ಟೋಕಿಯೋ 2020 ನೀರಜ್ ಚೋಪ್ರಾ ದೇಶಕ್ಕೆ ಬಂಗಾರ ತೊಡಿಸಿದ ಯೋಧ
* ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಜಾವಲಿನ್ ಪಟು ನೀರಜ್ ಚೋಪ್ರಾ
* ಜಾವಲಿನ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಬಂಗಾರ
* ಅಥ್ಲೇಟಿಕ್ಸ್‌ನಲ್ಲಿ ಭಾರತಕ್ಕಿದು ಮೊದಲ ಒಲಿಂಪಿಕ್ಸ್ ಚಿನ್ನ
ಟೋಕಿಯೋ(ಆ.07): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಿರೀಕ್ಷೆಯಂತೆ ದೇಶದ ಚಾಂಪಿಯನ್ ಜಾವಲಿನ್ ಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಜಾವಲಿನ್ ಫೈನಲ್ ಸ್ಪರ್ಧೆಯಲ್ಲಿ ಬರೋಬ್ಬರಿ 87.58 ಮೀಟರ್ ಎಸೆಯುವ ಮೂಲಕ ಪದಕ ಜಯಿಸಿದ್ದಾರೆ. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೀಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ನೀರಜ್ ಚೋಪ್ರಾ ಮೊದಲ ಪದಕ ಗೆದ್ದು ಕೊಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಉದ್ಯೋಗಿಯಾಗಿರುವ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜೆಕ್ ರಿಪಬ್ಲಿಕ್‌ನ ಜೇಕಬ್ ವಡಲ್ಜೆಕ್ ಹಾಗೂ ವಿಜೆಲ್ವ್ ವೆಸ್ಲೇ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು
ಮೊದಲ ಪ್ರಯತ್ನದಲ್ಲಿ ನೀರಜ್ ಚೋಪ್ರಾ ಬರೋಬ್ಬರಿ 87.03 ಮೀಟರ್ ದೂರ ಎಸೆಯುವ ಮೂಲಕ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರು. ಜರ್ಮನಿಯ ಜೂಲಿಯನ್ ವೇಬರ್ 85.30 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಉಳಿದಂತೆ ಮೊದಲ ಸುತ್ತಿನಲ್ಲಿ ಮತ್ತೆ ಯಾವ ಜಾವಲಿನ್ ಪಟುವು 85 ಮೀಟರ್‌ಗಿಂತ ದೂರ ಜಾವಲಿನ್ ಎಸೆಯಲಿಲ್ಲ.
ಟೋಕಿಯೋ 2020: ಜಾವೆಲಿನ್ ಫೈನಲ್‌ನಲ್ಲಿ ಚಿನ್ನದ ಮೇಲೆ ಕಣ್ಣಿಟ್ಟ ನೀರಜ್ ಚೋಪ್ರಾ
ಇನ್ನು ಎರಡನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ತಮ್ಮ ಪ್ರದರ್ಶನವನ್ನು ಮತ್ತಷ್ಟು ಉತ್ತಮಪಡಿಸಿಕೊಂಡರು. ಇನ್ನು ಎರಡನೇ ಪ್ರಯತ್ನದಲ್ಲಿ ವೇಬರ್ 77.90 ಮೀಟರ್ ದೂರ ಎಸೆಯಲಷ್ಟೇ ಶಕ್ತರಾದರು. ಎರಡನೇ ಸುತ್ತಿನ ಅಂತ್ಯದ ವೇಳೆಗೂ ನೀರಜ್ ಚೋಪ್ರಾ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇನ್ನು ಮೂರನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ ಮೊದಲೆರಡು ಸುತ್ತಿನಲ್ಲಿ ತೋರಿದಷ್ಟು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ಮೂರನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ ಕೇವಲ 76.79 ಮೀಟರ್ ದೂರ ಮಾತ್ರ ಎಸೆದರು. ಇನ್ನು ಜೆಕ್ ರಿಪಬ್ಲಿಕ್‌ನ ವಿಜೆಲ್ವ್ ವೆಸ್ಲೇ 85.44 ಮೀಟರ್ ದೂರ ಎಸೆಯುವ ಮೂಲಕ ಗರಿಷ್ಠ ದೂರ ಎಸೆದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.
ವಿಶ್ವ ನಂ.1 ಜಾವಲಿನ್ ಥ್ರೋ ಪಟು ಜೊಹಾನಸ್ ವೆಟ್ಟರ್ ಅಂತಿಮ 8ರ ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ವಿಫಲರಾದರು. ವೈಯುಕ್ತಿಕ 96.29 ಮೀಟರ್ ದೂರ ಎಸೆದು ಗಮನ ಸೆಳೆದಿದ್ದ ವೆಟ್ಟರ್ ಈ ಬಾರಿ ಪದಕ ಗೆಲ್ಲಬಲ್ಲ ನೆಚ್ಚಿನ ಜಾವಲಿನ್ ಪಟು ಎನಿಸಿದ್ದರು. ಆದರೆ ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿ ನಿರಾಸೆ ಅನುಭವಿಸಿದರು. ವೆಟ್ಟರ್ ಗರಿಷ್ಠ 82 ಮೀಟರ್ ದೂರ ಎಸೆಯಲಷ್ಟೇ ಶಕ್ತರಾದರು
ಇನ್ನು ನಾಲ್ಕನೇ ಸುತ್ತಿನಲ್ಲಿ ಮತ್ತೊಮ್ಮೆ ತಮ್ಮ ಹಳೆಯ ಲಯ ಕಂಡುಕೊಳ್ಳಲು ವಿಫಲರಾದರು. ಹೀಗಾಗಿ ನಾಲ್ಕನೇ ಸುತ್ತಿನಲ್ಲಿ ಚೋಪ್ರಾ ಗೆರೆ ದಾಟಿ ಪೌಲ್ ಮಾಡಿದರು. ಇನ್ನು 5ನೇ ಸುತ್ತಿನಲ್ಲಿ ಕೂಡಾ ನೀರಜ್ 80 ಮೀಟರ್ ಗಡಿ ದಾಟಲಿಲ್ಲ. ಎರಡನೇ ಪ್ರಯತ್ನದಲ್ಲಿ ತೋರಿದ ಉತ್ತಮ ಪ್ರದರ್ಶನವೇ ನೀರಜ್‌ಗೆ ಕೊರಳಿಗೆ ಚಿನ್ನದ ಹಾರ ಸಿಗುವಂತೆ ಮಾಡಿತು.