ನೀರಜ್ ಚೋಪ್ರಾ ದೇಶದ ಬಂಗಾರ.. ಭಾರತೀಯರ ಹರ್ಷೋದ್ಗಾರ
* ಟೊಕಿಯೋದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
* ಐತಿಹಾಸಿಕ ಸಾಧನೆಗೆ ಇಡೀ ದೇಶದ ಮೆಚ್ಚುಗೆ
*ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರ
ಟೋಕಿಯೋ(ಆ.07): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತೊಡಿಸಿದ ಜಾವಲಿನ್ ಪಟು ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಇಡೀ ದೇಶವೇ ಕ್ರೀಡಾಪಟುವನ್ನು ಕೊಂಡಾಡುತ್ತಿದೆ. ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸುತ್ತಿರುವ ಚೋಪ್ರಾ ಸಾಧನೆಯನ್ನು ಇಡೀ ದೇಶವೇ ಮೆಚ್ಚಿದೆ,
ಟೋಕಿಯೋದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದೆ. ಜಾವಲಿನ್ ಫೈನಲ್ ಸ್ಪರ್ಧೆಯಲ್ಲಿ ಬರೋಬ್ಬರಿ 87.58 ಮೀಟರ್ ಎಸೆಯುವ ಮೂಲಕ ಪದಕ ಜಯಿಸಿದ್ದಾರೆ. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೀಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ನೀರಜ್ ಚೋಪ್ರಾ ಮೊದಲ ಪದಕ ಗೆದ್ದು ಕೊಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಉದ್ಯೋಗಿಯಾಗಿರುವ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಮೊದಲ ಪ್ರಯತ್ನದಲ್ಲಿ ನೀರಜ್ ಚೋಪ್ರಾ ಬರೋಬ್ಬರಿ 87.03 ಮೀಟರ್ ದೂರ ಎಸೆಯುವ ಮೂಲಕ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು.
ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ ನಂತರ ಚಿನ್ನದ ಸಾಧನೆ ಚೋಪ್ರಾ ಅವರದ್ದು. ಟೋಕಿಯೋದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಈ ಸಾಧನೆ ಚಿರಕಾಲ ನೆನಪಿನಲ್ಲಿ ಉಳಿಯಲಿದೆ. ನೀರಜ್ ಚೋಪ್ರಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಓಲಂಪಿಕ್ ಕ್ರೀಡಾಕೂಟದಲ್ಲಿ ಜಾವಲಿನ್ ಥ್ರೋ ದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ದೇಶದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಬೆಳಗಿದ್ದಾರೆ. ಇದು ನಿಜಕ್ಕೂ ದೇಶಕ್ಕೆ ಹೆಮ್ಮೆ ತರುವ ಗೆಲುವು. ಇದು ಭಾರತೀಯ ಕ್ರೀಡಾಪಟುಗಳ ಶಕ್ತಿ, ಸಾಮರ್ಥ್ಯ. ಅದನ್ನು ನೀರಜ್ ಚೋಪ್ರಾ ವಿಶ್ವ ಕ್ರೀಡಾ ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವೈರಲ್ ಆಗುತ್ತಿರುವ ಚೋಪ್ರಾ ಟ್ವೀಟ್; ಮುಂದಿನ ಒಲಿಂಪಿಕ್ಸ್ ಗೆ ನನ್ನ ಸಿದ್ಧತೆಗಳು ಸರಿಯಾದ ಮಾರ್ಗದಲ್ಲಿ ನಡೆಯುತ್ತಿವೆ. ಯುರೋಪಿನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಭಾರತದ ರಾಯಭಾರ ಕಚೇರಿ ಮತ್ತು ಕೇಂದ್ರ ಸರ್ಕಾರ ಎಲ್ಲ ಸಹಕಜಾರ ನೀಡಿದೆ. ವೀಸಾ ನಿಯಮಗಳು ಬಿಗಿಯಾಗಿರುವ ಸಂದರ್ಭದಲ್ಲಿಯೂ ನನ್ನ ಜತೆ ನಿಂತಿದೆ ಎಂದು ಜೂನ್ 16 ರಂದು ಚೋಪ್ರಾ ಟ್ವೀಟ್ ಮಾಡಿದ್ದರು.
ಏಷಿಯಾನೆಟ್ ನ್ಯೂಸ್ ನೊಂದಿಗೆ ಮಾತನಾಡಿದ ಅಥ್ಲೀಟ್, ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ ಮುಖ್ಯಸ್ಥ ಆದಿಲ್ಲೆ ಸುಮರಿವಾಲಾ ಮಾತನಾಡಿ, ನಮ್ಮ ರಾಷ್ಟ್ರದ ಐತಿಹಾಸಿಕ ಚಿನ್ನದಲ್ಲಿ ನಾವೆಲ್ಲರೂ ಸಂತೋಷವಾಗಿದ್ದೇವೆ ಮತ್ತು ಮೊದಲ ಅಥ್ಲೆಟಿಕ್ಸ್ ಪದಕ ಬಂದಿರುವುದು ಮತ್ತು ಅದೂ ಒಂದು ಚಿನ್ನ ಎಂದು ವಿಶೇಷವಾಗಿ ರೋಮಾಂಚನಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.