ಶಾಟ್‌ಪುಟ್ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ತಜೀಂದರ್ ಸಿಂಗ್ ತೂರ್
* ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡ ಶಾಟ್‌ಪುಟ್ ಪಟು ತಜೀಂದರ್
* ರಾಷ್ಟ್ರೀಯ ದಾಖಲೆಯೊಂದಿಗೆ ಒಲಿಂಪಿಕ್ಸ್ ಟಿಕೆಟ್ ಪಕ್ಕಾ ಮಾಡಿಕೊಂಡ ತಜೀಂದರ್ ಪಾಲ್ ಸಿಂಗ್ ತೂರ್
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಆಸೆ ಮೂಡಿಸಿದ ಪಂಜಾಬ್ ಮೂಲದ ಅಥ್ಲೀಟ್
ಪಟಿಯಾಲಾ(ಜೂ.22): ಶಾಟ್‌ಪುಟ್ ಪಟು ತಜೀಂದರ್ ಸಿಂಗ್ ತೂರ್, ಇಲ್ಲಿ ನಡೆಯುತ್ತಿರುವ ಇಂಡಿಯನ್ ಗ್ರ್ಯಾನ್ ಪ್ರೀ 4 ಕ್ರೀಡಾಕೂಟದ ಮೊದಲ ದಿನ ದಾಖಲೆಯ ಎಸೆತದೊಂದಿಗೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ತಜೀಂದರ್ 21.49 ಮೀ. ದೂರಕ್ಕೆ ಗುಂಡನ್ನು ಎಸೆದರು. ಒಲಿಂಪಿಕ್ಸ್ ಅರ್ಹತೆಗೆ 21.10 ಮೀ. ನಿಗದಿಪಡಿಸಲಾಗಿತ್ತು.
ತಜೀಂದರ್ ತಮ್ಮ ಹೆಸರಿನಲ್ಲೇ ಇದ್ದ ರಾಷ್ಟ್ರೀಯ ದಾಖಲೆ (20.92 ಮೀ.)ಯನ್ನು ಸಹ ಉತ್ತಮಗೊಳಿಸಿಕೊಂಡರು. ಮೊದಲ ಬಾರಿಗೆ ನಾನು ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ರಾಷ್ಟ್ರೀಯ ದಾಖಲೆ ಜತೆ ಜತೆಗೆ ಏಷ್ಯನ್ ದಾಖಲೆ ನಿರ್ಮಿಸಿರುವುದು ಮತ್ತಷ್ಟು ಖುಷಿ ಕೊಟ್ಟಿದೆ ಎಂದು ತಜೀಂದರ್ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ಭಾರತ ಪ್ರತಿನಿಧಿಸಲಿರುವ ಏಕೈಕ ವೇಟ್ ಲಿಫ್ಟರ್ ಮೀರಬಾಯಿ ಚಾನು..!
ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸುವ ಕುರಿತಂತೆ ನನಗೆ ಆತ್ಮವಿಶ್ವಾಸವಿತ್ತು. ಮುಂಬರುವ ಒಲಿಂಪಿಕ್ಸ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿರುವುದಾಗಿ ತಜೀಂದರ್ ತಿಳಿಸಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕ್ರಮವಾಗಿ 21.23 ಮೀಟರ್ ಹಾಗೂ 21.36 ಮೀಟರ್ ದೂರ ಎಸೆದ ಶಾಟ್‌ಪುಟ್ ಪಟುಗಳು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಹೀಗಾಗಿ ಈ ಬಾರಿ ತಜೀಂದರ್ ಸಿಂಗ್ ತೂರ್ ಕೂಡಾ ಒಲಿಂಪಿಕ್ಸ್ ಕೂಟದಲ್ಲಿ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.
ಇದೇ ವೇಳೆ ಮಹಿಳೆಯರ 100 ಮೀ. ಓಟದಲ್ಲಿ ದ್ಯುತಿ ಚಾಂದ್ 11.17 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಜೊತೆಗೆ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಆದರೆ ಒಲಿಂಪಿಕ್ಸ್ ಅರ್ಹತೆಗೆ 0.02 (11.15 ಸೆಕೆಂಡ್) ಬೇಕಿದ್ದ ಸಮಯದೊಳಗೆ ಗುರಿ ತಲುಪಲು ಚಾಂದ್‌ಗೆ ಸಾಧ್ಯವಾಗಲಿಲ್ಲ.