ಟೋಕಿಯೋ 2020: ಫೈನಲ್ ಪ್ರವೇಶಿಸಿ ಒಲಿಂಪಿಕ್ಸ್ ಪದಕದ ಆಸೆ ಮೂಡಿಸಿದ ಕಮಲ್‌ಪ್ರೀತ್ ಕೌರ್
* ಡಿಸ್ಕಸ್ ಥ್ರೋನಲ್ಲಿ ಫೈನಲ್‌ಗೇರಿದ ಭಾರತದ ಕಮಲ್‌ಪ್ರೀತ್ ಕೌರ್
* 64 ಮೀಟರ್ ಡಿಸ್ಕಸ್ ಥ್ರೋ ಮಾಡಿ ಫೈನಲ್ ಪ್ರವೇಶಿಸಿದ ಭಾರತದ ಅಥ್ಲೀಟ್
* ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದ ಒಟ್ಟು 12 ಮಹಿಳಾ ಡಿಸ್ಕಸ್ ಥ್ರೋ ಪಟುಗಳು
ಟೋಕಿಯೋ(ಜು.31): ಭಾರತದ ತಾರಾ ಡಿಸ್ಕಸ್ ಥ್ರೋ ಮಹಿಳಾ ಅಥ್ಲೀಟ್ ಕಮಲ್‌ಪ್ರೀತ್ ಕೌರ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಅಗ್ರ 12 ಡಿಸ್ಕಸ್ ಥ್ರೋ ಪಟುಗಳು ಫೈನಲ್ ಪ್ರವೇಶಿಸಿದ್ದು, ಅತಿದೂರ ಡಿಸ್ಕಸ್ ಥ್ರೋ ಮಾಡಿದವರ ಪೈಕಿ ಭಾರತದ ಕಮಲ್‌ಪ್ರೀತ್ ಕೌರ್ ಎರಡನೇ ಸ್ಥಾನದಲ್ಲಿದ್ದಾರೆ.
ಮಹಿಳಾ ವಿಭಾಗದ ಡಿಸ್ಕಸ್ ಥ್ರೋನಲ್ಲಿ 64 ಮೀಟರ್ ದೂರ ಎಸೆಯುವವರು ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ. ಅಥವಾ 'ಎ' ಹಾಗೂ 'ಬಿ' ಗುಂಪಿನಲ್ಲಿ ಸ್ಥಾನ ಪಡೆದ ಅಗ್ರ 12 ಡಿಸ್ಕಸ್ ಥ್ರೋ ಪಟುಗಳು ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ ಎಂದು ಮಾನದಂಡ ನಿಗದಿ ಪಡಿಸಲಾಗಿತ್ತು. 'ಎ' ಗುಂಪಿನಲ್ಲಿ ಯಾವೊಬ್ಬ ಮಹಿಳಾ ಡಿಸ್ಕಸ್ ಥ್ರೋವರ್ 64 ಮೀಟರ್ ದೂರ ಎಸೆಯಲಿಲ್ಲ. 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತದ ಸೀಮಾ ಪೂನಿಯಾ ಮೊದಲ ಸುತ್ತಿನಲ್ಲಿ 60.57 ಮೀಟರ್ ದೂರ ಎಸೆಯುವ ಮೂಲಕ ಟಾಪ್ 6 ಪಟ್ಟಿಯೊಳಗೆ ಸ್ಥಾನ ಪಡೆದರು.
ವಿಶ್ವ ನಂ.1 ಬಾಕ್ಸರ್ ಅಮಿತ್ ಪಂಘಾಲ್ ಹೋರಾಟ ಮೊದಲ ಸುತ್ತಿನಲ್ಲೇ ಅಂತ್ಯ..!
ಇನ್ನು ಕಮಲ್‌ಪ್ರೀತ್ ಕೌರ್ ಈ ವರ್ಷವೇ 66.59 ಮೀಟರ್ ದೂರ ಎಸೆಯುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದರು.'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಕಮಲ್‌ಪ್ರೀತ್ ಕೌರ್ ಎರಡನೇ ಯತ್ನದಲ್ಲೇ 63.97 ಮೀಟರ್ ದೂರ ಎಸೆಯುವ ಮೂಲಕ ಕೇವಲ 0.03 ಅಂತರದಲ್ಲಿ ನೇರ ಅರ್ಹತೆ ಗಿಟ್ಟಿಸುವ ಅವಕಾಶದಿಂದ ವಂಚಿತರಾದರು. ಇನ್ನು ಮೂರನೇ ಪ್ರಯತ್ನದಲ್ಲೇ 64 ಮೀಟರ್ ದೂರ ಡಿಸ್ಕಸ್ ಥ್ರೋ ಮಾಡುವ ಮೂಲಕ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾದರು. ಅಮೆರಿಕದ ವಾಲ್ರಿಯಾ ಅಲ್‌ಮನ್ 66.42 ಮೀಟರ್ ದೂರ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರೆ, ಕಮಲ್‌ಪ್ರೀತ್ ಕೌರ್ 64 ಮೀಟರ್‌ನೊಂದಿಗೆ ಎರಡನೇ ಸ್ಥಾನ ಪಡೆದರು. ಇನ್ನುಳಿದ 10 ಡಿಸ್ಕಸ್ ಥ್ರೋ ಪಟುಗಳು ಫೈನಲ್‌ಗೆ ಗರಿಷ್ಠ ದೂರ ಎಸೆದವರ ಆಧಾರದಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಭಾರತೀಯ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಇದುವರೆಗೂ ಪದಕ ಜಯಿಸಿಲ್ಲ. ಕಮಲ್‌ಪ್ರೀತ್ ಕೌರ್ ಪದಕ ಗೆದ್ದು ಇತಿಹಾಸ ನಿರ್ಮಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಇದೇ ಸ್ಥಿರತೆಯನ್ನು ಕಮಲ್‌ಪ್ರೀತ್ ಕೌರ್ ಫೈನಲ್‌ನಲ್ಲೂ ಕಾಯ್ದುಕೊಂಡರೆ ಭಾರತಕ್ಕೆ ಮತ್ತೊಂದು ಪದಕ ಬರುವುದು ಖಚಿತ ಎನಿಸಲಿದೆ. ಕ್ರಮವಾಗಿ ಅಮೆರಿಕ, ಭಾರತ, ಕ್ರೊವೇಷಿಯಾ, ಜರ್ಮನಿ, ಇಟಲಿ, ಜರ್ಮನಿ, ಕ್ಯೂಬಾ, ಪೋರ್ಚುಗಲ್, ಚೀನಾ, ಜರ್ಮನಿ, ಜಮೈಕಾ ಹಾಗೂ ಬ್ರೆಜಿಲ್‌ನ ಡಿಸ್ಕಸ್ ಥ್ರೋ ಪಟುಗಳು ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.