* ಆಸ್ಟ್ರೇಲಿಯಾ ಎದುರು ಭಾರತ ಹಾಕಿ ತಂಡಕ್ಕೆ ಹೀನಾಯ ಸೋಲು* ಕಾಂಗರೂಗಳೆದುರು 7-1 ಅಂತರದಲ್ಲಿ ಸೋಲು* ಆಸೀಸ್‌ ಎದುರು ನೀರಸ ಪ್ರದರ್ಶನ ತೋರಿದ ಮನ್‌ಪ್ರೀತ್‌ ಸಿಂಗ್‌ ಪಡೆ

ಟೋಕಿಯೋ(ಜು.25): ಬಲಿಷ್ಠ ಆಸ್ಟ್ರೇಲಿಯಾ ಎದುರು ಮನ್‌ಪ್ರೀತ್ ಸಿಂಗ್‌ ನೇತೃತ್ವದ ಭಾರತ ಹಾಕಿ ತಂಡವು 7-1 ಗೋಲುಗಳ ಅಂತರದ ಆಘಾತಕಾರಿ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಭರ್ಜರಿ ಗೆಲುವು ಸಾಧಿಸಿದ್ದ ಹಾಕಿ ಇಂಡಿಯಾ, ಎರಡನೇ ಪಂದ್ಯದಲ್ಲಿ ಸೋಲಿನ ಕಹಿಯುಂಡಿದೆ.

ಆಸ್ಟ್ರೇಲಿಯಾ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋಯಿತು. 8ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್‌ಪ್ರೀತ್ ಕೈಚೆಲ್ಲಿದರು. ಮುರು ನಿಮಿಷದಲ್ಲೇ ಆಸ್ಟ್ರೇಲಿಯಾಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಡೇನಿಯಲ್‌ ಬೀಲೆ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಮೊದಲ ಕ್ವಾರ್ಟರ್‌ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿತು.

Scroll to load tweet…

ಎರಡನೇ ಕ್ವಾರ್ಟರ್‌ನ 21ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಜೆರಾಮಿ ಹ್ಯಾವರ್ಡ್‌ ಗೋಲು ಬಾರಿಸುವ ಮೂಲಕ ಆಸ್ಟ್ರೇಲಿಯಾ 2-0 ಮುನ್ನಡೆ ಸಾಧಿಸುವಂತೆ ಮಾಡಿದರು. ಇದಾದ ಕೆಲ ನಿಮಿಷದಲ್ಲೇ ಫ್ಲಿನ್ ಒಗಿಲ್ವಿಯೇ ಗೋಲು ಬಾರಿಸುವ ಮೂಲಕ ಕಾಂಗರೂ ಪಡೆಗೆ 3-0 ಮುನ್ನಡೆ ಒದಗಿಸಿಕೊಟ್ಟರು.ಮೊದಲಾರ್ಧ ಮುಕ್ತಾಯಕ್ಕೆ ಕೊನೆಯ ಎರಡು ನಿಮಿಷಗಳಿದ್ದಾಗ ಜೋಶುವಾ ಬ್ಲಿಟ್ಜ್‌ ಗೋಲು ಬಾರಿಸಿ ಅಂತರವನ್ನು 4-0ಗೆ ಹೆಚ್ಚಿಸಿದರು.

ಟೋಕಿಯೋ 2020: ಕಿವೀಸ್‌ ಎದುರು ಭಾರತ ಹಾಕಿ ತಂಡಕ್ಕೆ ರೋಚಕ ಜಯ

ಮೂರನೇ ಕ್ವಾರ್ಟರ್‌ನಲ್ಲಿ ಪಂದ್ಯದ 34ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಭಾರತ ಪರ ಮೊದಲ ಗೋಲು ದಾಖಲಿಸಿದರು. ಆಬಳಿಕ ಆಸ್ಟ್ರೇಲಿಯಾದ ಬ್ಲೇಕ್‌ ಗೋವರ್ ಪೆನಾಲ್ಟಿ ಸ್ಟ್ರೋಕ್‌ ಮೂಲಕ ಗೋಲು ಬಾರಿಸಿ ಅಂತರವನ್ನು 5-1ಕ್ಕೆ ಹಿಗ್ಗಿಸಿದರು. ಕೊನೆಯ ಕ್ವಾರ್ಟರ್‌ನಲ್ಲೂ ಪ್ರಾಬಲ್ಯ ಮೆರೆದ ಆಸ್ಟ್ರೇಲಿಯಾ ಮತ್ತೆರಡು ಗೋಲು ಬಾರಿಸಿ 7-1 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು.