ನವದೆಹಲಿ (ಅ. 28): ರಷ್ಯಾದ ಯೂರಿ ಗಗಾರಿನ್ ಜಗತ್ತಿನಲ್ಲೇ ಮೊದಲ ಬಾರಿ ಅಂತರಿಕ್ಷಕ್ಕೆ ತೆರಳಿದಾಗ ನಾನಿನ್ನೂ ವಿದ್ಯಾರ್ಥಿ. ಆತನ ಬಾಹ್ಯಾಕಾಶಯಾನದ ಬಗ್ಗೆ ಲೈಫ್ ಮ್ಯಾಗಜೀನ್‌ನಲ್ಲಿ ಬಂದ ಒಂದೊಂದು ಅಕ್ಷರವನ್ನೂ ಬಿಡದೇ ಓದಿದ್ದೆ.

ನಂತರ ನಾನು ಭಾರತೀಯ ವಾಯುಪಡೆಗೆ ಸೇರಿ ಯುದ್ಧ ವಿಮಾನಗಳ ಪೈಲಟ್ ಆದೆ. ಕೆಲ ವರ್ಷಗಳಲ್ಲಿ ನನ್ನ ಅದೃಷ್ಟಕ್ಕೆ ರಷ್ಯಾದ ಬಾಹ್ಯಾಕಾಶ ಕೇಂದ್ರದಿಂದ ಅಂತರಿಕ್ಷ ಯಾತ್ರೆಗೆ ಹೋಗುವ ಸಾಹಸಕ್ಕೆ ನಾನೇ ಆಯ್ಕೆಯಾದೆ. ಅಲ್ಲಿ ತರಬೇತಿ ಪಡೆದು ಬಾಹ್ಯಾಕಾಶಕ್ಕೆ ಹೋಗಿ ೮ ದಿನ ಇದ್ದು ಬಂದೆ. ಹಾಗೆ ಹೋಗಿಬಂದು ಈಗ ೩೪ ವರ್ಷಗಳಾಗಿವೆ. ಒಂದಲ್ಲಾ ಒಂದು ದಿನ ಭಾರತ ಕೂಡ ಅಂತರಿಕ್ಷಕ್ಕೆ ಮಾನವನನ್ನು ಕಳುಹಿಸುತ್ತದೆ ಎಂಬ ನನ್ನ ನಿರೀಕ್ಷೆಯೀಗ ನಿಜವಾಗುತ್ತಿದೆ.

2022 ರಲ್ಲಿ ಭಾರತ ತನ್ನ ಮೊದಲ ಮಾನವಸಹಿತ  ಅಂತರಿಕ್ಷಯಾನ ಕೈಗೊಂಡಿದೆ. ಇದು ನನಗೆ ಹೆಮ್ಮೆಯ ಸಂಗತಿ. ನಾನು ಬಾಹ್ಯಾಕಾಶಕ್ಕೆ ಹೋಗಿ ಬಂದ ಮೇಲೆ ಟೀವಿ ನೇರಪ್ರಸಾರದಲ್ಲಿ ಮಾತನಾಡುವಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಭಾರತವು ಅಂತರಿಕ್ಷದಿಂದ ಬೇರೆಲ್ಲಾ ದೇಶಗಳಿಗಿಂತ ಚೆನ್ನಾಗಿ ಕಾಣಿಸುತ್ತದೆ, ಸಾರೇ ಜಹಾಂ ಸೆ ಅಚ್ಛಾ ಎಂದು ಹೇಳಿದ್ದೆ. ಈಗ ಭಾರತದ ಮಾನವಸಹಿತ ಗಗನಯಾನ ಭಾರತೀಯರ ಮನೆ ಮನಗಳಲ್ಲಿ, ಯುವಕರ ಕಲ್ಪನಾ ಲೋಕದಲ್ಲಿ ಹೊಸ ಸ್ಫೂರ್ತಿಯ ಕಿಚ್ಚು ಹಚ್ಚಲಿದೆ.

