ಟೋಕಿಯೋ ತಲುಪಿದ ಉಗಾಂಡ ಸದಸ್ಯೆಗೆ ಕೋವಿಡ್ ಸೋಂಕು ದೃಢ
* ಟೋಕಿಯೋ ಒಲಿಂಪಿಕ್ಸ್‌ಗೆ ಎದುರಾಯ್ತು ಕೋವಿಡ್ ಭೀತಿ
* ಜಪಾನ್‌ಗೆ ಬಂದಿಳಿದ ಉಗಾಂಡ ಸ್ಪರ್ಧಿಗೆ ಕೋವಿಡ್ ಪಾಸಿಟಿವ್
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭ
ಟೋಕಿಯೋ(ಜೂ.21): ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಟೋಕಿಯೋ ತಲುಪಿದ ಉಗಾಂಡ ತಂಡದ ಸದಸ್ಯರೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದ್ದು, ಆಯೋಜಕರಲ್ಲಿ ಆತಂಕ ಶುರುವಾಗಿದೆ. ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ.
ಒಲಿಂಪಿಕ್ಸ್ ಆರಂಭಗೊಳ್ಳಲು ಇನ್ನು ಕೇವಲ 5 ವಾರ ಮಾತ್ರ ಬಾಕಿ ಇದೆ. ಸೋಂಕಿಗೆ ಒಳಗಾಗಿರುವ ಸದಸ್ಯ ಯಾರು ಎನ್ನುವುದನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಸೋಂಕಿತ ಸದಸ್ಯ ಈಗಾಗಲೇ ಲಸಿಕೆ ಪಡೆದಿದ್ದು, ಜಪಾನ್‌ಗೆ ಆಗಮಿಸುವಾಗ ಕೋವಿಡ್ ನೆಗೆಟಿವ್ ವರದಿಯನ್ನು ತಂದಿದ್ದರು ಎನ್ನಲಾಗಿದೆ. ಸೋಂಕಿತನನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇನ್ನುಳಿದ 8 ಸದಸ್ಯರು ಭಾನುವಾರವಷ್ಟೇ(ಜೂ.20) ಕೇಂದ್ರ ಜಪಾನ್‌ನ ಒಸಾಕ ನಗರಕ್ಕೆ ಬಂದಿಳಿದಿದ್ದರು. ಒಸಾಕ ನಗರದಲ್ಲಿ ಈಗಲೂ ಕೋವಿಡ್ 19 ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಉಗಾಂಡದ ತಂಡವು ಜಪಾನ್‌ಗೆ ಬಂದಿಳಿದ ಎರಡನೇ ರಾಷ್ಟ್ರ ಎನಿಸಿದೆ. ಈ ಮೊದಲು ಆಸ್ಟ್ರೇಲಿಯಾದ ಮಹಿಳಾ ಸಾಫ್ಟ್ ಬಾಲ್ ತಂಡವು ಜಪಾನ್‌ಗೆ ಬಂದಿಳಿದಿದೆ.
ಒಲಿಂಪಿಕ್ಸ್ ಕ್ರೀಡಾಪಟುಗಳನ್ನು ಕೊರೋನಾ ಪಾಸಿಟೀವ್ ಕಾರಣ ಅನರ್ಹಗೊಳಿಸುವುದಿಲ್ಲ; IOC!
ಕೋವಿಡ್ 19 ಸೋಂಕು ದೃಢಪಟ್ಟ ಕ್ರೀಡಾಪಟುಗಳನ್ನು ಅನರ್ಹಗೊಳಿಸಲಾಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಖಚಿತಪಡಿಸಿದೆ. ಜಪಾನ್‌ನಾದ್ಯಂತ ಜೂ 20ರವರೆಗೆ ರಾಜ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ಒಸಾಕ ಸೇರಿದಂತೆ ಜಪಾನಿನ ಹಲವು ನಗರಗಳಲ್ಲಿ ಹೇರಲಾಗಿದ್ದ ರಾಜ್ಯ ತುರ್ತು ಪರಿಸ್ಥಿತಿ ಭಾನುವಾರ(ಜೂ.20)ಕ್ಕೆ ಅಂತ್ಯವಾಗಿತ್ತು. ಹೀಗಿದ್ದೂ ನಗರಗಳಲ್ಲಿ ನೂರರ ಸಂಖ್ಯೆಯಲ್ಲಿ ಕೋವಿಡ್ 19 ಪ್ರಕರಣಗಳು ಪತ್ತೆಯಾಗುತ್ತಲೇ ಇರುತ್ತಿರುವುದು ಒಲಿಂಪಿಕ್ಸ್ ಆಯೋಜಕರ ತಲೆನೋವು ಹೆಚ್ಚುವಂತೆ ಮಾಡಿದೆ.