ಟೋಕಿಯೋ 2020: ಐರ್ಲೆಂಡ್ ಮಣಿಸಿದ ಮಹಿಳಾ ಹಾಕಿ ತಂಡ, ಕ್ವಾರ್ಟರ್ಫೈನಲ್ ಕನಸು ಜೀವಂತ..!
* ಹ್ಯಾಟ್ರಿಕ್ ಸೋಲಿನ ಬಳಿಕ ಒಲಿಂಪಿಕ್ಸ್‌ನಲ್ಲಿ ಮೊದಲ ಗೆಲುವು ದಾಖಲಿಸಿದ ಮಹಿಳಾ ಹಾಕಿ ತಂಡ
* ಐರ್ಲೆಂಡ್ ಎದುರು ರಾಣಿ ರಾಂಪಾಲ್ ಪಡೆಗೆ 1-0 ಅಂತರದ ಜಯ
* ರಾಣಿ ಪಡೆಯ ನಾಕೌಟ್ ಕನಸು ಜೀವಂತ
ಟೋಕಿಯೋ(ಜು.30): ಕಡೆಯ ಕ್ಷಣದಲ್ಲಿ ನವನೀತ್ ಕೌರ್ ಬಾರಿಸಿದ ಆಕರ್ಷಕ ಗೋಲಿನ ನೆರವಿನಿಂದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಣಿ ರಾಂಪಾಲ್ ನೇತೃತ್ವದ ಭಾರತ ಹಾಕಿ ತಂಡ ಗೆಲುವಿನ ಖಾತೆ ತೆರೆದಿದೆ. 'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಮಹಿಳಾ ಹಾಕಿ ತಂಡವು ಐರ್ಲೆಂಡ್ ವಿರುದ್ದ ಪಂದ್ಯದಲ್ಲಿ 1-0 ಅಂತರದ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡವು ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿತ್ತು. ಆದರೆ ಐರ್ಲೆಂಡ್ ವಿರುದ್ದದ ಗೆಲುವು ಭಾರತ ಹಾಕಿ ತಂಡಕ್ಕೆ ಹೊಸ ಹುರುಪು ತಂದುಕೊಟ್ಟಿದ್ದು, ಅದೃಷ್ಟ ಸಹಾ ಕೈ ಹಿಡಿದರೆ ರಾಣಿ ರಾಂಪಾಲ್ ನೇತೃತ್ವದ ಮಹಿಳಾ ಹಾಕಿ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಬಹುದಾಗಿದೆ. ಹೌದು, ಒಂದು ವೇಳೆ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದರೆ, ಇದೇ ವೇಳೆ ಐರ್ಲೆಂಡ್ ತಂಡವು ಗ್ರೇಟ್ ಬ್ರಿಟನ್‌ಗೆ ಶರಣಾದರೇ ಭಾರತ ಮಹಿಳಾ ಹಾಕಿ ತಂಡವು ನಾಕೌಟ್ ಹಂತಕ್ಕೇರಲಿದೆ.
ಟೋಕಿಯೋ 2020: ಭಾರತ ಮಹಿಳಾ ಹಾಕಿ ತಂಡಕ್ಕೆ ಹ್ಯಾಟ್ರಿಕ್ ಸೋಲು
ಪಂದ್ಯದ 57ನೇ ನಿಮಿಷದಲ್ಲಿ ಆಕರ್ಷಕ ಪಾಸ್‌ನ ಲಾಭ ಪಡೆದುಕೊಂಡ ನವನೀತ್ ಕೌರ್ ಗೋಲು ಬಾರಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದು ಕೊಟ್ಟಿದ್ದಾರೆ. 'ಎ' ಹಾಗೂ 'ಬಿ' ಗುಂಪಿನಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿದ್ದು, ಅದೃಷ್ಟ ರಾಣಿ ರಾಂಪಾಲ್ ಪಡೆಯನ್ನು ಕ್ವಾರ್ಟರ್ ಫೈನಲ್‌ಗೇರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಈಗಾಗಲೇ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.