ಇದೊಂದು ವ್ಯೆಹಾತ್ಮಕ ಹೆಜ್ಜೆ 2012 ರಲ್ಲಿ ಭಾರತದ ಮಾನವಸಹಿತ ಬಾಹ್ಯಾಕಾಶ ಯೋಜನೆಯ ಬಗ್ಗೆ ನಾನೊಂದು ದಾಖಲೆ ಸಿದ್ಧಪಡಿಸಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ಕ್ಕೆ ಕಳುಹಿಸಿದ್ದೆ. ಐದು ವರ್ಷದ ನಂತರ, ಅಂದರೆ ಕಳೆದ ವರ್ಷ, ನನ್ನನ್ನು ಆಂತರಿಕ ಸಭೆಯೊಂದಕ್ಕೆ ಕರೆದಿದ್ದರು. ಈ ವರ್ಷ 2022 ರಲ್ಲಿ ಭಾರತ ತನ್ನ ಮೊದಲ ಮಾನವಸಹಿತ ಅಂತರಿಕ್ಷಯಾನ ಕೈಗೊಳ್ಳಲಿದೆ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಘೋಷಿಸಿದರು. ನನಗೇನೂ ಇದು ಅಚ್ಚರಿಯ ವಿಷಯವಾಗಿರಲಿಲ್ಲ. ಏಕೆಂದರೆ ಮೊದಲೇ ನಾನಿದನ್ನು ನಿರೀಕ್ಷಿಸಿದ್ದೆ.

ಭಾರತದ ಮಾನವಸಹಿತ ಗಗನಯಾನದ ಸಾಧ್ಯತೆಗಳು ಬಿಡಿಬಿಡಿಯಾಗಿ ಈ ಹಿಂದೆಯೇ ಇದ್ದವು. ವಾಣಿಜ್ಯ ಉಪಗ್ರಹಗಳನ್ನು ಹಾರಿಸುವ ದೇಶವಾಗಿ ಹೊರಹೊಮ್ಮಿದ ನಂತರ ನಮ್ಮ ಮುಂದಿನ ಹೆಜ್ಜೆ ಮಾನವಸಹಿತ ಬಾಹ್ಯಾಕಾಶಯಾನವೇ ಆಗಿತ್ತು. ವಾಣಿಜ್ಯ ಉಪಗ್ರಹಗಳ ಉಡಾವಣೆಯಲ್ಲಿ ಇಸ್ರೋ ಈಗ ಪ್ರಾವೀಣ್ಯಸಾಧಿಸಿದೆ. ಸಾಮಾಜಿಕ ಹಾಗೂ ಆರ್ಥಿಕ ಉದ್ದೇಶಗಳಿಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂಬ ವಿಕ್ರಂ ಸಾರಾಭಾಯ್ ಅವರ ದೂರದೃಷ್ಟಿ ಸಾಕಾರಗೊಂಡಿದೆ.

ಬಾಹ್ಯಾಕಾಶ ಸಂಶೋಧನೆಗೆ ತೊಡಗಿಸಿದ ಬಂಡವಾಳವೀಗ ಲಾಭದ ರೂಪದಲ್ಲಿ ವಾಪಸ್ ಬರತೊಡಗಿದೆ. ಹೀಗಾಗಿ ಮತ್ತೊಂದು ದೊಡ್ಡ ಜಿಗಿತಕ್ಕೆ ಇಸ್ರೋ ಸಜ್ಜಾಗಿದೆ. ಇದೊಂದು ವ್ಯೆಹಾತ್ಮಕ ಹೆಜ್ಜೆ. ಮಾನವಸಹಿತ ಗಗನಯಾನ ಕೈಗೊಂಡ ನಂತರ ನಾವು ಪೂರ್ಣ ಪ್ರಮಾಣದ ಬಾಹ್ಯಾಕಾಶ ಸಂಶೋಧನೆ ಕೈಗೊಂಡ ದೇಶವಾಗುತ್ತೇವೆ. ಮುಂದಿನ ದಿನಗಳಲ್ಲಿ ಬಾಹ್ಯಾಕಾಶವನ್ನು ಬಳಸಿಕೊಳ್ಳುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಒಪ್ಪಂದಗಳು ಏರ್ಪಟ್ಟರೆ ಆಗ ನಮ್ಮ ಮಾತಿಗೆ ತೂಕವಿರುತ್ತದೆ.

