ಟೋಕಿಯೋ 2020: ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ರೋಚಕ ಸೋಲು
* ಅರ್ಜೆಂಟೀನಾ ಎದುರು ರೋಚಕ ಸೋಲು ಕಂಡ ರಾಣಿ ರಾಂಪಾಲ್ ಪಡೆ
* ಫೈನಲ್ ಪ್ರವೇಶಿಸುವ ಭಾರತ ಮಹಿಳಾ ಹಾಕಿ ತಂಡದ ಕನಸು ಭಗ್ನ
* ಅರ್ಜಿಂಟೀನಾ ಎದುರು 2-1 ಅಂತರದಲ್ಲಿ ಭಾರತಕ್ಕೆ ಸೋಲು
ಟೋಕಿಯೋ(ಆ.04): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ ದಾಖಲೆ ಬರೆದಿದ್ದ ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ಅರ್ಜೆಂಟೀನಾ ಎದುರು 2-1 ಗೋಲುಗಳ ಅಂತರದ ರೋಚಕ ಸೋಲು ಅನುಭವಿಸಿದೆ. ಇದೀಗ ಮಹಿಳಾ ಹಾಕಿ ತಂಡವು ಆಗಸ್ಟ್ 06ರಂದು ನಡೆಯಲಿರುವ ಕಂಚಿನ ಪದಕಕ್ಕಾಗಿ ನಡೆಯುವ ಕಾದಾಟದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.
ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲೇ ಗುರ್ಜಿತ್ ಕೌರ್ ಗೋಲು ಬಾರಿಸುವ ಮೂಲಕ ಭಾರತಕ್ಕೆ ಆರಂಭದಲ್ಲೇ ಮುನ್ನಡೆ ಒದಗಿಸಿಕೊಟ್ಟರು. ಮೊದಲ ಕ್ವಾರ್ಟರ್‌ನಲ್ಲಿ ಪ್ರಾಬಲ್ಯ ಮೆರೆದ ರಾಣಿ ಪಡೆ ಅರ್ಜೆಂಟೀನಾಗೆ ಯಾವುದೇ ಗೋಲು ಬಾರಿಸಲು ಅವಕಾಶ ಮಾಡಿಕೊಡಲಿಲ್ಲ. ಇನ್ನು ಎರಡನೇ ಕ್ವಾರ್ಟರ್‌ನ 17ನೇ ನಿಮಿಷದಲ್ಲಿ ಅರ್ಜೆಂಟೀನಾ ಗೋಲು ಬಾರಿಸುವ 1-1ರ ಸಮಬಲ ಸಾಧಿಸಿತು. ಮೊದಲಾರ್ಧದ ಅಂತ್ಯದ ವೇಳೆಗೆ ಉಭಯ ತಂಡಗಳು 1-1ರ ಸಮಬಲ ಸಾಧಿಸಿದೆ.
ಟೋಕಿಯೋ 2020: ಫೈನಲ್‌ಗೇರಿ ಇತಿಹಾಸ ಬರೆಯುತ್ತಾ ಮಹಿಳಾ ಹಾಕಿ ತಂಡ?
ಇನ್ನು ಪಂದ್ಯದ 36ನೇ ನಿಮಿಷದಲ್ಲಿ ಅರ್ಜೆಂಟೀನಾ ಮತ್ತೊಂದು ಗೋಲು ಬಾರಿಸುವ ಮೂಲಕ 2-1ರ ಮುನ್ನಡೆ ಸಾಧಿಸಿದೆ. ಇದಾದ ಬಳಿಕ ಭಾರತಕ್ಕೆ ಸಾಕಷ್ಟು ಗೋಲು ಬಾರಿಸುವ ಅವಕಾಶ ಕೂಡಿ ಬಂದರೂ ಅದನ್ನು ಸದುಪಯೋಗ ಪಡಿಸಿಕೊಳ್ಳಲು ರಾಣಿ ಪಡೆಗೆ ಸಾಧ್ಯವಾಗಲಿಲ್ಲ.