ನವದೆಹಲಿ[ಏ.25]: ಸಾಮಾಜಿಕ ಜಾಲತಾಣಗಳಲ್ಲಿ ಯಾರು ಯಾರದೋ ವಾಟ್ಸ್ಯಾಪ್‌ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಹರಿದಾಡುವುದನ್ನು ನೀವು ನೋಡಿರುತ್ತೀರಿ. ಖಾಸಗಿ ಸಂದೇಶಗಳು ಹೀಗೆ ಬಹಿರಂಗವಾಗಿ ಮುಜುಗರಪಡಿಸುವುದೂ ಉಂಟು. ಅದಕ್ಕಿಂತ ಹೆಚ್ಚಾಗಿ ಇಂಥ ಸ್ಕ್ರೀನ್‌ ಶಾಟ್‌ಗಳು ಮುಂದೆಂದೋ ದಿನ ದುರ್ಬಳಕೆ ಆಗುವ ಸಾಧ್ಯತೆಯೂ ಇಲ್ಲದಿಲ್ಲ.

ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಟ್ಸ್ಯಾಪ್‌ ಹೊಸದೊಂದು ಫೀಚರನ್ನು ಜಾರಿಗೆ ತರಲು ಯೋಚಿಸಿದೆ. ಈ ಹೊಸ ಫೀಚರ್‌ ಅಳವಡಿಕೆಯಾದ ನಂತರ ನೀವು ವಾಟ್ಸ್ಯಾಪ್‌ ಚಾಟ್‌ಗಳನ್ನು ಸ್ಕ್ರೀನ್‌ ಶಾಟ್‌ ಮಾಡಿಕೊಳ್ಳುವಂತಿಲ್ಲ.

ಚಾಟ್‌ಗಳನ್ನು ನೋಡಲು ಫಿಂಗರ್‌ಪ್ರಿಂಟ್‌ ಬಳಸಲೇಬೇಕಾದ ಫೀಚರ್‌ ಒಂದನ್ನು ಅಳವಡಿಸುವ ನಿಟ್ಟಿನಲ್ಲೂ ವಾಟ್ಸ್ಯಾಪ್‌ ಚಿಂತನೆ ನಡೆಸಿದೆ. ಅದೇನಾದರೂ ಜಾರಿಗೆ ಬಂದರೆ ಮತ್ತೊಬ್ಬರು ನಿಮ್ಮ ವಾಟ್ಸಪ್‌ ಸಂದೇಶಗಳನ್ನು ನೋಡುವುದಕ್ಕೂ ಸಾಧ್ಯವಿಲ್ಲ. ಐ ಫೋನ್‌ನಲ್ಲಿ ಈಗಾಗಲೇ ಈ ಫಿಂಗರ್‌ ಪ್ರಿಂಟ್‌ ಅಥವಾ ಫೋಟೋ ಐಡಿ ಜಾರಿಯಲ್ಲಿದೆ. ಆಂಡ್ರಾಯ್ಡ್‌ ಫೋನುಗಳಲ್ಲೂ ಇದೇನಾದರೂ ಜಾರಿಗೆ ಬಂದರೆ ಅದರ ಜೊತೆಗೇ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಲಾಗದ ಫೀಚರ್‌ ಕೂಡ ಬರಲಿದೆ.

ಫಿಂಗರ್‌ಪ್ರಿಂಟ್‌ ಸೆಕ್ಯುರಿಟಿಯ ಜೊತೆ ವಾಟ್ಸ್ಯಾಪ್‌ ಯಾಕೆ ಸ್ಕ್ರೀನ್‌ಶಾಟ್‌ಗಳಿಗೆ ಕಡಿವಾಣ ಹಾಕಿದೆ ಎಂದು ಗೊತ್ತಾಗುತ್ತಿಲ್ಲ ಎಂದು ಈ ಹೊಸ ಆವೃತ್ತಿಯನ್ನು ಪರಿಶೀಲಿಸಿದ ವಾಬೆಟಾಲ್‌ಇಸ್ಫೋ ಪ್ರಶ್ನಿಸಿದೆ. ಆದರೆ ಫಿಂಗರ್‌ಪ್ರಿಂಟ್‌ ಸೆಕ್ಯುರಿಟಿ ಇದ್ದಾಗ್ಯೂ ನೋಟಿಫಿಕೇಶನ್‌ ವಾಲ್‌ನಿಂದಲೇ ನೀವು ಸಂದೇಶಗಳಿಗೆ ಉತ್ತರಿಸಬಹುದಾಗಿದೆ. ಆದರೆ ಸ್ಕ್ರೀನ್‌ಶಾಟ್‌ ತೆಗೆಯುವುದನ್ನು ನಿಷೇಧಿಸಲಾಗಿದೆ.

ಅಂದಹಾಗೆ ಈ ಹೊಸ ಫೀಚರ್‌ ಬರುವುದಕ್ಕೆ ಇನ್ನೂ ಸಮಯವಿದೆ. ಆ್ಯಂಡ್ರಾಯ್ಡ್‌ ಬೀಟಾ ವರ್ಸನ್‌ 2.19.106 ಹೊಸ ಅಪ್‌ಡೇಟ್‌ನೊಂದಿಗೆ ದೊರೆಯಲಿದ್ದು ಇದರಲ್ಲಿ ಮೇಲೆ ಹೇಳಿದ ಫೀಚರ್‌ ಸಿಕ್ಕಲಿದೆ.

ಹಿಂದೆ ಬಳಕೆದಾರರ ಗೌಪ್ಯತೆ ಕಾಪಾಡುವ, ಸುಳ್ಳು ಸುದ್ದಿಗಳು ಹರಿದಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಫೇಸ್‌ಬುಕ್‌ ಒಡೆತನದ ಈ ಚಾಟಿಂಗ್‌ ಆ್ಯಪ್‌ ಹಲವು ಮಾರ್ಗೋಪಾಯಗಳನ್ನು ಕಂಡುಕೊಂಡಿತ್ತು. ಅವುಗಳೆಲ್ಲಾ ಈಗಾಗಲೇ ಬಳಕೆದಾರರಿಗೆ ಸಿಕ್ಕುತ್ತಿವೆ ಕೂಡ.

ಇದರ ಬಗ್ಗೆ ಈಗಾಗಲೇ ವಾಬೆಟಾಲ್‌ಇಸ್ಫೋ ಪ್ರಶ್ನೆ ಮಾಡಿರುವ ಹಿನ್ನೆಲೆಯಲ್ಲಿ ಸಾಕಷ್ಟುಚರ್ಚೆಗಳು ನಡೆದು ಸ್ಕ್ರೀನ್‌ಶಾಟ್‌ ನಿಷೇಧ, ಬಳಕೆದಾರರ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಬೇರೆ ಯಾವ ಮಾರ್ಗೋಪಾಯಗಳನ್ನು ಬಳಸಬಹುದು ಎನ್ನುವ ನಿರ್ಧಾರಕ್ಕೆ ವಾಟ್ಸಪ್‌ ಬರುವ ಸಾಧ್ಯತೆ ಇದೆ.