ಪೈಲಟ್‌ಗಳನ್ನೇ ಏಕೆ ಅಂತರಿಕ್ಷಕ್ಕೆ ಕಳಿಸ್ತಾರೆ?

ವಾಯುಪಡೆ ಪೈಲಟ್‌ಗಳಿಗೆ ಬಾಹ್ಯಾಕಾಶಕ್ಕೆ ಅಥವಾ ಹೊಸ ವಾತಾವರಣಕ್ಕೆ ಬೇಗ ಹೊಂದಿಕೊಳ್ಳುವ ಸಾಮರ್ಥ್ಯವಿರುತ್ತದೆ. ಆದ್ದರಿಂದಲೇ ಬಾಹ್ಯಾಕಾಶ ಯಾನಕ್ಕೆ ವಾಯುಪಡೆ ಪೈಲಟ್‌ಗಳನ್ನು ಆಯ್ಕೆ ಮಾಡುತ್ತಾರೆ. ಸಾಮಾನ್ಯವಾಗಿ ಅಂತರಿಕ್ಷಯಾನಕ್ಕೆ ಮನುಷ್ಯನನ್ನು ಕರೆದೊಯ್ಯುವ ಹೆಚ್ಚಿನ ನೌಕೆಗಳು ಯುದ್ಧವಿಮಾನದ ಮುಂದುವರಿದ ಭಾಗದಂತೆ ಇರುತ್ತವೆ. ಅವುಗಳನ್ನು ಆಪರೇಟ್ ಮಾಡುವುದು ಮತ್ತು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ವಾಯುಪಡೆಯ ಟೆಸ್ಟ್ ಪೈಲಟ್‌ಗಳಿಗೆ ಸುಲಭವಾಗುತ್ತದೆ.

2022 ರ ಗಗನಯಾನಕ್ಕೆ ಬೆಂಗಳೂರಿನಲ್ಲಿರುವ ಏರೋಸ್ಪೇಸ್ ಮೆಡಿಸಿನ್ ಇನ್ಸ್ಟಿಟ್ಯೂಟ್ ಸುಮಾರು ೩೦ ಪೈಲಟ್‌ಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಿದೆ. ಇನ್ನು ನಾಲ್ಕೇ ವರ್ಷ ಸಮಯವಿರುವುದರಿಂದ ಪೈಲಟ್‌ಗಳ ಆಯ್ಕೆ ಹಾಗೂ ತರಬೇತಿ ತೀವ್ರಗತಿಯಲ್ಲಿ ನಡೆಯಬೇಕು. ಅಮೆರಿಕದ ನಾಸಾದವರಿಗೆ ಅಂತರಿಕ್ಷಯಾನ ಎಂಬುದೊಂದು ನಿರಂತರ ಪ್ರಕ್ರಿಯೆ. ಅಲ್ಲಿ ಗಗನಯಾನಕ್ಕೆ ತರಬೇತಿ ಪಡೆದ ಪೈಲಟ್‌ಗಳ ಪಡೆಯೇ ಇರುತ್ತದೆ. ಆದರೆ ನಮಗೆ ಹಾಗಲ್ಲ. ನಾವು ಪ್ರತ್ಯೇಕವಾಗಿ ಇದಕ್ಕೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.

ಒಮ್ಮೆ ಇದು ಆರಂಭವಾದ ನಂತರ ನಮ್ಮ ದೇಶದಲ್ಲೂ ಬಾಹ್ಯಾಕಾಶ ಯಾನ ನಿರಂತರ ಪ್ರಕ್ರಿಯೆಯಾಗಬೇಕು. ಅದರರ್ಥ, ಬಾಹ್ಯಾಕಾಶ ಸಂಶೋಧನೆಗೆ ನಿರಂತರವಾಗಿ ಸರ್ಕಾರದಿಂದ ಹಣ ಕೂಡ ಬರುತ್ತಿರಬೇಕು. ಇದೊಂದು ರಾಷ್ಟ್ರೀಯ ಯೋಜನೆ. ಈ ವಿಷಯದಲ್ಲಿ ನಮ್ಮ ಗುರಿಗೆ ಸ್ಪಷ್ಟತೆಯಿರಬೇಕು. ಅಂತರಿಕ್ಷ ಎಲ್ಲರಿಗೂ ಸೇರಿದ್ದು. ಆದರೆ... ಮಾನವಸಹಿತ ಗಗನಯಾನ ಕೈಗೊಳ್ಳುವುದೆಂದರೆ ವಿಶಿಷ್ಟ ತಂತ್ರಜ್ಞಾನವೊಂದನ್ನು ನಮ್ಮದಾಗಿಸಿಕೊಳ್ಳುವುದು. 

