ಪುಣೆ ಆರ್ಮಿ ಸ್ಟೇಡಿಯಂಗೆ ನೀರಜ್ ಚೋಪ್ರಾ ಹೆಸರು
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ
* ಆರ್ಮಿ ಸ್ಟೇಡಿಯಂಗೆ ನೀರಜ್ ಚೋಪ್ರಾ ಹೆಸರಿಡಲು ತೀರ್ಮಾನ
* 87.58 ಮೀಟರ್ ಜಾವಲಿನ್ ಥ್ರೋ ಮಾಡಿ ಚಿನ್ನದ ಪದಕ ಗೆದ್ದ ಚೋಪ್ರಾ
ನವದೆಹಲಿ(ಆ.21): ಪುಣೆಯ ಆರ್ಮಿ ಕ್ರೀಡಾ ಸಂಸ್ಥೆಯಲ್ಲಿರುವ ಕ್ರೀಡಾಂಗಣಕ್ಕೆ ಅಥ್ಲೀಟ್ ನೀರಜ್ ಚೋಪ್ರಾ ಹೆಸರನ್ನು ನಾಮಕರಣ ಮಾಡಲು ಸಂಸ್ಥೆ ನಿರ್ಧರಿಸಿದೆ.
ಟೋಕಿಯೋ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ನೀರಜ್‌ಗೆ ಗೌರವ ಸೂಚಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾಮಕರಣ ಸಮಾರಂಭವು ಆಗಸ್ಟ್ 23ರಂದು ನಡೆಯಲಿದ್ದು, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಉಪಸ್ಥಿತರಿರಲಿದ್ದಾರೆ. ಈ ವೇಳೆ ಭಾರತೀಯ ಸೇನೆಯ 16 ಒಲಿಂಪಿಯನ್‌ಗಳನ್ನು ಸನ್ಮಾನಿಸಲಾಗುತ್ತದೆ.
ಮೊಸಾಯಿಕ್ ಕಲಾವಿದನ ಕೈಯಲ್ಲಿ ಅರಳಿತು ಚಿನ್ನದ ಹುಡುಗ ನೀರಜ್ ಜೋಪ್ರಾ ಭಾವಚಿತ್ರ!
2006ರಲ್ಲಿ ಆರ್ಮಿ ಕ್ರೀಡಾಂಗಣ ನಿರ್ಮಾಣವಾಗಿತ್ತು. ಈ ಕ್ರೀಡಾಂಗಣವು 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ಹಾಗೂ ವೀಕ್ಷಕರ ಗ್ಯಾಲರಿಯನ್ನು ಒಳಗೊಂಡಿದೆ. 23 ವರ್ಷದ ನೀರಜ್ ಚೋಪ್ರಾ ಕೂಡಾ ಸೈನ್ಯದಲ್ಲಿ ಸುಬೇದಾರ್ ಹುದ್ದೆಯನ್ನು ಹೊಂದಿದ್ದು, ಅಥ್ಲೆಟಿಕ್ಸ್ ವಿಭಾಗದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಏಕೈಕ ಸಾಧಕ ಎನಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವಲಿನ್ ಥ್ರೋ ಮಾಡುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕಗಳನ್ನು ಜಯಿಸಿತ್ತು. ಒಂದು ಚಿನ್ನ, ಎರಡು ಬೆಳ್ಳಿ ಸೇರಿದಂತೆ ಭಾರತ ಒಟ್ಟು 7 ಪದಕ ಜಯಿಸಿ ಗರಿಷ್ಠ ಪದಕಗಳ ಸಾಧನೆ ಮಾಡಿತ್ತು.