ಟೋಕಿಯೋ ಒಲಿಂಪಿಕ್ಸ್ ಹೀರೋಗಳ ಜತೆ ಮನಬಿಚ್ಚಿ ಮಾತನಾಡಿದ ಪ್ರಧಾನಿ ಮೋದಿ
* ಟೋಕಿಯೋ ಒಲಿಂಪಿಕ್ಸ್ ತಾರೆಯರ ಜತೆ ಮುಕ್ತ ಮಾತುಕತೆ ನಡೆಸಿದ ಪ್ರಧಾನಿ ಮೋದಿ
* ಪದಕ ಗೆದ್ದವರಿಗೆ ಶಹಬ್ಬಾಶ್, ಸೋತವರನ್ನು ಹುರಿದುಂಬಿಸಿದ ಪ್ರಧಾನಿ
* ಎಲ್ಲಾ ಕ್ರೀಡಾಪಟುಗಳ ಜತೆ ತೆರಳಿ ಆಪ್ತ ಸಮಾಲೋಚನೆ ನಡೆಸಿದ ಪ್ರಧಾನಿ
ನವದೆಹಲಿ(ಆ.18): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಈ ಬಾರಿ 7 ಪದಕ ಗೆಲ್ಲುವ ಮೂಲಕ ಗರಿಷ್ಠ ಪದಕಗಳ ಸಾಧನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳ ಜತೆ ಮುಕ್ತ ಮಾತುಕತೆ ನಡೆಸಿ ಗಮನ ಸೆಳೆದಿದ್ದಾರೆ.
ನೀರಜ್ ಚೋಪ್ರಾ, ಪಿ.ವಿ. ಸಿಂಧು, ಲೊವ್ಲೀನಾ ಬೊರ್ಗೊಹೈನ್ ಹಾಗೂ ಭಾರತೀಯ ಪುರುಷರ ಹಾಕಿ ತಂಡವು ತಮ್ಮ ಆಟೋಗ್ರಾಫ್‌ನೊಂದಿಗೆ ಜಾವಲಿನ್, ಶಟಲ್ ರಾಕೆಟ್, ಬಾಕ್ಸಿಂಗ್ ಗ್ಲೌಸ್, ಹಾಕಿ ಸ್ಟಿಕ್ ಅನ್ನು ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು. ಈ ಎಲ್ಲಾ ಕ್ರೀಡಾಪರಿಕರಗಳನ್ನು ಹರಾಜು ಹಾಕಿ ಬಂದ ಹಣವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವುದಾಗಿ ಮೋದಿ ತಿಳಿಸಿದ್ದಾರೆ.
ಮೊದಲಿಗೆ ಪ್ರಧಾನಿ ಮೋದಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಜತೆ ಮಾತುಕತೆ ನಡೆಸಿದರು. ಬಳಿಕ ಮೋದಿ ನೀರಜ್ ಹಾಗೂ ಸಹಪಾಠಿಗಳಿಗೆ ಚುರ್ಮಾ ತಿನ್ನಿಸಿದರು. ಬಳಿಕ ಕುಸ್ತಿಯಲ್ಲಿ ಬೆಳ್ಳಿ ಪದಕ ಜಯಿಸಿದ ಪೈಲ್ವಾನ್ ರವಿಕುಮಾರ್ ದಹಿಯಾ ಜತೆ ಮಾತುಕತೆ ನಡೆಸಿದರು. ಹರ್ಯಾಣದ ಮಂದಿ ಯಾವಾಗಲೂ ಖುಷಿಯಿಂದ ಇರುತ್ತಾರೆ ಎಂದು ಹೇಳಿದರು. ಬಳಿಕ ಕಂಚಿನ ಪದಕ ಗೆದ್ದ ಕುಸ್ತಿ ಪಟು ಭಜರಂಗ್ ಪೂನಿಯಾ ಜತೆಯೂ ಮಾತುಕತೆ ನಡೆಸಿದರು. ಮುಂಬರುವ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದಾಗಿ ಭಜರಂಗ್ ಪೂನಿಯಾ ಹಾಗೂ ದೀಪಕ್ ಪೂನಿಯಾ ತಿಳಿಸಿದ್ದಾರೆ. ಈ ವಿಚಾರದಲ್ಲಿ ನನಗೆ ಯಾವ ಅನುಮಾನವೂ ಇಲ್ಲ ಎಂದಿದ್ದಾರೆ. ಇನ್ನು ಪದಕ ಗೆಲ್ಲದ ವಿನೇಶ್ ಪೋಗಾಟ್ ಅವರನ್ನು ಹುರಿದುಂಬಿಸಿದರು.
