ಗುರಿ ನಿನ್ನ ಮುಂದಿದೆ, ಗೆದ್ದು ಬನ್ನಿ: ಭಾರತದ ಒಲಿಂಪಿಕ್ಸ್ ಧ್ಯೇಯ ಗೀತೆ ಬಿಡುಗಡೆ
* ಟೋಕಿಯೋ ಒಲಿಂಪಿಕ್ಸ್‌ಗೆ ಭಾರತದ ಧ್ಯೇಯಗೀತೆ ಬಿಡುಗಡೆ
* ಗುರಿ ಮುಂದಿದೆ, ಗೆದ್ದು ಬನ್ನಿ ಎನ್ನುವ ಸಾಂಗ್ ಬಿಡುಗಡೆ
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭ
ನವದೆಹಲಿ(ಜು.09): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಜುಲೈ 23ರಿಂದ ಜಪಾನಿನಲ್ಲಿ ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ಆರಂಭವಾಗಲಿದೆ. ಭಾರತದಿಂದ ಈ ಬಾರಿ 120ಕ್ಕೂ ಅಧಿಕ ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ನಮ್ಮ ಅಥ್ಲೀಟ್‌ಗಳನ್ನು ಹುರಿದುಂಬಿಸಲು ಗುರಿ ಮುಂದಿದೆ, ಗೆದ್ದು ಬನ್ನಿ ಎನ್ನುವ ಭಾರತದ ಅಧಿಕೃತ ಧ್ಯೇಯಗೀತೆಯನ್ನು ಬಿಡುಗಡೆಗೊಳಿಸಿದೆ.
ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 08ರವರೆಗೆ ಜರುಗಲಿದೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಭಾರತದ ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದಷ್ಟೇ ಅಲ್ಲದೇ ಹೆಚ್ಚು ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 6 ಪದಕ ಗೆದ್ದಿರುವುದೇ ಒಲಿಂಪಿಕ್ಸ್‌ನಲ್ಲಿ ಭಾರತ ದಾಖಲಿಸಿದ ಗರಿಷ್ಠ ಸಾಧನೆ ಎನಿಸಿದೆ.
ಜುಲೈ 13ರಂದು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಸಂವಾದ
ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ಮೋಹಿತ್ ಚೌಹ್ವಾಣ್ ಹಾಡಿರುವ ಲಕ್ಷ್ ತೇರಾ ಸಾಮ್ನೆ ಹೈ(ಗುರಿ ನಿಮ್ಮ ಮುಂದಿದೆ) ಹಾಡನ್ನು ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಒಲಿಂಪಿಕ್ಸ್ ಪದಕ ಗೆಲ್ಲಲು ಅಥ್ಲೀಟ್‌ಗಳನ್ನು ಹುರಿದುಂಬಿಸಿದ್ದಾರೆ. ಈ ಹಾಡಿನಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಏಕೈಕ ಅಥ್ಲೀಟ್ ಅಭಿನವ್ ಬಿಂದ್ರಾ, ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ, ಬಾಕ್ಸರ್ ಮೇರಿ ಕೋಮ್ ಸೇರಿದಂತೆ ಹಲವು ಚಾಂಪಿಯನ್ ಅಥ್ಲೀಟ್‌ಗಳು ಕಾಣಿಸಿಕೊಂಡಿದ್ದಾರೆ.