವರ್‌ ಒಡೆತದ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ತುಮಕೂರು ಮಹಾನಗರ ಪಾಲಿಕೆಗೆ ತೆರಿಗೆ ಕಟ್ಟದೆ ವಂಚಿಸಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

2002 ರಿಂದಲೂ ಪಾಲಿಕೆಗೆ ಆಡಳಿತ ಮಂಡಳಿ ತೆರಿಗೆ ಕಟ್ಟದೆ ಇರುವ ವಿಷಯ ಬೆಳಕಿಗೆ ಬಂದಿದೆ. ಎಂಜಿನಿಯರಿಂಗ್‌ ಕಾಲೇಜು ಆರಂಭವಾದಾಗಿನಿಂದ ಒಮ್ಮೆಯೂ ತೆರಿಗೆ ಕಟ್ಟಿಲ್ಲ. ಐಟಿ ಅಧಿಕಾರಿಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ 1.83 ಕೋಟಿ ಬಾಕಿ ಉಳಿಸಿಕೊಂಡಿದೆ. ಬಾಕಿ ಸಂಬಂಧ ಪಾಲಿಕೆ ಕೊಟ್ಟನೋಟಿಸ್‌ ಕೂಡ ಐಟಿ ಅಧಿಕಾರಿಗಳಿಗೆ ಲಭ್ಯವಾಗಿದೆ.

ಪರೀಕ್ಷೆಗೆ ಅಡಚಣೆ ಇಲ್ಲ:

ಶುಕ್ರವಾರ ಬೆಳಗ್ಗೆ ಕಾಲೇಜಿನ ಆವರಣದಲ್ಲಿ ಬಿಸಿಎ ವಿಭಾಗದ ಪರೀಕ್ಷೆ 9.30ಕ್ಕೆ ಇತ್ತು. ಬೆಳಗ್ಗೆ ವಾಕಿಂಗ್‌ಗೆ ಜನರು ಪ್ರವೇಶಿಸುವನ್ನು ಪೊಲೀಸರು ನಿರಾಕರಿಸಿದ್ದರೂ ಪರೀಕ್ಷೆಗೆ ಯಾವುದೇ ಅಡಚಣೆ ಮಾಡಲಿಲ್ಲ.

ಐಟಿ ದಾಳಿ ಅಂತ್ಯ:

ಕಳೆದ ಒಂದೂವರೆ ದಿವಸಗಳ ಕಾಲ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿದ ದಾಳಿಯನ್ನು ಐಟಿ ಅಧಿಕಾರಿಗಳು ಅಂತ್ಯಗೊಳಿಸಿ ಮೂರು ಇನ್ನೋವಾ ಕಾರಿನಲ್ಲಿ ತೆರಳಿದ್ದಾರೆ.

ಕಾಲೇಜು ಪ್ರಾಧ್ಯಾಪಕರು ಚಕ್ಕರ್‌

ಗುರುವಾರದಿಂದ ಐಟಿ ಅಧಿಕಾರಿಗಳು ಶಿಕ್ಷಣ ಸಂಸ್ಥೆ ಮೇಲೆ ನಡೆಸುತ್ತಿರುವ ದಾಳಿ ಹಿನ್ನೆಲೆಯಲ್ಲಿ ಶುಕ್ರವಾರ ಕಾಲೇಜು ಪ್ರಾಧ್ಯಾಪಕರಲ್ಲಿ ಶೇ.30ರಷ್ಟುಮಂದಿ ಗೈರಾಗಿದ್ದರು. ಅಲ್ಲದೆ, ಸಿಬ್ಬಂದಿ ಕೂಡ ಚಕ್ಕರ್‌ ಹಾಕಿದರು. ಐಟಿ ಅಧಿಕಾರಿಗಳ ಪ್ರಶ್ನೆಗೆ ಸಿಬ್ಬಂದಿ ತಡಬಡಾಯಿಸಿದ್ದಾರೆ.

12 ಮಂದಿ ಅಧಿಕಾರಿಗಳ ತಂಡ:

12 ಮಂದಿ ಐಟಿ ಅಧಿಕಾರಿಗಳ ತಂಡ ಗುರುವಾರ ಮಧ್ಯರಾತ್ರಿಯವರೆಗೂ ದಾಳಿ ನಡೆಸಿ ಪರಮೇಶ್ವರ್‌ ಅವರ ಕಾಲೇಜು ಗೆಸ್ಟ್‌ ಹೌಸ್‌ನಲ್ಲಿ ತಂಗಿದ್ದರು. ಐಟಿ ಅಧಿಕಾರಿಗಳು ಮೊಕ್ಕಾಂ ಹೂಡಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಯಾರಿಗೂ ವಾಕ್‌ ಮಾಡಲು ಅವಕಾಶ ಪೊಲೀಸರು ನೀಡಲಿಲ್ಲ. ಪ್ರತಿ ದಿನ ಇಲ್ಲಿ ನೂರಾರು ಮಂದಿ ವಾಕ್‌ ಮಾಡುತ್ತಿದ್ದರು. ಆದರೆ, ದಾಳಿ ಹಿನ್ನೆಲೆಯಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಿಲ್ಲ.

 

ನಾಲ್ಕು ಅಂತಸ್ತಿನ ಕಟ್ಟದಲ್ಲಿ ಆಡಳಿತ ವಿಭಾಗದಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ಕಾರ್ಯ ನಡೆಸಿದರು. ಮೇಲಿನ ಮೂರು ಕಟ್ಟಡದಲ್ಲಿ ಇಂಜಿನಿಯರ್‌ ವಿಭಾಗದ ಕ್ಲಾಸ್‌ಗಳು ಮಾಮೂಲಿಯಂತೆ ನಡೆದವು. ಬೆಳಗ್ಗೆ 8.30ಕ್ಕೆ ಗೆಸ್ಟ್‌ ಹೌಸ್‌ನಿಂದ ಎಂಜಿನಿಯರ್‌ ಕಟ್ಟಡ ಆಡಳಿತ ಕಚೇರಿಗೆ ತೆರಳಿದ ಅಧಿಕಾರಿಗಳು ಎರಡನೇ ದಿನದ ಶೋಧ ಕಾರ್ಯ ಆರಂಭಿಸಿದ್ದಾರೆ.