Tokyo 2020: ಒಲಿಂಪಿಕ್ಸ್ ಸಾಧಕರನ್ನು ಮನೆಗೆ ಕರೆಸಿ ಐಸ್ ಕ್ರೀಂ ಪೇ ಚರ್ಚಾ ಮಾಡಿದ ಪ್ರಧಾನಿ ಮೋದಿ..!
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 7 ಪದಕಗಳನ್ನು ಗೆಲ್ಲುವ ಮೂಲಕ ಸ್ಮರಣೀಯವಾಗಿ ತನ್ನ ಅಭಿಯಾನವನ್ನು ಮುಗಿಸಿದೆ. ಇದೀಗ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧಕರನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸಕ್ಕೆ ಆಹ್ವಾನಿಸಿ ಚಹ ಕುಡಿಸಿ ಕುಶಲೋಪರಿ ವಿಚಾರಿಸಿದ್ದಾರೆ. ಈ ಹಿಂದೆ ಪಿ.ವಿ. ಸಿಂಧು ಅವರಿಗೆ ನೀಡಿದ್ದ ಮಾತಿನಂತೆ ಬ್ಯಾಡ್ಮಿಂಟನ್ ತಾರೆ ಜತೆ ಐಸ್ ಕ್ರೀಂ ಕೂಡಾ ಸವಿದಿದ್ದಾರೆ. ಈ ಮೊದಲು 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಸವಿನಯವಾಗಿ ಆಮಂತ್ರಿಸಿದ್ದರು. ಇದಷ್ಟೇ ಅಲ್ಲದೇ ಕೆಂಪು ಕೋಟೆಯಿಂದ ಭಾಷಣ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಕ್ರೀಡಾಪಟು ಒಲಿಂಪಿಕ್ಸ್‌ನಲ್ಲಿ ತೋರಿದ ಪ್ರದರ್ಶನವನ್ನು ಶ್ಲಾಘಿಸಿದ್ದಷ್ಟೇ ಅಲ್ಲದೇ ಮುಂಬರುವ ಯುವ ಪ್ರತಿಭೆಗಳಿಗೆ ನೀವೆಲ್ಲಾ ಸ್ಪೂರ್ತಿಯಾಗಿದ್ದೀರಿ ಎಂದು ಗುಣಗಾನ ಮಾಡಿದ್ದರು.
ಭಾರತೀಯ ಪುರುಷರ ಹಾಕಿ ತಂಡವು ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿದೆ. ಇದೀಗ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ತಮ್ಮ ಹಸ್ತಾಕ್ಷರಗಳನ್ನೊಳಗೊಂಡ ಹಾಕಿ ಸ್ಟಿಕ್ ಅನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ ಸುಂದರ ಕ್ಷಣ
ಶತಮಾನಗಳ ಬಳಿಕ ಅಥ್ಲೆಟಿಕ್ಸ್ ವಿಭಾಗದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ ಜತೆ ಪ್ರಧಾನಿ ನರೇಂದ್ರ ಮೋದಿ ಚುರ್ಮಾ ಸವಿಯುತ್ತ ಮಾತುಕತೆ ನಡೆಸಿದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಪರ ಚಿನ್ನದ ಪದಕ ಗೆದ್ದ ಏಕೈಕ ಅಥ್ಲೀಟ್ ನೀರಜ್ ಚೋಪ್ರಾ.
ಹಾಕಿ ನಾಯಕನೊಂದಿಗೆ ಪ್ರಧಾನಿ ಖಾಸ್ ಬಾತ್: ದಶಕಗಳ ಕಾಲ ಒಲಿಂಪಿಕ್ಸ್‌ನಲ್ಲಿ ಹಾಕಿ ಸಾಮ್ರಾಟನಾಗಿ ಮೆರೆದಾಡಿದ್ದ ಭಾರತ, ಆ ನಂತರ ಕೊಂಚ ಮಂಕಾಗಿತ್ತು. ಇದೀಗ ಬರೋಬ್ಬರಿ 41 ವರ್ಷಗಳ ಬಳಿಕ ಮನ್‌ಪ್ರೀತ್ ಸಿಂಗ್ ನೇತೃತ್ವದ ಹಾಕಿ ತಂಡ ಪದಕ ಗೆದ್ದು ಸಂಭ್ರಮಿಸಿತು. ಇದೀಗ ಮನ್‌ಪ್ರೀತ್ ಸಿಂಗ್ ಜತೆ ಮೋದಿ ಆಪ್ತ ಮಾತುಕತೆ ನಡೆಸುತ್ತಿರುವ ಕ್ಷಣ
ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕ ಗೆದ್ದ ದೇಶದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ತಮ್ಮ ಎರಡು ಪದಕಗಳೊಂದಿಗೆ ಮೋದಿ ಜತೆ ಪೋಸ್ ಕೊಟ್ಟಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಿಂಧು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಭರವಸೆ ಈಡೇರಿಸಿದ ಪ್ರಧಾನಿ ಮೋದಿ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ, ಟೋಕಿಯೋದಲ್ಲಿ ಪದಕ ಗೆದ್ದು ಬನ್ನಿ ಒಟ್ಟಿಗೆ ಐಸ್ ಕ್ರೀಮ್ ಸವಿಯೋಣ ಎಂದಿದ್ದರು. ಅದರಂತೆ ಇದೀಗ ಮೋದಿ ತಮ್ಮ ನಿವಾಸದಲ್ಲಿ ಸಿಂಧುವಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ ಕ್ಷಣ. ಈ ಚಿತ್ರ ಸಾಕಷ್ಟು ವೈರಲ್ ಆಗಿದೆ.
ಪೈಲ್ವಾನ್‌ಗಳ ಜತೆ ಪ್ರಧಾನಿ ಮೋದಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತೀಯ ಕುಸ್ತಿಪಟುಗಳ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸುತ್ತಿರುವ ಕ್ಷಣ. ಭಾರತದ ಕುಸ್ತಿಪಟುಗಳಾದ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಜಯಿಸಿದರೆ, ಭಜರಂಗ್ ಪೂನಿಯಾ ಕಂಚಿನ ಪದಕ ಗೆದ್ದು ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದರು.