ಟೋಕಿಯೋ 2020: ಕಿವೀಸ್‌ ಎದುರು ಭಾರತ ಹಾಕಿ ತಂಡಕ್ಕೆ ರೋಚಕ ಜಯ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದ ಭಾರತ ಹಾಕಿ ತಂಡ

* ನ್ಯೂಜಿಲೆಂಡ್ ಎದುರು 3-2 ಅಂತರದಲ್ಲಿ ಜಯ ಸಾಧಿಸಿದ ಮನ್‌ಪ್ರೀತ್‌ ಸಿಂಗ್ ಪಡೆ

* ಎರಡು ಗೋಲು ಬಾರಿಸಿ ಮಿಂಚಿದ ಹರ್ಮನ್‌ಪ್ರೀತ್ ಸಿಂಗ್

Tokyo Olympics 2020 Indian Hockey Team off to winning start beat New Zealand in thriller encounter kvn

ಟೋಕಿಯೋ(ಜು.24): ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದ ಎರಡು ಗೋಲು ಹಾಗೂ ಗೋಲ್‌ ಕೀಪರ್ ಪಿ.ಆರ್. ಶ್ರೀಜೇಶ್ ಮನೋಜ್ಞ ಪ್ರದರ್ಶನದ ನೆರವಿನಿಂದ ಭಾರತ ಹಾಕಿ ತಂಡವು ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದೆ. ಇದರೊಂದಿಗೆ ಮನ್‌ಪ್ರೀತ್ ಸಿಂಗ್‌ ನೇತೃತ್ವದ ಭಾರತ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದೆ

ನಾಲ್ಕನೇ ಶ್ರೇಯಾಂಕಿತ ಮನ್‌ಪ್ರೀತ್‌ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಗೆಲುವಿನ ಶುಭಾರಂಭ ಮಾಡುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಆರಂಭದಲ್ಲೇ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಳ್ಳುವಲ್ಲಿ ರೂಪಿಂದರ್‌ ಪಾಲ್ ಯಶಸ್ವಿಯಾಗಲಿಲ್ಲ. ಆದರೆ ಪಂದ್ಯದ ಆರನೇ ನಿಮಿಷದಲ್ಲಿ ಕೇನ್‌ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ನ್ಯೂಜಿಲೆಂಡ್ ಹಾಕಿ ತಂಡವು ಮೊದಲ ಕ್ವಾರ್ಟರ್‌ನ ಆರಂಭದಲ್ಲೇ 1-0 ಮುನ್ನಡೆ ಸಾಧಿಸಿತು. ಇದಾಗಿ ಕೆಲ ಹೊತ್ತಿನಲ್ಲೇ, ಅಂದರೆ ಪಂದ್ಯದ 10ನೇ ನಿಮಿಷದಲ್ಲಿ ರೂಪಿಂದರ್ ಪಾಲ್‌ ಗೋಲು ಬಾರಿಸುವ ಭಾರತದ ಗೋಲುಗಳ ಖಾತೆ ತೆರೆದರು. ಮೊದಲ ಕ್ವಾರ್ಟರ್ ಮುಕ್ತಾಯದ ವೇಳೆಗೆ ಉಭಯ ತಂಡಗಳು ತಲಾ 1-1 ಗೋಲುಗಳ ಸಮಬಲ ಸಾಧಿಸಿದವು.

ಪ್ರೇಕ್ಷಕರಿಗೆ ಪ್ರವೇಶವಿಲ್ಲದಿದ್ರೂ ಕ್ರೀಡಾಂಗಣದಲ್ಲಿ 10,000 ಮಂದಿ!

ಇನ್ನು ದ್ವಿತಿಯಾರ್ಧದ 26ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವ ಮೂಲಕ ಭಾರತಕ್ಕೆ 2-1 ಗೋಲುಗಳ ಮುನ್ನಡೆ ಒದಗಿಸಿಕೊಟ್ಟರು. ಇದರೊಂದಿಗೆ ಪ್ರಥಮಾರ್ಧದ ಅಂತ್ಯದ ವೇಳೆಗೆ ಭಾರತ 2-1ರ ಮುನ್ನಡೆ ಕಾಯ್ದುಕೊಂಡಿತ್ತು. ಇನ್ನು ತೃತಿಯಾರ್ಧದ ಆರಂಭದಲ್ಲೇ ಡ್ರ್ಯಾಗ್‌ ಫ್ಲಿಕ್ಕರ್ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಬಾರಿಸುವ ಮೂಲಕ ಭಾರತದ ಮುನ್ನಡೆಯನ್ನು 3-1ಕ್ಕೇರಿಸಿದರು. ಇದರೊಂದಿಗೆ ಭಾರತ ಕಿವೀಸ್‌ ಎದುರು ಬಿಗಿಹಿಡಿತ ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿತು. ತೃತಿಯಾರ್ಧದ ಕೊನೆಯ ಕ್ಷಣದಲ್ಲಿ ನ್ಯೂಜಿಲೆಂಡ್‌ನ ಸ್ಟೀವನ್‌ ಜೆನ್ನೀಸ್‌ ಗೋಲು ಬಾರಿಸಿ ಅಂತರವನ್ನು 3-2ಕ್ಕೆ ಕುಗ್ಗಿಸಿದರು.

ರೋಚಕತೆ ಹೆಚ್ಚಿಸಿದ ಕೊನೆಯ ಕ್ವಾರ್ಟರ್: ಅಂತಿಮ ಕ್ವಾರ್ಟರ್‌ನಲ್ಲಿ ಉಭಯ ತಂಡದ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮೊರೆಹೋದರು. ಆದರೆ ಯಾವ ತಂಡಕ್ಕೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಕೊನೆಯ ಮೂರು ನಿಮಿಷಗಳಿದ್ದಾಗ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಳ್ಳಲು ಕಿವೀಸ್‌ ವಿಫಲವಾಯಿತು. ಭಾರತದ ಗೋಲ್‌ ಕೀಪರ್‌ ಪಿ.ಆರ್ ಶ್ರೀಜೇಶ್‌ ರೋಚಕವಾಗಿ ಗೋಲು ತಡೆಯುವಲ್ಲಿ ಯಶಸ್ವಿಯಾದರು. ಕೊನೆಯ ನಿಮಿಷದಲ್ಲಿ ಮತ್ತೊಮ್ಮೆ ಕಿವೀಸ್‌ ತಂಡಕ್ಕೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ತಡೆಹಿಡಿಯುವಲ್ಲಿ ಶ್ರೀಜೇಶ್ ಯಶಸ್ವಿಯಾಗುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದು ಕೊಟ್ಟರು.
 

Latest Videos
Follow Us:
Download App:
  • android
  • ios