ಟೋಕಿಯೋ 2020: ಕೊರಿಯಾ ಆರ್ಚರ್ ಮನೆಗಟ್ಟಿದ ಆತನು ದಾಸ್..!
* ಪದಕದ ಭರವಸೆ ಮೂಡಿಸಿದ ಆರ್ಚರಿ ಪಟು ಆತನು ದಾಸ್
* ಕೊರಿಯಾದ ಬಲಿಷ್ಠ ಆರ್ಚರ್‌ರನ್ನು ಮನೆಗಟ್ಟುವಲ್ಲಿ ಆತನು ದಾಸ್ ಯಶಸ್ವಿ
* ಪ್ರೀಕ್ವಾರ್ಟರ್ ಪ್ರವೇಶಿಸಿದ ಆತನು ದಾಸ್ ಹಾಗೂ ದೀಪಿಕಾ ಕುಮಾರಿ
ಟೋಕಿಯೋ(ಜು.29): ಗುರುವಾರ ಮುಂಜಾನೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯರ ಪಾಲಿಗೆ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿದೆ. ಮೊದಲಿಗೆ ಬ್ಯಾಡ್ಮಿಂಟನ್‌ನಲ್ಲಿ ಸಿಂಧು ಗೆಲುವು ದಾಖಲಿಸಿದರೆ, ಬಳಿಕ ಹಾಕಿ ತಂಡವು ಬಲಿಷ್ಠ ಅರ್ಜೆಂಟೀನಾ ತಂಡವನ್ನು ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ಟಿಕೆಟ್ ಪಕ್ಕಾ ಮಾಡಿಕೊಂಡಿದೆ. ಇದೆಲ್ಲದರ ನಡುವೆ ಆರ್ಚರಿಯಲ್ಲಿ ಆತನು ದಾಸ್ 2012ರ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಕೊರಿಯಾದ ಒಹ್ ಜಿನ್‌ಹ್ಯಾಕ್ ಎದುರು 6-5 ಅಂತರದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಪ್ರೀಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
16ನೇ ಸುತ್ತಿನ ಪಂದ್ಯದಲ್ಲಿ ಕೊರಿಯಾದ ಒಹ್ ಜಿನ್‌ಹ್ಯಾಕ್ ಮೊದಲ ಸೆಟ್‌ನಲ್ಲಿ 26-25 ಅಂಕಗಳ ಮುನ್ನಡೆ ಸಾಧಿಸುವ ಮೂಲಕ 2 ಅಂಕ ಸಂಪಾದಿಸಿದರು. ಇನ್ನು ಎರಡನೇ ಹಾಗೂ ಮೂರನೇ ಸೆಟ್‌ನಲ್ಲಿ ಉಭಯ ಆರ್ಚರ್‌ಗಳು ತಲಾ 27-27 ಅಂಕ ಗಳಿಸುವ ಮೂಲಕ ತಲಾ ಒಂದೊಂದು ಅಂಕ ಹಂಚಿಕೊಂಡರು. ಇನ್ನು ನಾಲ್ಕನೇ ಸೆಟ್‌ನಲ್ಲಿ ಆತನು ದಾಸ್ 27-22 ಅಂಕಗಳನ್ನು ಗಳಿಸಿ ಕಮ್‌ಬ್ಯಾಕ್ ಮಾಡಿದರು. ಇನ್ನು ಐದನೇ ಸೆಟ್‌ನಲ್ಲಿ ಮತ್ತೆ ಉಭಯ ಆಟಗಾರರು ತಲಾ 28 ಅಂಕ ಗಳಿಸಿದ್ದರಿಂದ ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. ಮೊದಲು ಬಾಣ ಪ್ರಯೋಗಿಸಿದ ಕೊರಿಯಾ ಆರ್ಚರ್ 9 ಅಂಕ ಗಳಿಸಿದರೆ, ಆತನು ದಾಸ್ 10 ಅಂಕ ಗಳಿಸುವ ಮೂಲಕ ಬಲಿಷ್ಠ ಕೊರಿಯಾ ಆರ್ಚರ್ ಅವರನ್ನು ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರದಬ್ಬುವಲ್ಲಿ ಯಶಸ್ವಿಯಾದರು.
ಈಗಾಗಲೇ ಆತನು ದಾಸ್ ಪತ್ನಿ ದೀಪಿಕಾ ಕುಮಾರಿ ಕೂಡಾ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಈ ಇಬ್ಬರು ಒಲಿಂಪಿಕ್ಸ್‌ನಲ್ಲಿ ಪದಕದ ಬೇಟೆಯಾಡಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.