ಟೋಕಿಯೋ 2020: ಆಸೀಸ್ ಎದುರು ಭಾರತದ ಗೆಲುವಿನ ನಿಜವಾದ ರೂವಾರಿ ಸವಿತಾ ಪೂನಿಯಾ
* ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ ದಾಖಲೆ ಬರೆದ ಭಾರತೀಯ ಮಹಿಳಾ ಹಾಕಿ ತಂಡ
* ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಿದ ರಾಣಿ ರಾಂಪಾಲ್ ಪಡೆ
* 9 ಗೋಲು ತಡೆ ಹಿಡಿದು ಭಾರತಕ್ಕೆ ಗೆಲುವು ದಕ್ಕಿಸಿಕೊಟ್ಟ ಸವಿತಾ ಪೂನಿಯಾ
ಟೋಕಿಯೋ(ಆ.02): ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಮೂರಿ ಬಾರಿಯ ಒಲಿಂಪಿಕ್ಸ್ ಚಾಂಪಿಯನ್ಸ್ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತೀಯ ಮಹಿಳಾ ಹಾಕಿ ತಂಡವು ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಬಲ್ಲ ನೆಚ್ಚಿನ ತಂಡವೆಂದು ಗುರುತಿಸಿಕೊಂಡಿದ್ದ ಆಸ್ಟ್ರೇಲಿಯಾ ಎದುರು ರಾಣಿ ರಾಂಪಾಲ್ ಪಡೆ 1-0 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಇಡೀ ದೇಶವೇ ಕುಣಿದು ಕುಪ್ಪಳಿಸುವಂತೆ ಮಾಡಿದರು. ಆಸ್ಟ್ರೇಲಿಯಾ ಗೋಲು ಬಾರಿಸಲು ಎಷ್ಟೇ ಪ್ರಯತ್ನಿಸಿದರೂ ಭಾರತದ ಡಿಫೆನ್ಸ್ ಮುಂದೆ ಕಾಂಗರೂಗಳ ಆಟ ನಡೆಯಲಿಲ್ಲ.
ಟೋಕಿಯೋ ಒಲಿಂಪಿಕ್ಸ್: ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಹಾಕಿ ತಂಡ
ಗ್ರೂಪ್ ಹಂತದ ಮೊದಲ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಭಾರತ ಮಹಿಳಾ ಹಾಕಿ ತಂಡವು ಆ ಬಳಿಕ ಎರಡು ಪಂದ್ಯಗಳನ್ನು ಗೆದ್ದು ನಾಕೌಟ್ ಹಂತಕ್ಕೇರಿತ್ತು. ಆಸ್ಟ್ರೇಲಿಯಾ ಎದುರು ಗುರ್ಜಿತ್ ಕೌರ್ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರಾದರೂ, ಗೆಲುವಿನ ಸಂಪೂರ್ಣ ಶ್ರೇಯ ಸೇರಬೇಕಾಗಿದ್ದು ಗೋಲ್ ಕೀಪರ್ ಸವಿತಾ ಪೂನಿಯಾ ಅವರಿಗೆ. ಹೌದು, ಸವಿತಾ ಪೂನಿಯಾ ಆಸ್ಟ್ರೇಲಿಯಾದ ಎದುರು ಅಕ್ಷರಶಃ ಅಭೇಧ್ಯ ಗೋಡೆಯಾಗಿ ನಿಲ್ಲುವ ಮೂಲಕ ಭಾರತ ಮೇಲುಗೈ ಸಾಧಿಸಲು ನೆರವಾದರು. ಆಸ್ಟ್ರೇಲಿಯಾ ಆಟಗಾರ್ತಿಯರು 9 ಬಾರಿ ಗೋಲು ಬಾರಿಸುವ ಅವಕಾಶವನ್ನು ಸವಿತಾ ಪೂನಿಯಾ ವಿಫಲಗೊಳಿಸುವಲ್ಲಿ ಯಶಸ್ವಿಯಾದರು. ಸವಿತಾ ಪೂನಿಯಾ ಗೋಡೆಯಂತೆ ನಿಂತ ಪರಿಣಾಮ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾ ಮಹಿಳಾ ಹಾಕಿ ತಂಡಕ್ಕೆ ಕನಿಷ್ಠ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಸವಿತಾ ಪೂನಿಯಾ ಆಕರ್ಷಕ ಪ್ರದರ್ಶನಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಜೈ ಹೋ ಎಂದಿದ್ದಾರೆ.