ವಾಟ್ಸಪ್ ಬಳಕೆದಾರರು ಜಾಗರೂಕರಾಗಿರುವಂತೆ ಸೆಕ್ಯೂರಿಟಿ ತಜ್ಞರು ಎಚ್ಚರಿಸಿದ್ದಾರೆ. ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತರುವಂತಹ ಬಗ್‌ವೊಂದು ವಾಟ್ಸಪ್‌ನಲ್ಲಿ ಪತ್ತೆಯಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. 

ಬಳಕೆದಾರರ ಚಾಟ್ಸ್‌ಗಳಿಗೆ ಸಂಪರ್ಕ ಪಡೆಯಲು ಆ ಬಗ್ ಹ್ಯಾಕರ್ಸ್‌ಗೆ ಅನುಕೂಲ ಮಾಡಿಕೊಡುತ್ತದೆ ಎಂದು, ಈ ಬಗ್‌ಅನ್ನು ಪತ್ತೆ ಹಚ್ಚಿದ್ದ ಗೂಗಲ್‌ನ ಪ್ರಾಜೆಕ್ಟ್ ಝೀರೋ ಟೀಂ ಹೇಳಿದೆ.

iOS ಬಳಕೆದಾರರಿಗೆ ಕೂಡಾ ಅಪಾಯ ತಪ್ಪಿದ್ದಲ್ಲ. ಹಾಗಾಗಿ, ಬಗ್ ಸಮಸ್ಯೆ ಪರಿಹರಿಸಲು ಆ್ಯಪಲ್‌ನ ಲೇಟೆಸ್ಟ್ iOS ಅಪ್ಡೇಟನ್ನು ಡೌನ್‌ಲೋಡ್ ಮಾಡಿಕೊಳ್ಳಲು ಗೂಗಲ್ ಟೀಂ ಸಲಹೆ ನೀಡಿದೆ.  ಅಷ್ಟೇ ಅಲ್ಲ, ಸಂಶಯಾಸ್ಪದ ವೆಬ್‌ಸೈಟ್ ಅಥವಾ ಮೇಲ್‌ಅನ್ನು ತೆರೆಯುವ ಮುಂಚೆ ಜಾಗರೂಕರಾಗಿರಲು ಸೂಚಿಸಿದೆ.  

ಇದನ್ನೂ ಓದಿ | ಶೀಘ್ರದಲ್ಲೇ WhatsApp ಹೊಸ ನಿಯಮ; ಇಂಥವರ ಅಕೌಂಟ್‌ ನಿಷೇಧ!

ಗೂಗಲ್ ಟೀಂನ ಇಯಾನ್ ಬೀರ್ ಪ್ರಕಾರ, ಹ್ಯಾಕರ್ಸ್ ಬಗ್ ಮೂಲಕ ಬಳಕೆದಾರರ ಚಾಟ್‌ಗೆ ಸಂಪರ್ಕ ಪಡೆದು, ಸಂದೇಶಗಳನ್ನು ತಮ್ಮ ಸರ್ವರ್‌ಗೆ ರವಾನಿಸುತ್ತಾರೆ. ಬಳಕೆದಾರರ ಚಾಟ್‌ಗಳಷ್ಟೇ ಅಲ್ಲ, ಮೀಡಿಯಾ ಫೈಲ್‌ಗಳನ್ನು ಕೂಡಾ ಕದಿಯುವ ಸಾಧ್ಯತೆಗಳಿವೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸಪ್ ವಕ್ತಾರ, ಬಗ್ ಬಗ್ಗೆ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಅಂತಹ ಯಾವುದೇ ಬಗ್ ನಮ್ಮ ಬಳಕೆದಾರರಿಗೆ ತೊಂದರೆಯುಂಟು ಮಾಡಿಲ್ಲವೆಂದಿದ್ದಾರೆ. ಅದಾಗ್ಯೂ, ಬಳಕೆದಾರರು ಲೇಟೆಸ್ಟ್ ಸೆಕ್ಯೂರಿಟಿ ಅಪ್ಡೇಟ್ಸ್ ಹಾಗೂ ಫೋನ್ ಕಂಪನಿಗಳ ಸೂಚನೆಯನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.