ಸಂಘರ್ಷಗಳಿಂದ ತುಂಬಿದ ಇಂದಿನ ಜಗತ್ತಿನಲ್ಲಿ ಈ ಶಕ್ತಿ ನಮಗೆ ಜಾಗತಿಕ ಮಟ್ಟದಲ್ಲಿ ಹೊಸತೊಂದು ರಾಜತಾಂತ್ರಿಕ ಸಾಮರ್ಥ್ಯವನ್ನು ನೀಡುತ್ತದೆ. ಅಭಿವೃದ್ಧಿಯಲ್ಲಿ ಹಿಂದುಳಿದ ದೇಶಗಳಿಗೆ ನೆರವು ನೀಡುವ ಅಥವಾ ಕಷ್ಟದಿಂದ ಹೊರಬರಲು ಆ ದೇಶಗಳಿಗೆ ಸಹಾಯ ಮಾಡುವ ಬೇರೆಯದೇ ರೀತಿಯ ಶಕ್ತಿ ನಮಗೆ ಪ್ರಾಪ್ತವಾಗುತ್ತದೆ.

ಇನ್ನು, ಜಗತ್ತು ಈಗಾಗಲೇ ಚಂದ್ರ ಹಾಗೂ ಮಂಗಳ ಗ್ರಹವನ್ನು ಮತ್ತೊಂದು ಭೂಮಿಯನ್ನಾಗಿ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಮಾನವಸಹಿತ ಗಗನಯಾನದೊಂದಿಗೆ ನಾವು ಕೂಡ ಅದಕ್ಕೆ ಸಿದ್ಧವಾಗಬಹುದು. ವಿಶ್ವಸಂಸ್ಥೆ ಈಗಾಗಲೇ ಅಂತರಿಕ್ಷ ಎಲ್ಲರಿಗೂ ಸೇರಿದ್ದು ಎಂದು ಹೇಳಿದೆ. ಆದರೂ, ಅಲ್ಲಿನ ಸಂಪತ್ತಿನ ಮೇಲೆ ಬೇರೆ ಬೇರೆ ದೇಶಗಳು ಹಕ್ಕು ಸಾಧಿಸುವ ಸಂದರ್ಭ ಬಂದರೆ ಆ ಸ್ಪರ್ಧೆಯಲ್ಲಿ ನಮಗೂ ಒಂದು ಧ್ವನಿ ಇರಬೇಡವೇ?

ಅದಕ್ಕೆಲ್ಲ ‘ಗಗನಯಾನ್-2022’ ಭೂಮಿಕೆಯಾಗಬಹುದು. ಅವರು ಹೋಗ್ಲಿ, ನಾವು ಆಮೇಲೆ ಎನ್ನುವಂತಿಲ್ಲ ನಮ್ಮದು ಬಡವರೇ ಹೆಚ್ಚಿರುವ ದೇಶ. ಬಡತನ ನಿರ್ಮೂಲನೆ ನಮಗೆ ಆದ್ಯತೆ ಯಾಗಬೇಕು. ಹಾಗಿರುವಾಗ ಅಂತರಿಕ್ಷಕ್ಕೆ ಮನುಷ್ಯನನ್ನು ಕಳುಹಿಸುವಂತಹ ನೂರಾರು ಕೋಟಿ ರು. ಯೋಜನೆಗಳು ಬೇಕಾ ಎಂದು ಕೇಳುವವರಿದ್ದಾರೆ. ನನ್ನನ್ನು ಕೇಳಿದರೆ ಬೇಕೇ ಬೇಕು. ನಮ್ಮ ದೇಶ ಇಂದು ಅತ್ಯಂತ ಕಡಿಮೆ ವೆಚ್ಚದಲ್ಲಿ ಅತಿಹೆಚ್ಚು ಪರಿಣಾಮಕಾರಿಯಾದ ಅಂತರಿಕ್ಷ ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಜಗತ್ತಿನಲ್ಲೇ ಪ್ರಸಿದ್ಧಿ ಪಡೆಯುತ್ತಿದೆ. ಬಾಹ್ಯಾಕಾಶ ಸಂಶೋಧನೆ ನಡೆಸುವ ಇತರ ದೇಶಗಳು ನಮ್ಮನ್ನು ಅಚ್ಚರಿಯಿಂದ ನೋಡುತ್ತಿವೆ.

