ಟೋಕಿಯೋ 2020: ಹರಿಣಗಳ ಬೇಟೆಯಾಡಿದ ಮಹಿಳಾ ಹಾಕಿ ತಂಡ
* ದಕ್ಷಿಣ ಆಫ್ರಿಕಾ ಎದುರು ಭರ್ಜರಿ ಗೆಲುವು ಸಾಧಿಸಿದ ಭಾರತೀಯ ಮಹಿಳಾ ಹಾಕಿ ತಂಡ
* ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ ವಂದನ ಕಟಾರಿಯಾ
* ನಾಕೌಟ್ ಪ್ರವೇಶಿಸುವ ಕನಸು ಜೀವಂತವಾಗಿರಿಸಿಕೊಂಡ ರಾಣಿ ರಾಂಪಾಲ್ ಪಡೆ
ಟೋಕಿಯೋ(ಜು.31): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸುವ ಹಾದಿ ಮತ್ತಷ್ಟು ಸಮೀಪವಾಗಿದೆ. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ವಂದನಾ ಕಟಾರಿಯಾ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ತಂಡವು 4-3 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
'ಎ' ಗುಂಪಿನ ಪಂದ್ಯದಲ್ಲಿ ಮೊದಲಿಗೆ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡವು ಆ ಬಳಿಕ ಸತತ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇಂದು ರಾತ್ರಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವು ಐರ್ಲೆಂಡ್ ತಂಡವನ್ನು ಮಣಿಸಿದರೆ ಅಥವಾ ಈ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ ರಾಣಿ ರಾಂಪಾಲ್ ಪಡೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಡಲಿದೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಮಹಿಳಾ ಹಾಕಿ ತಂಡವು ಮೊದಲ ಬಾರಿಗೆ ನಾಕೌಟ್ ಪ್ರವೇಶಿಸಿದ ಸಾಧನೆ ಮಾಡಲಿದೆ. ಒಂದು ವೇಳೆ ಗ್ರೇಟ್ ಬ್ರಿಟನ್ ಎದುರು ಐರ್ಲೆಂಡ್ ಗೆಲುವು ಸಾಧಿಸಿದರೆ ಭಾರತ ಮಹಿಳಾ ಹಾಕಿ ತಂಡದ ಟೋಕಿಯೋ ಒಲಿಂಪಿಕ್ಸ್ ಪಯಣಕ್ಕೆ ಪೂರ್ಣ ವಿರಾಮ ಬೀಳಲಿದೆ.
ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಗೋಲು, ವಂದನಾ ದಾಖಲೆ: ಗ್ರೂಪ್ ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವಂದನಾ ಕಟಾರಿಯಾ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನ ಪಂದ್ಯವೊಂದರಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಭಾರತದ ಮೊದಲ ಮಹಿಳಾ ಹಾಕಿ ಪಟು ಎನ್ನುವ ದಾಖಲೆಗೆ ವಂದನಾ ಭಾಜನರಾಗಿದ್ದಾರೆ.
ಟೋಕಿಯೋ 2020: ಐರ್ಲೆಂಡ್ ಮಣಿಸಿದ ಮಹಿಳಾ ಹಾಕಿ ತಂಡ, ಕ್ವಾರ್ಟರ್‌ಫೈನಲ್ ಕನಸು ಜೀವಂತ..!
ಮೊದಲ ಕ್ವಾರ್ಟರ್‌ನ 4ನೇ ನಿಮಿಷದಲ್ಲಿ ಕಟಾರಿಯಾ ಮೊದಲ ಗೋಲು ಬಾರಿಸುವ ಮೂಲಕ ಭಾರತದ ಖಾತೆ ತೆರೆದರು. ಭಾರತ ಈ ಸಂಭ್ರಮ ಹೆಚ್ಚುಹೊತ್ತು ಉಳಿಯಲಿಲ್ಲ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಟೆರ್ರನ್ ಗ್ಲಾಸ್‌ಬೈ ಗೋಲು ಬಾರಿಸುವ ಮೂಲಕ 1-1ರ ಸಮಬಲ ಸಾಧಿಸುವಂತೆ ಮಾಡಿದರು. ಎರಡನೇ ಕ್ವಾರ್ಟರ್‌ನಲ್ಲಿ ದೀಪ್ ಗ್ರೇಸ್ ಎಕ್ಕಾ ಡ್ರ್ಯಾಗ್ ಫ್ಲಿಕ್‌ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ವಂದನಾ ಕಟಾರಿಯಾ ಯಶಸ್ವಿಯಾಗುವ ಮೂಲಕ ಭಾರತಕ್ಕೆ 2-1ರ
ಮುನ್ನಡೆ ಒದಗಿಸಿಕೊಟ್ಟರು. ಇದರ ಬೆನ್ನಲ್ಲೇ ಹರಿಣಗಳ ನಾಯಕಿ ಎರಿನ್ ಹಂಟರ್ ಗೋಲು ಬಾರಿಸಿ ಮತ್ತೆ ಸ್ಕೋರ್ 2-2ರ ಸಮಬಲವಾಗುವಂತೆ ಮಾಡಿದರು.
ಇದಾದ ಬಳಿಕ ನೇಹಾ ಗೋಲು ಬಾರಿಸಿ ಭಾರತಕ್ಕೆ ಮತ್ತೆ 3-2ರ ಮುನ್ನಡೆ ಒದಗಿಸಿಕೊಟ್ಟರು. ಆದರೆ ದಕ್ಷಿಣ ಆಫ್ರಿಕಾದ ಮರಿಜೆನ್ ಮೇರಿಸ್ ಭಾರತದ ಮೂವರು ಡಿಫೆಂಡರ್‌ಗಳನ್ನು ವಂಚಿಸಿ ಗೋಲು ದಾಖಲಿಸುವ ಮತ್ತೆ 3-3ರ ಸಮಬಲ ಸಾಧಿಸುವಂತೆ ಮಾಡಿದರು. ಇನ್ನು ಪಂದ್ಯ ಮುಕ್ತಾಯಕ್ಕೆ ಕೇವಲ 11 ನಿಮಿಷಗಳು ಬಾಕಿ ಇರುವಾಗ ವಂದನಾ ಕಟಾರಿಯಾ ಮತ್ತೊಂದು ಗೋಲು ಬಾರಿಸಿ ಭಾರತದ ಗೆಲುವನ್ನು ಖಚಿತಪಡಿಸಿದರು.
ಆರಂಭಿಕ ವೈಫಲ್ಯಗಳನ್ನು ಮೆಟ್ಟಿನಿಂತು ಸತತ ಎರಡು ಗೆಲುವು ದಾಖಲಿಸಿರುವ ರಾಣಿ ರಾಂಪಾಲ್ ಪಡೆಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅದೃಷ್ಟ ಕೈಹಿಡಿಯುತ್ತಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಪುರುಷರ ಹಾಕಿ ತಂಡವು ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದೆ.