ಸ್ವಾತಂತ್ರ್ಯ ದಿನಕ್ಕೆ ವಿಶೇಷ ಅತಿಥಿಗಳಾಗಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಆಹ್ವಾನ
* ಸ್ವಾತಂತ್ರ್ಯ ದಿನಾಚರಣೆಗೆ ಅತಿಥಿಗಳಾಗಿ ಪಾಲ್ಗೊಳ್ಳಲು ಒಲಿಂಪಿಕ್ಸ್ ಅಥ್ಲೀಟ್‌ಗಳಿಗೆ ಪ್ರಧಾನಿ ಮೋದಿ ಆಹ್ವಾನ
* ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಣ ಮಾಡಲಿರುವ ಪ್ರಧಾನಿ ಮೋದಿ
* ಕ್ರೀಡಾಪಟುಗಳು ಸೇರಿ 228 ಮಂದಿ ಭಾರತದಿಂದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗಿ
ನವದೆಹಲಿ(ಆ.03): ಜಾಗತಿಕ ಕ್ರೀಡಾಜಾತ್ರೆ ಎನಿಸಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳಿಗೆ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣವಾಗುವ ಸಂದರ್ಭದಲ್ಲಿ ಅತಿಥಿಗಳಾಗಿ ಹಾಜರಿರುವಂತೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳನ್ನು ತಮ್ಮ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಹಾಗೂ ಬೆಲ್ಜಿಯಂ ನಡುವಿನ ಹಾಕಿ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸುತ್ತಿರುವುದಾಗಿ ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಇನ್ನು ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ಎದುರು 5-2 ಅಂತರದಲ್ಲಿ ಆಘಾತಕಾರಿ ಸೋಲು ಕಂಡ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಮೋದಿ, ಭಾರತದ ಆಟಗಾರರ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದರು.
ಇನ್ನು ಭಾರತ ಹಾಕಿ ತಂಡವು ಆಗಸ್ಟ್ 05ರಿಂದ ಆರಂಭವಾಗಲಿರುವ ಕಂಚಿನ ಪದಕಕ್ಕಾಗಿನ ಕಾದಾಟದಲ್ಲಿ ಆಸ್ಟ್ರೇಲಿಯಾ ಅಥವಾ ಜರ್ಮನಿ ಎದುರು ಕಾದಾಟ ನಡೆಸಲಿದೆ.
ಸೋಲು-ಗೆಲುವು ಜೀವನದ ಎರಡು ಭಾಗಗಳು: ಹಾಕಿ ತಂಡವನ್ನು ಹುರಿದುಂಬಿಸಿದ ಪ್ರಧಾನಿ ಮೋದಿ
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 118 ಸ್ಪರ್ಧಿಗಳು ಸೇರಿದಂತೆ ಒಟ್ಟು 228 ಮಂದಿ ಪಾಲ್ಗೊಂಡಿದ್ದು, ಒಟ್ಟು 18 ವಿವಿಧ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ ಭಾರತಕ್ಕೆ ವೇಟ್‌ಲಿಫ್ಟರ್ ಮೀರಾಬಾಯಿ ಚಾನು(ಬೆಳ್ಳಿ) ಹಾಗೂ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು(ಕಂಚು) ಪದಕ ಗೆದ್ದಿದ್ದರೆ, ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದಾರೆ.