ಟೋಕಿಯೋ 2020: ಒಲಿಂಪಿಕ್ಸ್ ರೆಫ್ರಿಗಳ ವಿರುದ್ಧ ಮೇರಿ ಕೋಮ್ ಆಕ್ರೋಶ!
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸರ್ ಮೇರಿ ಕೋಮ್ ಹೋರಾಟ ಅಂತ್ಯ
* ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಕೊಲಂಬಿಯಾ ಬಾಕ್ಸರ್ ಎದುರು ಮೇರಿಗೆ ಸೋಲು
* ಸೋಲಿನ ಬೆನ್ನಲ್ಲೇ ಕೆಟ್ಟ ತೀರ್ಪು ನೀಡಿದ ರೆಫ್ರಿಗಳ ಮೇಲೆ ಮೇರಿ ಕೋಮ್ ಕಿಡಿ
ಟೊಕಿಯೋ(ಜು.30): ಕೊಲಂಬಿಯಾದ ವ್ಯಾಲೆನ್ಸಿಯಾ ವಿರುದ್ಧ ಸೋಲಿನ ಬಳಿಕ ಮೇರಿ ಕೋಮ್ ರೆಫ್ರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತಮ ಆಟವಾಡಿದರೂ ತಾವು ಸೋಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
‘ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಪಂದ್ಯಗಳ ಮೇಲ್ವಿಚಾರಣೆ ನಡೆಸುತ್ತಿರುವ ಟಾಸ್ಕ್ ಫೋರ್ಸ್‌ಗೆ ಏನಾಗಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಗೆ ಏನಾಗಿದೆ. ನಾನೂ ಕೂಡ ಟಾಸ್ಕ್ ಫೋರ್ಸ್‌ನ ಸದಸ್ಯೆಯಾಗಿದ್ದೆ. ಪಾರದರ್ಶಕವಾಗಿ ತೀರ್ಪು ನೀಡುವ ಬಗ್ಗೆ ಸಲಹೆಗಳನ್ನು ನೀಡಿದ್ದೆ. ಈಗ ನನಗೇ ಈ ರೀತಿ ಆಗಿದೆ’ ಎಂದು ಮೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಲು ನಂಬಲಾಗುತ್ತಿಲ್ಲ; ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಮೇರಿ ಕೋಮ್ ಪ್ರತಿಕ್ರಿಯೆ!
‘ವ್ಯಾಲೆನ್ಸಿಯಾ ವಿರುದ್ಧ ನಾನು ಈ ಹಿಂದೆ 2 ಬಾರಿ ಗೆದ್ದಿದ್ದೇನೆ. ಆದರೆ ರೆಫ್ರಿ ಆಕೆಯ ಕೈಯನ್ನು ಮೇಲೆತ್ತಿದರು ಎಂದು ನನಗೆ ನಂಬಲು ಆಗುತ್ತಿಲ್ಲ. ಆಕೆಯೇ ಪಂದ್ಯ ಗೆದ್ದಿದ್ದಾರೆ ಎಂದು ನನಗೇ ಅರಿವಾಗಲೇ ಇಲ್ಲ. ಈ ಬಾರಿ ಪ್ರತಿಭಟಿಸಲು ಇಲ್ಲವೇ ಮೇಲ್ಮನವಿ ಸಲ್ಲಿಸಲು ಅವಕಾಶವೂ ಇಲ್ಲ. ಇಡೀ ವಿಶ್ವವೇ ಪಂದ್ಯ ನೋಡಿರಲಿದೆ. ಎಲ್ಲರಿಗೂ ಗೊತ್ತಾಗಿರಲಿದೆ. 2ನೇ ಸುತ್ತಿನಲ್ಲಿ ನನಗೆ ಪೂರ್ಣ ಬಹುಮತ ದೊರೆಯಬೇಕಿತ್ತು. 3-2ರ ಫಲಿತಾಂಶ ಹೇಗೆ ಕೊಟ್ಟರು’ ಎಂದು ಮೇರಿ ಪ್ರಶ್ನಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಮೇರಿ ಕೋಮ್ ಕೊಲಂಬಿಯಾ ಆಟಗಾರ್ತಿ ಎದುರು ಕೆಚ್ಚೆದೆಯಿಂದ ಹೋರಾಟ ನಡೆಸಿ ಸೋಲು ಕಂಡಿದ್ದಾರೆ.
ಈಗಲೂ ನೀವೇ ನಮ್ಮ ಹೀರೋ: ಮೇರಿಯನ್ನು ಕೊಂಡಾಡಿದ ಫ್ಯಾನ್ಸ್
ಮೇರಿ ಕೋಮ್ ಸೋತರೂ ಸಾಮಾಜಿಕ ತಾಣಗಳಲ್ಲಿ ಸಾವಿರಾರು ಅಭಿಮಾನಿಗಳು ಅವರನ್ನು ಬೆಂಬಲಿಸಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಸಹ ಟ್ವಿಟರ್‌ನಲ್ಲಿ ಮೇರಿಯನ್ನು ಕೊಂಡಾಡಿದ್ದಾರೆ. ‘ಮೇರಿ ನೀವು ಸೋತರೂ ನನ್ನ ಪಾಲಿಗೆ ನೀವೇ ಸದಾ ಚಾಂಪಿಯನ್. ನಿಮ್ಮ ಸಾಧನೆಗಳನ್ನು ಸರಿಗಟ್ಟಲು ಅಸಾಧ್ಯ. ನಿಮ್ಮ ಸಾಧನೆಗಳ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ’ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.