ಟೋಕಿಯೋ ಒಲಿಂಪಿಕ್ಸ್: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಸೈಕೋಮ್ ಮೀರಾಬಾಯಿ ಚಾನು
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಖಾತೆ ತೆರೆದ ಭಾರತ
* ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದ ಸೈಕೋಮ್ ಮೀರಾಬಾಯಿ ಚಾನು
* ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಚಾನು
ಟೋಕಿಯೋ(ಜು.24): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಏಕೈಕ ವೇಟ್‌ಲಿಫ್ಟರ್ ಸೈಕೋಮ್ ಮೀರಾಬಾಯಿ ಚಾನು ದೇಶಕ್ಕೆ ಮೊದಲ ಪದಕ ಗೆದ್ದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಭಾಜನರಾದ ಮೀರಾಬಾಯಿ ಚಾನು, ಕರ್ಣಂ ಮಲ್ಲೇಶ್ವರಿ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ವೇಟ್‌ಲಿಫ್ಟರ್ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.
ಸ್ಯಾಚ್ ಹಾಗೂ ಕ್ಲೀನ್ ಅಂಡರ್ ಜರ್ಕ್ ವಿಭಾಗದಲ್ಲಿ ಒಟ್ಟು 202 ಕೆಜಿ ಬಾರ ಎತ್ತಿ ಚಾನು ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ. ಚೀನಾದ ಹ್ಯೂ ಜಿಹೈ ಒಟ್ಟು 210 ಕೆ.ಜಿ ವೇಟ್‌ಲಿಫ್ಟ್ ಮಾಡುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಇಂಡೋನೇಷ್ಯಾದ ಕಂಟಿಕ್ ವಿಂಡೈ ಆಯೆಯಾ 194 ಕೆಜಿ ಬಾರ ಎತ್ತುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಮೀರಾಬಾಯಿ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಮೊದಲ ಪ್ರಯತ್ನದಲ್ಲೇ ಇಂಪಾಲ್ ಮೂಲದ ಆಟಗಾರ್ತಿ ಸ್ನ್ಯಾಚ್ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಮೀರಾಬಾಯಿ ಚಾನು ಅನಾಯಾಸವಾಗಿ ಎತ್ತುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 87 ಕೆ.ಜಿ. ವೇಟ್ ಲಿಫ್ಟ್ ಮಾಡುವ ಸ್ಯಾಚ್ ಲಿಫ್ಟ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು. ಇನ್ನು ಚೀನಾದ ಹ್ಯೂ ಜಿಹೈ 94 ಕೆ.ಜಿ ವೇಟ್‌ಲಿಫ್ಟ್ ಮಾಡುವ ಮೂಲಕ ಒಲಿಂಪಿಕ್ಸ್ ದಾಖಲೆ ಬರೆದಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ಗೂ ಮುನ್ನ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕ್ಲೀನ್ ಮತ್ತು ಜೆರ್ಕ್ ವಿಭಾಗದಲ್ಲಿ ಮೀರಾಬಾಯಿ ಚಾನು 119 ಕೆ.ಜಿ ಭಾರ ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು.
ಇನ್ನು ಕ್ಲೀನ್& ಜೆರ್ಕ್ ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲೇ ಮೀರಾಬಾಯಿ ಚಾನು 110 ಎರಡನೇ ಪ್ರಯತ್ನದಲ್ಲಿ 115 ಕೆ.ಜಿ ವೇಟ್‌ಲಿಫ್ಟ್ ಮಾಡುವ ಮೂಲಕ ಪದಕ ಪಕ್ಕಾಮಾಡಿಕೊಂಡರು