Tokyo 2020: ಒಲಿಂಪಿಕ್ಸ್ ಸಾಧಕರನ್ನು ಮನೆಗೆ ಕರೆಸಿ ಐಸ್ ಕ್ರೀಂ ಪೇ ಚರ್ಚಾ ಮಾಡಿದ ಪ್ರಧಾನಿ ಮೋದಿ..!
ಬಳಿಕ ಹಾಕಿ ತಂಡದತ್ತ ತೆರಳಿದ ಪ್ರಧಾನಿ ಮೋದಿ ಕೋಚ್ ಹಾಗೂ ಗೋಲ್ ಕೀಪರ್ ಪಿ ಆರ್. ಶ್ರೀಜೇಶ್ ಜತೆ ಆಪ್ತವಾಗಿ ಮಾತುಕತೆ ನಡೆಸಿದರು. ಒಲಿಂಪಿಕ್ಸ್‌ನಲ್ಲಿ ಭಾರತ ಎಷ್ಟೇ ಪದಕ ಜಯಿಸಿದರೂ, ಹಾಕಿಯಲ್ಲಿ ಪದಕ ಜಯಿಸಿಲ್ಲ ಎಂದರೇ ನಾವು ಪದಕ ಗೆದ್ದೆವು ಎನ್ನುವ ಅನುಭವವೇ ಆಗುವುದಿಲ್ಲ. ಪುರುಷ ಹಾಗೂ ಮಹಿಳಾ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದೆ ಎಂದು ಮೋದಿ ಶಹಬ್ಬಾಶ್ ಹೇಳಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ಮೇಜರ್ ಧ್ಯಾನ್ ಚಂದ್ ಅವರಿಗೆ ಒಳ್ಳೆಯ ಶ್ರದ್ದಾಂಜಲಿ ಸಲ್ಲಿಸಿದ್ದೀರ. ನಿಮ್ಮೆಲ್ಲರಿಂದ ಪ್ರೇರಣೆಗೊಂಡು ನಾವು ಖೇಲ್ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರಿಟ್ಟಿರುವುದಾಗಿ ಮೋದಿ ತಿಳಿಸಿದ್ದಾರೆ.
ಬಾಕ್ಸರ್ ಲೊವ್ಲೀನಾ ಬೊರ್ಗೊಹೈನ್ ಮೋದಿ ತಮಾಷೆಯಾಗಿ ಮನೆಯಲ್ಲಿ ಜಗಳವಾಡಿದಾಗಲೂ ನಿಮ್ಮ ಸಹೋದರಿಯರ ಜತೆ ಪಂಚ್ ಮಾಡುತ್ತೀರಾ ಎಂದು ಹಾಸ್ಯ ಮಾಡಿದ್ದಾರೆ. ಇನ್ನು ಪದಕ ಗೆಲ್ಲದ ಬಾಕ್ಸರ್ ಮೇರಿ ಕೋಮ್, ಫೆನ್ಸರ್ ಭವಾನಿ ದೇವಿ ಜತೆ ಹುರಿದುಂಬಿಸಿದ್ದಾರೆ. ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಜತೆ ಕೂಡಾ ಮೋದಿ ಖಾಸ್ ಬಾತ್ ನಡೆಸಿದರು.
ಸಿಂಧುವಿಗೆ ಐಸ್ ಕ್ರೀಮ್ ಪ್ರಾಮೀಸ್ ಪೂರೈಸಿದ ಮೋದಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧುವಿಗೆ ಕೊಟ್ಟ ಮಾತಿನಂತೆ ಐಸ್ ಕ್ರೀಮ್ ತಿನ್ನಿಸಿದರು. ಸಿಂಧು ಕೋಚ್‌ಗೆ ಅಯೋಧ್ಯಾಗೆ ಭೇಟಿ ನೀಡುವಂತೆ ತಿಳಿಸಿದರು. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿಯವರ ಸಂಪೂರ್ಣ ಮಾತುಕತೆ ಇಲ್ಲಿದೆ ನೋಡಿ.