ಟೋಕಿಯೋ 2020: ಕ್ರೀಡಾ ಸಾಧಕರ ಜತೆ ಮೋದಿ ಮಾತುಕತೆಯಲ್ಲಿ ಸಿಕ್ಕ 8 ಅಂಶಗಳಿವು..!

* ಟೋಕಿಯೋ ಸಾಧಕರ ಜತೆ ಮುಕ್ತ ಸಮಾಲೋಚನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7 ಪದಕಗಳನ್ನು ಜಯಿಸಿದ ಭಾರತ

* ಗೆದ್ದ ಅಥ್ಲೀಟ್‌ಗಳ ಬೆನ್ನು ತಟ್ಟಿ, ಸೋತ ಅಥ್ಲೀಟ್‌ಗಳನ್ನು ಹುರಿದುಂಬಿಸಿ ಪ್ರಧಾನಿ ಮೋದಿ

8 major Points from PM Narendra Modi interaction with Tokyo Olympics contingent kvn

ನವದೆಹಲಿ(ಆ.18): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಒಟ್ಟು 7 ಪದಕಗಳನ್ನು ಗೆಲ್ಲುವುದರೊಂದಿಗೆ ಭಾರತ ಒಲಿಂಪಿಕ್ಸ್‌ನಲ್ಲಿ ಹಿಂದೆಂದಿಗಿಂತಲೂ ಗರಿಷ್ಠ ಪದಕ ಜಯಿಸಿದ ಸಾಧನೆ ಮಾಡಿದೆ. ಈ ಮೊದಲು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭಾರತ 6 ಪದಕಗಳನ್ನು ಜಯಿಸಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಒಂದು ಚಿನ್ನ, ಎರಡು ಬೆಳ್ಳಿ ಸೇರಿದಂತೆ ಒಟ್ಟು 7 ಪದಕಗಳನ್ನು ಜಯಿಸಿ ಉತ್ತಮ ಸಾಧನೆಯನ್ನೇ ತೋರಿದೆ.

ಅದರಲ್ಲೂ ವೇಟ್‌ಲಿಫ್ಟಿಂಗ್, ಹಾಕಿ ಹಾಗೂ ಜಾವಲಿನ್‌ ಥ್ರೋನಲ್ಲಿ ಭಾರತ ಪದಕಗಳ ಬೇಟೆಯಾಗಿದ್ದು ಹೆಚ್ಚು ಟಾಕ್‌ ಆಫ್‌ ದಿ ಟೌನ್ ಎನಿಸಿಕೊಂಡಿತು. ಮಹಿಳಾ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಪದಕಗಳ ಖಾತೆ ತೆರೆದರೆ, ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಪದಕದ ಬೇಟೆಯಾಡಿತು. ಇನ್ನು ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ನೀರಜ್ ಚೋಪ್ರಾ ಶತಮಾನಗಳ ಬಳಿಕ ಪದಕ ಗೆದ್ದುಕೊಟ್ಟು ಚಿನ್ನದ ಹುಡುಗ ಎನಿಸಿದರು.

ಟೋಕಿಯೋ ಒಲಿಂಪಿಕ್ಸ್‌ ಹೀರೋಗಳ ಜತೆ ಮನಬಿಚ್ಚಿ ಮಾತನಾಡಿದ ಪ್ರಧಾನಿ ಮೋದಿ

ಪದಕ ಗೆದ್ದು ತವರಿಗೆ ಆಗಮಿಸಿದ ಭಾರತದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಸ್ಪೂರ್ತಿಯ ಮಾತುಗಳನ್ನಾಡುವ ಮೂಲಕ ಹುರಿದುಂಬಿಸಿದ್ದಾರೆ. ಇನ್ನು ಅಥ್ಲೀಟ್‌ಗಳು ಪ್ರಧಾನಿ ಮೋದಿ ಜತೆ ಮುಕ್ತವಾಗಿ ಮಾತನಾಡುವ ಮೂಲಕ ಸಂತಸಪಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಕ್ಕಿದ್ದೇನು ಎನ್ನುವುದರ ಒಂದು ವಿಶ್ಲೇಷಣೆ ಇಲ್ಲಿದೆ ನೋಡಿ.

