ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ಕನಸು ನನಸು ಮಾಡಿದ ಬಂಗಾರದ ಮನುಷ್ಯ
* ಟೊಕಿಯೋದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
* ಐತಿಹಾಸಿಕ ಸಾಧನೆಗೆ ಇಡೀ ದೇಶದ ಮೆಚ್ಚುಗೆ
*ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರ
* ದಿಗ್ಗಜ ಮಿಲ್ಖಾ ಸಿಂಗ್ ಕನಸು ನನಸು
ಟೋಕಿಯೋ(ಆ.07): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತೊಡಿಸಿದ ಜಾವಲಿನ್ ಪಟು ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಇಡೀ ದೇಶವೇ ಕ್ರೀಡಾಪಟುವನ್ನು ಕೊಂಡಾಡುತ್ತಿದೆ. ಮಿಲ್ಖಾ ಸಿಂಗ್ ಕನಸು ನನಸಾಗಿದೆ.
ಜಗತ್ತು ಕಂಡ ಅತ್ಯುತ್ತಮ ಅಥ್ಲೀಟ್ ಮಿಲ್ಖಾ ಸಿಂಗ್ ಅವರಿಗೆ ಅಥ್ಲೇಟಿಕ್ಸ್ ವಿಭಾಘದಲ್ಲಿ ಚಿನ್ನ ಗೆಲ್ಲುವ ಬಹುದೊಡ್ಡ ಕನಸಿತ್ತು. ಅದು ಈಗ ನಿಜವಾಗಿದೆ. ಆದರೆ ಅದನ್ನು ಕಣ್ಣು ತುಂಬಿಕೊಳ್ಳಲು ಮಿಲ್ಖಾ ಸಿಂಗ್ ನಮ್ಮೊಂದಿಗೆ ಇಲ್ಲ.
ಕೊರೋನಾ ಕಾರಣಕ್ಕೆ ಮಿಲ್ಖಾ ಸಿಂಗ್ ಕಳೆದ ಜೂನ್ ನಲ್ಲಿ ಕ್ರೀಡಾಲೋಕವನ್ನು ಅಗಲಿದ್ದರು. 1960 ಒಲಿಂಪಿಕ್ಸ್ ನಲ್ಲಿ ಕೈತಪ್ಪಿದ ಪದಕ ದೇಶಕ್ಕೆ ಬರಲಿ ಎನ್ನುವ ದೊಡ್ಡ ಆಸೆ ಹೊಂದಿದ್ದರು. 400ಮೀಟರ್ ಓಟದಲ್ಲಿ ಮಿಲ್ಕಾ ನಾಲ್ಕನೆಯವರಾಗಿ ಗುರಿ ಮುಟ್ಟಿದ್ದರು. ಭಾರತದ ತಾರೆ ಪಿಟಿ ಉಷಾ ಸಹ 24 ವರ್ಷದ ಹಿಂದೆ ಕೊಂಚದರಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು.
ಭಾರತಕ್ಕೆ ಚಿನ್ನ ತೊಡಿಸಿದ ಚೋಪ್ರಾಗೆ ಅಭಿನಂದನೆಗಳ ಮಹಾಪೂರ
ಟೋಕಿಯೋದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದೆ. ಜಾವಲಿನ್ ಫೈನಲ್ ಸ್ಪರ್ಧೆಯಲ್ಲಿ ಬರೋಬ್ಬರಿ 87.58 ಮೀಟರ್ ಎಸೆಯುವ ಮೂಲಕ ಪದಕ ಜಯಿಸಿದ್ದಾರೆ. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೀಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ನೀರಜ್ ಚೋಪ್ರಾ ಮೊದಲ ಪದಕ ಗೆದ್ದು ಕೊಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಉದ್ಯೋಗಿಯಾಗಿರುವ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಮೊದಲ ಪ್ರಯತ್ನದಲ್ಲಿ ನೀರಜ್ ಚೋಪ್ರಾ ಬರೋಬ್ಬರಿ 87.03 ಮೀಟರ್ ದೂರ ಎಸೆಯುವ ಮೂಲಕ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು.
ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ ನಂತರ ಚಿನ್ನದ ಸಾಧನೆ ಚೋಪ್ರಾ ಅವರದ್ದು. ಟೋಕಿಯೋದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಈ ಸಾಧನೆ ಚಿರಕಾಲ ನೆನಪಿನಲ್ಲಿ ಉಳಿಯಲಿದೆ. ನೀರಜ್ ಚೋಪ್ರಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.