ಜಗತ್ತಿನಲ್ಲಿ ತಂತ್ರಜ್ಞಾನ ಯಾವ ಪರಿಯ ನಾಗಾಲೋಟದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಅಂದರೆ, ಅವರೆಲ್ಲ ಮುಂದೆ ಹೋಗಲಿ ಆಮೇಲೆ ನಾವು ನಿಧಾನವಾಗಿ ಹಿಂದೆ ಹೋಗಿ ಸೇರಿಕೊಳ್ಳೋಣ ಎಂದು ಹೇಳುವಂತೆಯೇ ಇಲ್ಲ. ಮೊದಲು ಬಡತನ ನಿರ್ಮೂಲನೆ ಮಾಡಿ ಆಮೇಲೆ ಬಾಹ್ಯಾಕಾಶಕ್ಕೆ ಹೋಗುವ ಬಗ್ಗೆ ಯೋಚಿಸುತ್ತೇವೆ ಎಂಬುದು ತಪ್ಪು. ಪ್ರತಿಯೊಂದು ರಂಗದಲ್ಲಿಯೂ ಮುಂದೆ ಹೋಗುವುದಕ್ಕೆ ದಾರಿ ಹುಡುಕುತ್ತಲೇ ಇರಬೇಕು.

ಕೆಲ ದೇಶಗಳಲ್ಲಿ ಬಾಹ್ಯಾಕಾಶ ಸಂಶೋಧನೆಗೆ ತುಂಬಾ ಹಣ ಖರ್ಚು ಮಾಡುತ್ತಾರೆ. ಆದರೆ, ನಮ್ಮ ದೇಶದಲ್ಲಿ ಲಭ್ಯವಿರುವ ಸೀಮಿತ ಹಣದಲ್ಲೇ ಇಸ್ರೋ ಅತ್ಯಂತ ಅಮೂಲ್ಯ ಸಂಶೋಧನೆಗಳನ್ನು ಕೈಗೊಳ್ಳುತ್ತಿದೆ. ನಾವೇನು ಎಂಬುದನ್ನು ಜಗತ್ತಿಗೆ ತೋರಿಸಲು ಇದು ಸುವರ್ಣಾವಕಾಶ. ಹೊಸತನ್ನು ಮಾಡುವಾಗ ಹೊಸತಾಗಿಯೇ ಯೋಚಿಸಬೇಕಾಗುತ್ತದೆ. ಇಸ್ರೋ ಈಗಾಗಲೇ ಚಂದ್ರಯಾನ, ಮಂಗಳಯಾನಗಳನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಕೈಗೊಂಡಿದೆ.

ಈಗ ಗಗನಯಾನ್. ಯಶಸ್ವಿಯಾಗಿ ಅಂತರಿಕ್ಷಕ್ಕೆ ಹೋಗಿ ವಾಪಸ್ ಬರುವ ಭಾರತೀಯ ಗಗನಯಾತ್ರಿಗಳ ಮೇಲೆ ನನ್ನ ಕಣ್ಣು ನೆಟ್ಟಿದೆ!

-ರಾಕೇಶ್ ಶರ್ಮಾ , ಭಾರತದ ಪ್ರಥಮ ಅಂತರಿಕ್ಷ ಯಾತ್ರಿ