* ಈ ಸಮಾಲೋಚನೆಯಿಂದ ಅಥ್ಲೀಟ್‌ಗಳಲ್ಲಿ ಕ್ರೀಡೆಯ ಮೇಲಿನ ಪ್ರೀತಿ ಹಾಗೂ ಗೌರವ ಗಣನೀಯವಾಗಿ ಹೆಚ್ಚಳವಾಯಿತು. ಪ್ರಧಾನಿ ಮೋದಿ ಎಲ್ಲಾ ಕ್ರೀಡಾಪಟುಗಳ ಜತೆ ತೆರಳಿ ಅವರ ಅನುಭವಗಳಿಗೆ ಕಿವಿಯಾಗಿದ್ದು ಹೆಚ್ಚು ಪ್ರಶಂಸೆಗೆ ಪಾತ್ರವಾಯಿತು.

* ಕ್ರೀಡೆಯು ದೇಶದ ಜೋಶ್‌ ಹೆಚ್ಚಿಸುತ್ತದೆ ಎನ್ನುವುದು ಈ ಸಮಾಲೋಚನೆಯಿಂದ ಮತ್ತೊಮ್ಮೆ ಸಾಬೀತಾಯಿತು. 2016ರಲ್ಲಿ ಜಾರಿಗೆ ಬಂದ ಒಲಿಂಪಿಕ್ಸ್‌ ಟಾಸ್ಕ್‌ ಫೋರ್ಸ್(OTF) ನಿಂದ ದೇಶದಲ್ಲಿ ಕ್ರೀಡೆ ಅಭಿವೃದ್ದಿಯಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಗಳು ಆದವು. ಇದಷ್ಟೇ ಅಲ್ಲದೇ ಕ್ರೀಡೆಯತ್ತ ಯುವ ಜನತೆ ಒಲವು ಹೊಂದಲು ಕಾರಣವಾಯಿತು ಎನ್ನುವುದು ಅಥ್ಲೀಟ್‌ಗಳ ಮಾತಿನಿಂದ ತಿಳಿದುಬಂತು

* ಈ ಸಮಾಲೋಚನೆಯಲ್ಲಿ ಗಮನ ಸೆಳೆದ ಮತ್ತೊಂದು ಅಂಶವೆಂದರೆ ಪದಕ ಗೆಲ್ಲಲು ವಿಫಲವಾದ ಕ್ರೀಡಾಪಟುಗಳ ಮನಸ್ಥೈರ್ಯ ತುಂಬುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಪದಕ ಗೆಲ್ಲಲು ವಿಫಲವಾದ ಮಹಿಳಾ ಕುಸ್ತಿಪಟು ವಿನೇಶ್‌ ಪೋಗಾಟ್, ಕುಸ್ತಿ ಫೆಡರೇಷನ್‌ನಿಂದ ಶಿಸ್ತು ಕ್ರಮ ಎದುರಿಸುವ ಭೀತಿಯಲ್ಲಿದ್ದರೂ ಆಕೆಗೆ ಸಂಕಷ್ಟದ ಸಂದರ್ಭದಲ್ಲಿ ಬೆಂಬಲವಾಗಿ ನಿಲ್ಲಬೇಕು ಎನ್ನುವ ರೀತಿ ಮೋದಿ ಸಾಥ್‌ ನೀಡಿದ್ದಾರೆ.

