ಟೋಕಿಯೋ ಒಲಿಂಪಿಕ್ಸ್: ಜೋಕೋವಿಚ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಭಾರತದ ಸಾಯಿ ಪ್ರಣೀತ್
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23ರಿಂದ ಆರಂಭ
* ಟೆನಿಸ್ ದಿಗ್ಗಜ ನೊವಾಕ್ ಜೋಕೋವಿಚ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸಾಯಿ ಪ್ರಣೀತ್
* ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿರುವ ಸಾಯಿ ಪ್ರಣೀತ್
ಟೋಕಿಯೋ(ಜು.22): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭವಾಗಲಿದೆ. ಹೀಗಿರುವಾಗಲೇ ನಂ.1 ಟೆನಿಸಿಗ, ವಿಂಬಲ್ಡನ್ ಚಾಂಪಿಯನ್ ಚಾಂಪಿಯನ್ ನೊವಾಕ್ ಜೋಕೋವಿಚ್ ಒಲಿಂಪಿಕ್ಸ್ ಪದಕ ಗೆಲ್ಲಲು ಟೋಕಿಯೋಗೆ ಬಂದಿಳಿದಿದ್ದಾರೆ. ಇನ್ನು ಭಾರತದ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಪಟು ಬಿ ಸಾಯಿ ಪ್ರಣೀತ್, ನಂ.1 ಟೆನಿಸಿಗ ಜೋಕೋವಿಚ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಈ ಫೋಟೋದಲ್ಲಿ ಇಬ್ಬರು ಕ್ರೀಡಾಪಟುಗಳು ಸಾಕಷ್ಟು ಆತ್ಮವಿಶ್ವಾಸದಿಂದ ಕೂಡಿರುವುದು ಕಂಡು ಬರುತ್ತಿದೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಸಿಂಗಲ್ಸ್ ವಿಭಾಗದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಬ್ಯಾಡ್ಮಿಂಟನ್ ಪಟು ಎನಿಸಿದ್ದಾರೆ. ಇನ್ನುಳಿದಂತೆ ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಹಾಗೂ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಒಟ್ಟು 228 ಮಂದಿ ಪಾಲ್ಗೊಂಡಿದ್ದಾರೆ. ಈ ಪೈಕಿ 120 ಮಂದಿ ಕ್ರೀಡಾಪಟುಗಳಾಗಿದ್ದಾರೆ. ಈ ಬಾರಿ ಭಾರತದಿಂದ ಹಿಂದೆಂದಿಗಿಂತಲು ಹೆಚ್ಚು ಅಥ್ಲೀಟ್‌ಗಳನ್ನು ಕಳಿಸಿಕೊಡಲಾಗಿದ್ದು, ಹೆಚ್ಚಿನ ಪದಕಗಳನ್ನು ನಿರೀಕ್ಷೆ ಮಾಡಲಾಗಿದೆ.