* ಟೋಕಿಯೋ ಒಲಿಂಪಿಕ್ಸ್‌ ಉದ್ಘಾಟನೆಗೆ ಕ್ಷಣಗಣನೆ ಆರಂಭ* ವೈಯುಕ್ತಿಕ ರ‍್ಯಾಂಕಿಂಗ್‌ ಸುತ್ತಿನಲ್ಲಿ ಭಾರತೀಯ ಆರ್ಚರಿಗಳ ಉತ್ತಮ ಸಾಧನೆ* ಮಹಿಳೆಯರ ವಿಭಾಗ ಹಾಗೂ ಮಿಶ್ರ ವಿಭಾಗದಲ್ಲಿ ಭಾರತಕ್ಕೆ 9ನೇ ಸ್ಥಾನ

ಟೋಕಿಯೋ(ಜು.23): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡುವುದಕ್ಕಿಂತ ಮೊದಲೇ ನಡೆದ ವೈಯುಕ್ತಿಕ ರ‍್ಯಾಂಕಿಂಗ್‌ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಆರ್ಚರ್‌ಗಳು ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ಇಂದು ಮುಂಜಾನೆ ನಡೆದ ಮಹಿಳಾ ವಿಭಾಗದ ರ‍್ಯಾಂಕಿಂಗ್‌ ಸುತ್ತಿನಲ್ಲಿ 720ಕ್ಕೆ 663 ಅಂಕಗಳನ್ನು ಗಳಿಸುವ ಮೂಲಕ ವಿಶ್ವದ ನಂ.1 ಆರ್ಚರಿ ಪಟು, ಭಾರತದ ಪದಕದ ಭರವಸೆ ದೀಪಿಕಾ ಕುಮಾರಿ 9ನೇ ಸ್ಥಾನ ಪಡೆದು ಶುಭಾರಂಭ ಮಾಡಿದ್ದರು. ಇನ್ನು ಪುರುಷರ ಆರ್ಚರಿ ರ‍್ಯಾಂಕಿಂಗ್‌ ಸುತ್ತಿನಲ್ಲಿ ಭಾರತದ ಪ್ರವೀಣ್ ಜಾಧವ್ ‌656, ಆತನು ದಾಸ್‌ 653 ಹಾಗೂ ತರುಣ್‌ದೀಪ್‌ ರೈ 652 ಅಂಕಗಳನ್ನು ಗಳಿಸುವ ಮೂಲಕ ಕ್ರಮವಾಗಿ 31, 35 ಹಾಗೂ 37ನೇ ಸ್ಥಾನ ಪಡೆದಿದ್ದಾರೆ. ಭಾರತದ ಆರ್ಚರಿಪಟುಗಳು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪದಕಗಳ ಭರವಸೆ ಮೂಡಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದ ಆರ್ಚರಿ ಪಟು ದೀಪಿಕಾ ಕುಮಾರಿ

ಮಹಿಳಾ ವಿಭಾಗದಂತೆಯೇ ಪುರುಷರ ವಿಭಾಗದಲ್ಲೂ ಕೊರಿಯಾದ ಮೂವರು ಆರ್ಚರಿ ಪಟುಗಳು ರ‍್ಯಾಂಕಿಂಗ್‌ ಸುತ್ತಿನಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಕೊರಿಯಾದ ತ್ರಿವಳಿ ಆರ್ಚರಿ ಪಟುಗಳಾದ ಜಿ ಡೊಕ್ ಕಿಮ್(688), ಜಿಹ್ಯಾಕ್ ಒಹ್(681) ಹಾಗೂ ವೂಜಿನ್ ಕಿಮ್(680) ಕ್ರಮವಾಗಿ ಒಂದು, ಮೂರು ಹಾಗೂ ನಾಲ್ಕನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನುಳಿದಂತೆ ಭಾರತ ಪುರುಷರ ಆರ್ಚರಿ ತಂಡವು 1961 ಅಂಕ ಕಲೆಹಾಕುವುದರೊಂದಿಗೆ 9ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಭಾರತ ಮಿಶ್ರ ತಂಡವು 1319 ಅಂಕಗಳೊಂದಿಗೆ 9ನೇ ಸ್ಥಾನ ಪಡೆದಿದೆ.