ಟೋಕಿಯೋ ಒಲಿಂಪಿಕ್ಸ್: ಸಿಂಧು, ಸಾಯಿ ಪ್ರಣೀತ್‌ಗೆ ಸುಲಭ ಸವಾಲು
* ಟೋಕಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ವೇಳಾಪಟ್ಟಿ ಪ್ರಕಟ
* ಲೀಗ್ ಹಂತದಲ್ಲಿ ಸಿಂಧು ಹಾಗೂ ಸಾಯಿ ಪ್ರಣೀತ್‌ಗೆ ಸುಲಭ ಎದುರಾಳಿ
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭ
ಟೋಕಿಯೋ(ಜು.09): ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಹಾಗೂ ಬಿ. ಸಾಯಿ ಪ್ರಣೀತ್‌ಗೆ ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸುಲಭ ಸವಾಲು ಎದುರಾಗಲಿದೆ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಸಿಂದು 6ನೇ ಶ್ರೇಯಾಂಕವನ್ನು ಪಡೆದಿದ್ದು, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ 'ಜೆ' ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ 13ನೇ ಶ್ರೇಯಾಂಕವನ್ನು ಹೊಂದಿರುವ ಬಿ. ಸಾಯಿ ಪ್ರಣೀತ್ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಪುರುಷರ ಡಬಲ್ಸ್ ವಿಭಾಗದಲ್ಲಿ 10ನೇ ಶ್ರೇಯಾಂಕ ಹೊಂದಿರುವ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ರಾಜ್ ರಂಕಿರೆಡ್ಡಿ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.
ಲೀಗ್ ಹಂತದಲ್ಲಿ ಪಿ.ವಿ ಸಿಂಧು ವಿಶ್ವದ 34ನೇ ಶ್ರೇಯಾಂಕಿತೆ ಹಾಂಕಾಂಗ್‌ನ ಚ್ಯುಂಗ್ ನಿಂಗ್‌ಯೀ ಹಾಗೂ ಇಸ್ರೇಲಿನ 58ನೇ ಶ್ರೇಯಾಂಕಿತೆ ಕ್ಸಿನಿಯಾ ಪೊಲಿಕಪ್ರೊವಾ ಅವರನ್ನು ಎದುರಿಸಲಿದ್ದಾರೆ. ಇನ್ನು ಪ್ರಣೀತ್ ಲೀಗ್ ಹಂತದ ಪಂದ್ಯಗಳಲ್ಲಿ ನೆದರ್ಲ್ಯಾಂಡ್‌ನ 29ನೇ ಶ್ರೇಯಾಂಕಿತ ಮಾರ್ಕ್ ಕಾಲ್ಜೌ ಹಾಗೂ ಇಸ್ರೇಲ್‌ನ 47ನೇ ಶ್ರೇಯಾಂಕಿತ ಮಿಶಾ ಜಿಲ್ಬರ್‌ಮ್ಯಾನ್ ಅವರನ್ನು ಎದುರಿಸಲಿದ್ದಾರೆ.
ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ: ಖಾಲಿ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್..!
ಪುರುಷರ ಡಬಲ್ಸ್ ವಿಭಾಗದಲ್ಲಿ ಚಿರಾಗ್ ಹಾಗೂ ರಂಕಿರೆಡ್ಡಿಗೆ ಲೀಗ್ ಹಂತದಲ್ಲೇ ಕಠಿಣ ಸವಾಲು ಎದುರಾಗಲಿದ್ದು, ಇಂಡೋನೇಷ್ಯಾದ ಅಗ್ರಶ್ರೇಯಾಂಕಿತ ಜೋಡಿ ಕೆವಿನ್ ಸಂಜಯ ಸುಕಮುಲ್ಜೊ ಹಾಗೂ ಮಾರ್ಕಸ್ ಫೆನಾಲ್ಡಿ ಗಿಡೆನ್, ಮೂರನೇ ಶ್ರೇಯಾಂಕಿತ ಚೈನೀಸ್ ತೈಪೈನ ಲೀ ಯಂಗ್ ಹಾಗೂ ವ್ಯಾಂಗ್ ಚೀ ಲಿನ್ ಹಾಗೂ ಇಂಗ್ಲೆಂಡ್‌ನ 18ನೇ ಶ್ರೇಯಾಂಕಿತ ಜೋಡಿಯಾದ ಬೆನ್ ಲೇನ್ ಮತ್ತು ಸೀನ್ ವೆಂಡೇಯನ್ನು ಎದುರಿಸಲಿದ್ದಾರೆ.
ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಆಟಗಾರ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲಿದ್ದಾರೆ.