ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದ ಆರ್ಚರಿ ಪಟು ದೀಪಿಕಾ ಕುಮಾರಿ
* ಟೋಕಿಯೋ ಒಲಿಂಪಿಕ್ಸ್ 2020: ಆರ್ಚರಿ ಪಟು ದೀಪಿಕಾ ಕುಮಾರಿಗೆ 9ನೇ ಸ್ಥಾನ
* ಮಹಿಳಾ ವೈಯುಕ್ತಿಕ ಶ್ರೇಯಾಂಕ ವಿಭಾಗದಲ್ಲಿ 9ನೇ ಸ್ಥಾನ ಪಡೆದ ದೀಪಿಕಾ
* ಎಲಿಮಿನೇಟರ್ ಸುತ್ತಿನಲ್ಲಿ ಭೂತಾನ್‌ನ ಕರ್ಮಾ ಭೂ ಎದುರಾಳಿ
ಟೋಕಿಯೋ(ಜು.23): ಭಾರತದ ತಾರಾ ಆರ್ಚರ್ ಪಟು, ವಿಶ್ವದ ನಂ.1 ಆರ್ಚರ್ ದೀಪಿಕಾ ಕುಮಾರಿ ರ‍್ಯಾಂಕಿಂಗ್ ಸುತ್ತಿನಲ್ಲಿ 663 ಅಂಕಗಳನ್ನು ಕಲೆಹಾಕುವ ಮೂಲಕ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡುವ ಮುನ್ನ ನಡೆದ ಸ್ಪರ್ಧೆಯಲ್ಲಿ ದೀಪಿಕಾ ಉತ್ತಮ ಪ್ರದರ್ಶನ ತೋರುವ ಮೂಲಕ ಎಲಿಮಿನೇಟರ್ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ
ಸಾಕಷ್ಟು ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ದೀಪಿಕಾ ಮೊದಲ ಸುತ್ತಿನಲ್ಲಿ 56 ಅಂಕ ಗಳಿಸಿದರು. ನಂತರ ಎರಡನೇ ಸುತ್ತಿನಲ್ಲಿ 55 ಅಂಕಗಳನ್ನು ಗಳಿಸುವ ಮೂಲಕ ಟಾಪ್ 10 ಹಂತಕ್ಕೆ ಲಗ್ಗೆಯಿಟ್ಟರು. ಆದರೆ ನಾಲ್ಕನೇ ಸುತ್ತಿನಲ್ಲಿ ಕೇವಲ 51 ಅಂಕಗಳಿಸಿದ ದೀಪಿಕಾ 14ನೇ ಸ್ಥಾನಕ್ಕೆ ಜಾರಿದರು. ಆದರೆ ಐದನೇ ಸುತ್ತಿನಲ್ಲಿ 59 ಅಂಕಗಳನ್ನು ಗಳಿಸಿ ದಿಢೀರ್ ಕಮ್‌ಬ್ಯಾಕ್ ಮಾಡುವಲ್ಲಿ ದೀಪಿಕಾ ಯಶಸ್ವಿಯಾದರು.
27 ವರ್ಷದ ದೀಪಿಕಾ ದ್ವಿತಿಯಾರ್ಧದ ಮೊದಲ ಸುತ್ತಿನಲ್ಲಿ 55 ಅಂಕಗಳನ್ನು ಗಳಿಸಿ 4ನೇ ಹಂತಕ್ಕೆ ಲಗ್ಗೆಯಿಟ್ಟರು. ಆ ಬಳಿಕ ದೀಪಿಕಾ ಕ್ರಮವಾಗಿ 53, 56,58, 53 ಹಾಗೂ 54 ಅಂಕಗಳನ್ನು ಕಲೆಹಾಕುವ ಮೂಲಕ 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಏನಿದು ರ‍್ಯಾಂಕಿಂಗ್ ರೌಂಡ್: ಒಟ್ಟು 64 ಆರ್ಚರ್‌ಗಳು ಒಲಿಂಪಿಕ್ಸ್‌ನಲ್ಲಿ ಸೆಣಸಾಟ ನಡೆಸಲಿದ್ದಾರೆ. ಈ ಪೈಕಿ ಯಾರು ಯಾರ ವಿರುದ್ದ ಸೆಣಸಾಡಬೇಕು ಎನ್ನುವುದನ್ನು ನಿರ್ಧರಿಸಲು ರ‍್ಯಾಂಕಿಂಗ್ ಸುತ್ತನ್ನು ಏರ್ಪಡಿಲಾಗುತ್ತದೆ. ರ‍್ಯಾಂಕಿಂಗ್ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ ಆರ್ಚರ್, ಈ ಸುತ್ತಿನ ಕೊನೆಯ ಸ್ಥಾನ ಪಡೆದ(64) ಆರ್ಚರ್ ಪಟುವಿನೊಂದಿಗೆ ಪೈಪೋಟಿ ನಡೆಸಲಿದ್ದಾರೆ.
ಅತಿದೊಡ್ಡ ಕ್ರೀಡಾಜಾತ್ರೆ ಟೋಕಿಯೋ ಒಲಿಂಪಿಕ್ಸ್‌ಗೆ ಕ್ಷಣಗಣನೆ
ದೀಪಿಕಾ ಕುಮಾರಿ ಇದೀಗ ಎಲಿಮಿನೇಟರ್ ಸುತ್ತಿನಲ್ಲಿ ಭೂತಾನ್‌ನ ಕರ್ಮಾ ಭೂ ಅವರನ್ನು ಎದುರಿಸಲಿದ್ದಾರೆ. ಇನ್ನು ಕೊರಿಯಾದ ಆನ್ ಸಾನ್(680), ಮಿನ್ಹೆ ಜಂಗ್(677) ಹಾಗೂ ಚೇಯೊಂಗ್ ಕಾಂಗ್(675) ಅಂಕ ಗಳಿಸುವ ಮೂಲಕ ಮೊದಲ ಮೂರು ಸ್ಥಾನಗಳನ್ನು ಪಡೆದರು.