ಚೀನಾ, ರಷ್ಯಾ, ಅಮೆರಿಕ ಸೇರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಹೆಣ್ಮಕ್ಳೇ ಜಾಸ್ತಿ ಗುರೂ..!
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರದ್ದೇ ಪ್ರಾಬಲ್ಯ
* ರಷ್ಯಾ, ಚೀನಾ ಅಮೆರಿಕ ಸೇರಿ ಪ್ರಮುಖ ರಾಷ್ಟ್ರಗಳಿಂದ ಮಹಿಳಾ ಅಥ್ಲೀಟ್‌ಗಳು ಹೆಚ್ಚು ಬಾಗಿ
* ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಈ ಬಾರಿ ಪುರುಷ ಹಾಗೂ ಮಹಿಳಾ ಅಥ್ಲೀಟ್‌ಗಳು ಧ್ವಜಧಾರಿಗಳು
ನವದೆಹಲಿ(ಜು.19): ಲಿಂಗ ಸಮಾನತೆಯನ್ನು ಎತ್ತಿಹಿಡಿಯುವುದೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಧ್ಯೇಯವಾಗಿದೆ. ಹೀಗಾಗಿ 5 ಪ್ರಮುಖ ರಾಷ್ಟ್ರಗಳು ತಮ್ಮ ದೇಶದ ಪುರುಷ ಅಥ್ಲೀಟ್‌ಗಳಿಗಿಂತ ಮಹಿಳಾ ಅಥ್ಲೀಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕಳಿಸಿಕೊಟ್ಟಿದೆ.
ಹೌದು, ಗ್ರೇಟ್ ಬ್ರಿಟನ್, ಅಮೆರಿಕ, ಚೀನಾ, ಅಸ್ಟ್ರೇಲಿಯಾ, ಕೆನಡಾ ರಾಷ್ಟ್ರಗಳು ಪುರುಷ ಅಥ್ಲೀಟ್‌ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಥ್ಲೀಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಕಳಿಸಿಕೊಟ್ಟಿದೆ. ಇನ್ನು ರಷ್ಯಾ ದೇಶವು ಈ ಬಾರಿ ರಷ್ಯನ್ ಒಲಿಂಪಿಕ್ ಕಮಿಟಿ ಹೆಸರಿನಲ್ಲಿ ಈ ಬಾರಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದು, ಈ ದೇಶ ಕೂಡಾ ಪುರುಷರಿಗಿಂತ ಹೆಚ್ಚು ಮಹಿಳಾ ಅಥ್ಲೀಟ್‌ಗಳನ್ನು ಟೋಕಿಯೋ ಒಲಿಂಪಿಕ್ಸ್‌ಗೆ ಕಳಿಸಿಕೊಟ್ಟಿದೆ. 2019ರಲ್ಲಿ ವಾಡಾ(WADA-World Anti Doping Agency)ದಿಂದ ರಷ್ಯಾ ದೇಶವು 4 ವರ್ಷಗಳ ಕಾಲ ಎಲ್ಲಾ ಅಂತಾರಾಷ್ಟ್ರೀಯ ಕ್ರೀಡೆಗಳಿಂದ ನಿಷೇಧಕ್ಕೆ ಗುರಿಯಾಗಿದೆ. ಹೀಗಾಗಿ ರಷ್ಯಾವು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ROC ಹೆಸರಿನಲ್ಲಿ ಕಣಕ್ಕಿಳಿಯಲಿದೆ.
ಅಮೆರಿಕ, ಚೀನಾ, ಗ್ರೇಟ್ ಬ್ರಿಟನ್ ಹಾಗೂ ರಷ್ಯಾ ದೇಶಗಳು ಒಲಿಂಪಿಕ್ಸ್ ಇತಿಹಾಸದಲ್ಲಿ ಪ್ರಾಬಲ್ಯ ಮೆರೆದಿವೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈ ಎಲ್ಲಾ ದೇಶಗಳು ಪುರುಷ ಅಥ್ಲೀಟ್‌ಗಳಿಗಿಂತ ಹೆಚ್ಚು ಮಹಿಳಾ ಅಥ್ಲೀಟ್‌ಗಳನ್ನು ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆಗೆ ಕಳಿಸಿಕೊಟ್ಟಿದೆ. ಲಿಂಗ ಸಮಾನತೆ ಸಾರುವ ಉದ್ದೇಶದಿಂದ ಈ ಬಾರಿ ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಓರ್ವ ಪುರುಷ ಹಾಗೂ ಓರ್ವ ಮಹಿಳಾ ಅಥ್ಲೀಟ್ ತಮ್ಮ ದೇಶ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
#Olympics2021: ಟೋಕಿಯೋ ತಲುಪಿದ ಭಾರತದ 88 ಕ್ರೀಡಾಪಟುಗಳು ತಂಡ!
