ಟೋಕಿಯೋದಲ್ಲಿ ಅಭ್ಯಾಸ ಆರಂಭಿಸಿದ ಭಾರತೀಯರು
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭ
* ಜುಲೈ 23ರಿಂದ ಟೋಕಿಯೋ ಒಲಿಂಪಿಕ್ಸ್ ಆರಂಭ
* ಕ್ರೀಡಾಗ್ರಾಮದಲ್ಲಿ ಅಭ್ಯಾಸ ಆರಂಭಿಸಿದ ಭಾರತೀಯ ಕ್ರೀಡಾಪಟುಗಳು
ಟೋಕಿಯೋ(ಜು.20): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಕೇವಲ 3 ದಿನ ಬಾಕಿ ಇದ್ದು, ಮಂಗಳವಾರ ಭಾರತೀಯ ಕ್ರೀಡಾಪಟುಗಳು ಅಭ್ಯಾಸ ಆರಂಭಿಸಿದರು.
ಆರ್ಚರಿ ಪಟುಗಳಾದ ದೀಪಿಕಾ ಕುಮಾರಿ, ಅತನು ದಾಸ್, ಶಟ್ಲರ್‌ಗಳಾದ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್, ಡಬಲ್ಸ್ ಆಟಗಾರರಾದ ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್, ಟೇಬಲ್ ಟೆನಿಸ್ ಆಟಗಾರರಾದ ಶರತ್ ಕಮಲ್, ಜಿ.ಸತ್ಯನ್, ಜಿಮ್ನಾಸ್ಟಿಕ್ಸ್ ಪಟು ಪ್ರಣತಿ ನಾಯಕ್, ಪುರುಷ ಹಾಗೂ ಮಹಿಳಾ ಹಾಕಿ ತಂಡಗಳು, ಶೂಟರ್‌ಗಳು ಅಭ್ಯಾಸ ನಡೆಸಿದರು. ಒಲಿಂಪಿಕ್ಸ್ ಕ್ರೀಡಾ ಗ್ರಾಮ ತಲುಪಿದ ಮರು ದಿನವೇ ಭಾರತೀಯ ಕ್ರೀಡಾಪಟುಗಳಿಗೆ ಅಭ್ಯಾಸ ಆರಂಭಿಸಲು ಅವಕಾಶ ನೀಡಲಾಗಿದೆ. ಈ ಮೊದಲು ಸೂಚಿಸಿದ್ದ 3 ದಿನಗಳ ಕ್ವಾರಂಟೈನ್ ನಿಯಮವನ್ನು ಆಯೋಜಕರು ಸಡಿಲಗೊಳಿಸಿದರು.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಭಾರತೀಯರ ಝಲಕ್
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದ್ದು, ಭಾರತದಿಂದ ಈ ಬಾರಿ 127 ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತೀಯ ಅಥ್ಲೀಟ್‌ಗಳು ಈ ಬಾರಿ 18 ವಿವಿಧ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಶೂಟಿಂಗ್, ಬಾಕ್ಸಿಂಗ್, ಕುಸ್ತಿ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಭಾರತದ ಅಥ್ಲೀಟ್‌ಗಳಿಂದ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗಿದೆ.