* ರಿಯೋ ಒಲಿಂಪಿಕ್ ಚಾಂಪಿಯನ್‌ ಅರ್ಜೆಂಟೀನಾ ಎದುರು ಭಾರತ ಹಾಕಿ ತಂಡ ದಿಗ್ವಿಜಯ* ಬಲಿಷ್ಠ ಅರ್ಜೆಂಟೀನಾ ಎದುರು ಭಾರತಕ್ಕೆ 3-1 ಗೋಲುಗಳ ಜಯ* ಭಾರತದ ಸಂಘಟಿತ ಪ್ರದರ್ಶನಕ್ಕೆ ಒಲಿದ ಜಯ

ಟೋಕಿಯೋ(ಜು.29) ಭಾರತ ಹಾಕಿ ತಂಡದ ಗತಕಾಲದ ವೈಭವ ಮತ್ತೊಮ್ಮೆ ಮರುಕಳಿಸುವ ಎಲ್ಲಾ ಲಕ್ಷಣಗಳು ಕಾಣಿಸಲಾರಂಭಿಸಿದೆ. ಇಂದು(ಜು.29) ರಿಯೋ ಒಲಿಂಪಿಕ್ಸ್‌ ಚಾಂಪಿಯನ್‌ ಅರ್ಜೆಂಟೀನಾ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು 3-1 ಅಂತರದಲ್ಲಿ ಮಣಿಸುವ ಮೂಲಕ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಟಿಕೆಟ್‌ ಖಚಿತ ಪಡಿಸಿಕೊಂಡಿದೆ.

ಆಸ್ಟ್ರೇಲಿಯಾ ಎದುರು ಮಾಡಿದ ತಪ್ಪನ್ನು ತಿದ್ದಿಕೊಂಡ ಭಾರತ ಹಾಕಿ ತಂಡ ಬಲಿಷ್ಠ ಅರ್ಜೆಂಟೀನಾ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಕ್ವಾರ್ಟರ್‌ ಫೈನಲ್‌ಗೆ ಮತ್ತಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಗ್ರೂಪ್‌ ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಜಪಾನ್ ತಂಡವನ್ನು ಎದುರಿಸಲಿದ್ದು, ಇದು ಭಾರತ ತಂಡದ ಕ್ವಾರ್ಟರ್‌ ಫೈನಲ್‌ ಪ್ರವೇಶದ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸದ್ಯ ಭಾರತ 'ಎ' ಗುಂಪಿನಲ್ಲಿ 4 ಪಂದ್ಯಗಳನ್ನಾಡಿ 3 ಗೆಲುವು ಹಾಗೂ ಒಂದು ಸೋಲು ಕಂಡಿದೆ.

Scroll to load tweet…
Scroll to load tweet…

ಆರಂಭದಿಂದಲೇ ಭಾರತ ಹಾಗೂ ಅರ್ಜೆಂಟೀನಾ ತಂಡಗಳು ಸಾಕಷ್ಟು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದವು. ಹೀಗಾಗಿ ಮೊದಲ ಕ್ವಾರ್ಟರ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಇನ್ನು ದ್ವಿತಿಯ ಕ್ವಾರ್ಟರ್‌ನಲ್ಲೂ ಕೂಡಾ ಉಭಯ ತಂಡಗಳು ಗೋಲು ಬಾರಿಸಲು ಯಶಸ್ವಿಯಾಗಲಿಲ್ಲ. ಹೀಗಾಗಿ ಮೊದಲಾರ್ಧ ಮುಕ್ತಾಯದ ವೇಳೆಗೆ ಸ್ಕೋರ್ 0-0 ಆಗಿತ್ತು.

ಇನ್ನು ದ್ವಿತಿಯಾರ್ಧದಲ್ಲಿ ಪಂದ್ಯದ 43ನೇ ನಿಮಿಷದಲ್ಲಿ ಭಾರತಕ್ಕೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ರೂಪಿಂದರ್ ಪಾಲ್ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಡಿಫೆಂಡರ್ ವರುಣ್ ಕುಮಾರ್ ಯಶಸ್ವಿಯಾದರು. ಇದರೊಂದಿಗೆ ಭಾರತ ಪಂದ್ಯದಲ್ಲಿ 1-0 ಮುನ್ನಡೆ ಪಡೆಯಿತು. ಇದರೊಂದಿಗೆ ಮೂರನೇ ಕ್ವಾರ್ಟರ್‌ ಮುಕ್ತಾಯದ ವೇಳೆಗೆ ಭಾರತ ಅದೇ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಇನ್ನು ನಾಲ್ಕನೇ ಹಾಗೂ ನಿರ್ಣಾಯಕ ಕ್ವಾರ್ಟರ್‌ನ 48ನೇ ನಿಮಿಷದಲ್ಲಿ ಅರ್ಜೆಂಟೀನಾಗೆ ಸಿಕ್ಕ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಮೈಕೋ ಕೆಸೆಲಾ ಯಶಸ್ವಿಯಾದರು. ಇದರೊಂದಿಗೆ ಉಭಯ ತಂಡಗಳು ತಲಾ 1-1 ಮುನ್ನಡೆ ಸಾಧಿಸಿದವು. ಆದರೆ ಕೊನೆಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತ, ಪಂದ್ಯ ಮುಕ್ತಾಯಕ್ಕೆ ಕೊನೆಯ ಕೆಲವು ನಿಮಿಷಗಳು ಬಾಕಿ ಇದ್ದಾಗ ದಿಲ್ಪ್ರೀತ್ ಸಿಂಗ್ ನೀಡಿದ ಪಾಸ್‌ ಅನ್ನು ವಿವೇಕ್ ಸಾಗರ್ ಪ್ರಸಾದ್ ಗೋಲಾಗಿ ಪರಿವರ್ತಿಸುವ ಮೂಲಕ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಇನ್ನು ಪಂದ್ಯದ 59ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸುವ ಮೂಲಕ ಭಾರತದ ಕ್ವಾರ್ಟರ್ ಫೈನಲ್ ಹಾದಿಯನ್ನು ಖಚಿತ ಪಡಿಸಿದರು.