ಚೀನಾ ಒಟ್ಟು 431 ಅಥ್ಲೀಟ್‌ಗಳನ್ನು ಈ ಬಾರಿಯ ಒಲಿಂಪಿಕ್ಸ್‌ಗೆ ಕಳಿಸಿಕೊಟ್ಟಿದ್ದು, ಈ ಪೈಕಿ 298 ಮಹಿಳಾ ಅಥ್ಲೀಟ್‌ಗಳಾದರೆ 133 ಪುರುಷ ಅಥ್ಲೀಟ್‌ಗಳಾಗಿದ್ದಾರೆ. ಅಂದರೆ ಸರಿಸುಮಾರು ಪುರುಷ ಅಥ್ಲೀಟ್‌ಗಳ ಎರಡರಷ್ಟು ಹೆಚ್ಚಿನ ಸಂಖ್ಯೆಯ ಮಹಿಳಾ ಅಥ್ಲೀಟ್‌ಗಳು ಚೀನಾ ದೇಶವನ್ನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸುತ್ತಿದ್ದಾರೆ. ಇನ್ನು ಅಮೆರಿಕ ಒಟ್ಟು 613 ಅಥ್ಲೀಟ್‌ಗಳನ್ನು ಕಳಿಸಿಕೊಟ್ಟಿದ್ದು, ಈ ಪೈಕಿ 329 ಮಹಿಳಾ ಹಾಗೂ 284 ಪುರುಷ ಅಥ್ಲೀಟ್‌ಗಳಾಗಿದ್ದಾರೆ.
ಗ್ರೇಟ್ ಬ್ರಿಟನ್‌ನ ಒಟ್ಟು 376 ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ಈ ಪೈಕಿ 201 ಅಥ್ಲೀಟ್‌ಗಳು ಮಹಿಳೆಯರಾಗಿದ್ದಾರೆ. ಇನ್ನು ಕೆನಡಾ ದೇಶದ ಪರಿಸ್ಥಿತಿ ಕೂಡಾ ಅದೇ ರೀತಿ ಇದೆ. ಕೆನಡಾದಿಂದ ಈ ಬಾರಿ 370 ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಪೈಕಿ 225 ಮಹಿಳಾ ಅಥ್ಲೀಟ್‌ಗಳಾದರೇ, 145 ಮಂದಿ ಪುರುಷ ಅಥ್ಲೀಟ್‌ಗಳಾಗಿದ್ದಾರೆ. ಬಲಿಷ್ಠ ಆಸ್ಟ್ರೇಲಿಯಾ ದೇಶವು ಒಟ್ಟು 471 ಅಥ್ಲೀಟ್‌ಗಳನ್ನು ಈ ಬಾರಿಯ ಒಲಿಂಪಿಕ್ಸ್‌ಗೆ ಕಳಿಸಿಕೊಟ್ಟಿದ್ದು, ಈ ಪೈಕಿ 252 ಮಹಿಳಾ ಹಾಗೂ 219 ಪುರುಷ ಅಥ್ಲೀಟ್‌ಗಳು ಕಾಂಗರೂ ತಂಡದಲ್ಲಿದ್ದಾರೆ. ರಷ್ಯನ್ ಒಲಿಂಪಿಕ್ಸ್ ಕಮಿಟಿಯ ಹೆಸರಿನ ರಷ್ಯಾವು ಒಟ್ಟು 329 ಅಥ್ಲೀಟ್‌ಗಳನ್ನು ಕಳಿಸಿಕೊಟ್ಟಿದ್ದು, ಈ ಪೈಕಿ 183 ಮಹಿಳಾ ಹಾಗೂ 146 ಪುರುಷ ಅಥ್ಲೀಟ್‌ಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಹಿಂದೆಂದಿಗಿಂತಲೂ ಅತಿಹೆಚ್ಚು ಅಥ್ಲೀಟ್‌ಗಳನ್ನು ಅಂದರೆ 127 ಕ್ರೀಡಾಪಟುಗಳನ್ನು ಒಲಿಂಪಿಕ್ಸ್‌ಗೆ ಕಳಿಸಿಕೊಡುತ್ತಿರುವ ಭಾರತ ತಂಡದಲ್ಲಿ ಈ ಬಾರಿ 71 ಪುರುಷ ಹಾಗೂ 56 ಮಹಿಳಾ ಅಥ್ಲೀಟ್‌ಗಳಿದ್ದಾರೆ. ಇನ್ನು ಟೋಕಿಯೋ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿರುವ ಜಪಾನ್‌ನಿಂದ 552 ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದು, ಈ ಪೈಕಿ 293 ಪುರುಷ ಹಾಗೂ 259 ಮಹಿಳಾ ಅಥ್ಲೀಟ್‌ಗಳಾಗಿದ್ದಾರೆ.