Asianet Suvarna News Asianet Suvarna News

ಟೋಕಿಯೋ ಒಲಿಂಪಿಕ್ಸ್‌: ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಭಾರತ ಮಹಿಳಾ ಹಾಕಿ ತಂಡ

* ದೈತ್ಯ ಸಂಹಾರ ಮಾಡಿದ ರಾಣಿ ರಾಂಪಾಲ್ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡ

* ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ ವನಿತೆಯರ ಹಾಕಿ ತಂಡ

* ಬಲಿಷ್ಠ ಆಸ್ಟ್ರೇಲಿಯಾ ಎದುರು 1-0 ಅಂತರದಲ್ಲಿ ಭರ್ಜರಿ ಜಯ

Tokyo Olympics Indian Womens Hockey Team Create History Rani Team Beat Australia and Qualify for Semi Final kvn
Author
Tokyo, First Published Aug 2, 2021, 10:18 AM IST

ಟೋಕಿಯೋ(ಆ.02): ಗುರ್ಜಿತ್ ಕೌರ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಟೋಕಿಯೋ ಒಲಿಂಪಿಕ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತೀಯ ಮಹಿಳಾ ಹಾಕಿ ತಂಡವು ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ರಾಣಿ ರಾಂಪಾಲ್‌ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ.

ಮೊದಲ ಕ್ವಾರ್ಟರ್‌ನಲ್ಲಿ ಎರಡು ತಂಡಗಳು ಗೋಲು ಬಾರಿಸಲು ಸಾಕಷ್ಟು ಪ್ರಯತ್ನಿಸಿದವಾದರೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಕ್ವಾರ್ಟರ್‌ನ 22ನೇ ನಿಮಿಷದಲ್ಲಿ ಗುರ್ಜಿತ್ ಕೌರ್ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಇದರೊಂದಿಗೆ ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 1-0 ಮುನ್ನಡೆ ಕಾಯ್ದುಕೊಂಡಿತು.

ದ್ವಿತಿಯಾರ್ಧದಲ್ಲಿ ಆಸ್ಟ್ರೇಲಿಯಾಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿಕೊಳ್ಳಲು ಯಶಸ್ವಿಯಾಗಲಿಲ್ಲ. 2016ರ ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾ ತಂಡದ ಅಭಿಯಾನ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲೇ ಅಂತ್ಯವಾಗಿದೆ. 

ಸೆಮಿಫೈನಲ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಅರ್ಜಿಂಟೀನಾ ತಂಡವನ್ನು ಎದುರಿಸಲಿದೆ. ಈಗಾಗಲೇ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಪುರುಷರ ಹಾಕಿ ತಂಡವು ಸೆಮಿಫೈನಲ್‌ ಪ್ರವೇಶಿಸಿದ್ದು, ಭಾರತದ ಗತಕಾಲದ ಹಾಕಿ ವೈಭವ ಮತ್ತೊಮ್ಮೆ ಮರುಕಳಿಸುವ ಕ್ಷಣಗಳು ಸನ್ನಿಹಿತವಾಗಲಾರಂಭಿಸಿದೆ.
 

Follow Us:
Download App:
  • android
  • ios