* ಪ್ರಧಾನಿ ಮೋದಿ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನೀರಜ್ ಚೋಪ್ರಾ ಸಂಭ್ರಮಿಸಿದ ಕ್ಷಣ, ಹಾಕಿ ಗೋಲ್ ಕೀಪರ್‌ ಪಿ ಆರ್ ಶ್ರೀಜೇಶ್ ಗೋಲ್‌ ಪೋಸ್ಟ್‌ ಮೇಲೆ ಹತ್ತಿ ಕುಳಿತ ಕ್ಷಣ, ರವಿಕುಮಾರ್ ದಹಿಯಾ ಕೊನೆಯ ಕ್ಷಣದಲ್ಲಿ ಫೈನಲ್‌ಗೇರಲು ಹಾಕಿದ ಪಟ್ಟು, ಮುಂತಾದ ಕ್ಷಣಗಳ ಬಗ್ಗೆ ಮಾತನಾಡುವ ಮೂಲಕ ಹಲವು ಕ್ರೀಡಾಪಟುಗಳಿಗೆ ಹುರುಪು ತುಂಬಿದರು.

* ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದೇ ಒಂದು ದೊಡ್ಡ ಸಾಧನೆ. ಜಾಗತಿಕ ಕ್ರೀಡಾಜಾತ್ರೆಗೆ ಅರ್ಹತೆ ಪಡೆದು, ಅಲ್ಲಿ ದೇಶವನ್ನು ಪ್ರತಿನಿಧಿಸುವುದು ದೊಡ್ಡ ಸಾಧನೆಯೇ ಸರಿ. ಇನ್ನು ಅಲ್ಲಿ ಪದಕ ಗೆಲ್ಲುವುದು ಮತ್ತಷ್ಟು ಗೌರವದ ಸಂಗತಿಯಾಗಿದೆ. ಹೀಗಾಗಿ ಮುಂಬರುವ ಒಲಿಂಪಿಕ್ಸ್‌ನಲ್ಲೂ ಉತ್ತಮ ಪ್ರದರ್ಶನ ತೋರಿ ಎಂದು ಮೋದಿ ಶುಭ ಹಾರೈಸಿದ್ದಾರೆ.

* ಇದೇ ವೇಳೆ ಮೋದಿ ಅಥ್ಲೀಟ್ಸ್‌ಗಳಿಗೆ ಕ್ರೀಡಾ ಶಾಲೆಗಳನ್ನು ಪ್ರಚಾರ ಪಡಿಸಲು ಸಲಹೆಗಳನ್ನು ನೀಡಿದ್ದಾರೆ. ಮುಂಬರುವ ಎರಡು ವರ್ಷಗಳಲ್ಲಿ ಪ್ರತಿ ಅಥ್ಲೀಟ್ 75 ಶಾಲೆಗಳಿಗೆ ಭೇಟಿ ನೀಡಿ ಡಯೆಟ್‌ ಹಾಗೂ ಪೌಷ್ಟಿಕ ಆಹಾರಗಳ ಬಗ್ಗೆ ಅರಿವು ಮೂಡಿಸಿ ಎಂದು ಸಲಹೆ ನೀಡಿದ್ದಾರೆ. ಮಕ್ಕಳ ಜತೆ ಕನಿಷ್ಠ 10 ನಿಮಿಷ ಆಟವಾಡಿ. ಇದು ಮಕ್ಕಳಲ್ಲಿ ತಾವು ಕ್ರೀಡೆಯತ್ತ ಒಲವು ತೋರಲು ಸ್ಪೂರ್ತಿಯಾಗಲಿದೆ ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದ್ದಾರೆ.

*  ಇದೇ ವೇಳೆ ಪ್ರಧಾನಿ ಮೋದಿ ದೇಶದಲ್ಲಿ ಕ್ರೀಡೆಯನ್ನು ಮತ್ತಷ್ಟು ಸುಧಾರಿಸಲು ಸೂಕ್ತ ಸಲಹೆ ಹಾಗೂ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡಿ. ಮುಂದೆ ಕ್ರೀಡೆಯ ಅಭಿವೃದ್ದಿಯ ಕುರಿತಂತೆ ಯೋಜನೆ ರೂಪಿಸಲು ಸರ್ಕಾರಕ್ಕೆ ಇದು ನೆರವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios